Advertisement

ಇನ್ನು ದೆಹಲಿ ಕಸರತ್ತು:ನಾಳೆ ಬಿಜೆಪಿ,ಮಂಗಳವಾರ ಕೈ ಅಭ್ಯರ್ಥಿಗಳ ಆಯ್ಕೆ

12:30 AM Mar 17, 2019 | Team Udayavani |

ಬೆಂಗಳೂರು : ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮೂರೂ ಪಕ್ಷಗಳು ಇನ್ನೂ ಕಸರತ್ತಿನಲ್ಲಿ ತೊಡಗಿವೆ. ರಾಜ್ಯದಲ್ಲಿ ಮಾ. 19ರಂದು ಮೊದಲ ಹಂತದ ಚುನಾವಣೆಗೆ ಅಧಿಸೂಚನೆ ಹೊರ ಬೀಳಲಿದ್ದು, ಆ ವೇಳೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಾಗಿರುವುದರಿಂದ ಮೂರೂ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಬಿಜೆಪಿ ಕೋರ್‌ ಕಮಿಟಿ ಸಭೆ ರವಿವಾರ (ಮಾ. 18) ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚಿಸಿ ಅಂತಿಮ ಪಟ್ಟಿ ಕೇಂದ್ರ ಚುನಾವಣ ಸಮಿತಿಗೆ ಕಳುಹಿಸಲಾಗುವುದು. ಸೋಮವಾರ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಅಲ್ಲಿ ಅಂತಿಮವಾಗಿ ಅಭ್ಯರ್ಥಿಗಳ ಆಯ್ಕೆಯಾಗುವ ಸಾಧ್ಯತೆಯಿದೆ.

Advertisement

ಕೋರ್‌ ಕಮಿಟಿಗೂ ಮುಂಚೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಶನಿವಾರ ಕೂಡ ಹಲವು ನಾಯಕರ ಜತೆ ದಿನವಿಡೀ ಸಮಾಲೋಚನೆ ನಡೆಸಿದರು. ಹಿರಿಯ ನಾಯಕ ಎಸ್‌.ಎಂ. ಕೃಷ್ಣ ಅವರ ನಿವಾಸಕ್ಕೂ ಭೇಟಿ ನೀಡಿ ಸಲಹೆ ಸೂಚನೆ ಪಡೆದರು. ಈ ಮಧ್ಯೆ, ಮಾಜಿ ಸಚಿವ ಕೆ.ಬಿ. ಶಾಣಪ್ಪ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದು, ಪಕ್ಷದ ನಾಯಕರ ವರ್ತನೆಯಿಂದ ಬೇಸತ್ತು ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಎಐಸಿಸಿ ಚುನಾವಣ ಸಮಿತಿ ಮಾ. 19ಕ್ಕೆ ಮುಂದೂಡಿಕೆ ಯಾಗಿರುವುದರಿಂದ ರಾಜ್ಯ ಕಾಂಗ್ರೆಸ್‌ ನಾಯಕರು ದಿಲ್ಲಿ ಯತ್ತ ಮುಖ ಮಾಡಿ ಕುಳಿತಿದ್ದಾರೆ. ಈ ಮಧ್ಯೆ, ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕ್ಷೇತ್ರಗಳಲ್ಲಿ ಸ್ಥಳೀಯ ಕಾಂಗ್ರೆಸ್‌ ನಾಯಕರ ವಿರೋಧವೂ ಮುಂದುವರಿದಿದೆ. ಮತ್ತೂಂದೆಡೆ ಹಾಲಿ ಸಂಸದರ ವಿರುದ್ಧ ಜನರ ಆಕ್ರೋಶ ಇರುವುದರಿಂದ ಬದಲಾವಣೆ ಮಾಡಬೇಕು ಎಂಬ ಬೇಡಿಕೆಯೂ ಇದೆ.

ತುಮಕೂರಿಗಾಗಿ ಶತ ಪ್ರಯತ್ನ
ತುಮಕೂರು ಕ್ಷೇತ್ರ ಮತ್ತೆ ಪಡೆಯಲು ಹಾಲಿ ಸಂಸದ ಮುದ್ದಹನುಮೇಗೌಡ ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ತುಮಕೂರು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಪಕ್ಷೇತರ ಅಭ್ಯರ್ಥಿ ಯಾಗಿ ಕಣಕ್ಕಿಳಿಯುವುದಾಗಿ ಕೆ.ಎನ್‌. ರಾಜಣ್ಣ ಹಠ ಹಿಡಿದು ಕುಳಿತಿದ್ದಾರೆ. ಹಾಸನದಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಪ್ರಜ್ವಲ್‌ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಚಿವ ಎಂ. ಮಂಜು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮಾಧಾನಿಸುವ ಯತ್ನವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದರು. ಹಾಸನದ ಮುಖಂಡರ ನಿಯೋಗವೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿತು. ಕೋಲಾರ ಸಂಸದ ಕೆ.ಎಚ್‌. ಮುನಿಯಪ್ಪ ವಿರುದ್ಧ ವಿರೋಧಿ ಅಲೆ ಇದ್ದು ಅವರಿಗೆ ಕಾರಣಕ್ಕೂ ಟಿಕೆಟ್‌ ನೀಡಬಾರದು ಎಂದು ಶಾಸಕರು ದಿಲ್ಲಿಯಲ್ಲಿಯೇ ಮೊಕ್ಕಾಂ ಹೂಡಿ ಎಐಸಿಸಿ ನಾಯಕರ ಭೇಟಿಯಲ್ಲಿ ನಿರತರಾಗಿದ್ದಾರೆ.

ಮೂಡದ ಸ್ಪಷ್ಟತೆ
ಜೆಡಿಎಸ್‌ನಲ್ಲಿ ಐದು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಸರತ್ತು ಇನ್ನೂ ಮುಂದುವರಿದಿದ್ದು ದೇವೇಗೌಡರು ಸ್ಪರ್ಧೆ ಮಾಡಲಿರುವ ಕ್ಷೇತ್ರದ ಬಗ್ಗೆಯೂ ಸ್ಪಷ್ಟತೆ ಮೂಡಿಲ್ಲ. ತುಮಕೂರು ಕ್ಷೇತ್ರದಿಂದ ದೇವೇಗೌಡರು ಸ್ಪರ್ಧೆ ಮಾಡಲಿದ್ದು, ಬೆಂಗಳೂರು ಕ್ಷೇತ್ರಕ್ಕೆ ನಿವೃತ್ತ ನ್ಯಾಣ ಗೋಪಾಲಗೌಡ ಅವರ ಹೆಸರು ಪರಿಶೀಲನೆಯಲ್ಲಿದೆ. ಮುದ್ದಹನುಮೇಗೌಡರೇ ತುಮಕೂರು ಅಥವಾ ಬೆಂಗಳೂರು ಉತ್ತರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಲಿದ್ದಾರೆ ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ. ದೇವೇಗೌಡರು ಕಾಂಗ್ರೆಸ್‌ ನಾಯಕರ ಜತೆ ಚರ್ಚಿಸಿದ ಅನಂತರವಷ್ಟೇ ಇತರ ಕ್ಷೇತ್ರಗಳ ಅಭ್ಯರ್ಥಿ ಕುರಿತಂತೆ ಸ್ಪಷ್ಟತೆ ಸಿಗಲಿದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ. ರವಿವಾರ ಅಥವಾ ಸೋಮವಾರ ರಾಜ್ಯ ಕಾಂಗ್ರೆಸ್‌ ನಾಯಕರ ಜತೆ ಸಮಾಲೋಚನೆ ನಡೆಸಿದ ಬಳಿಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

Advertisement

ಮಾ.19ಕ್ಕೆ ಕೈ ಪಟ್ಟಿ ಬಿಡುಗಡೆ
ದಿಲ್ಲಿಯಲ್ಲಿ ಮಾ. 19ರಂದು ಕಾಂಗ್ರೆಸ್‌ ಕೇಂದ್ರೀಯ ಸಮಿತಿ ಸಭೆ ನಡೆಯಲಿದೆ. ಅಂದು ಅಲ್ಲಿಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ. ರಾಹುಲ್‌ಗೆ ರಾಜ್ಯದಿಂದ ಸ್ಪರ್ಧಿಸಲು ಆಹ್ವಾನ ನೀಡಲಾಗಿದೆ ಎಂದರು.

ಮಂಡ್ಯ ಗಲಾಟೆ ಜೋರು
ನನ್ನ ರಾಜಕೀಯ ನಿರ್ಧಾರವನ್ನು ಸೋಮವಾರ ಪ್ರಕಟ ಮಾಡುತ್ತೇನೆ ಎಂದು ಸುಮಲತಾ ಅಂಬರೀಷ್‌ ಹೇಳಿದ್ದಾರೆ. ಕೆ.ಆರ್‌. ನಗರ ಸುತ್ತಮುತ್ತ ರೋಡ್‌ಶೋ ನಡೆಸಿದ ಅವರು, ಜೆಡಿಎಸ್‌ನವರಿಗೆ ನನ್ನ ಕಂಡರೆ ಏಕೆ ಭಯ ಎಂದೂ ಪ್ರಶ್ನಿಸಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್‌ ಶಾಸಕರು, ಮೂವರು ಸಚಿವರು, ಮೂವರು ವಿಧಾನ ಪರಿಷತ್‌ ಸದಸ್ಯರು ಸೇರಿದಂತೆ ರಾಜ್ಯ ಸರಕಾರ ಕೂಡ ಅವರದ್ದೇ ಇದೆ ಎಂದರು. ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರಿಗೆ ಸಚಿವರೊಬ್ಬರು ಮೈತ್ರಿ ಧರ್ಮ ಪಾಲಿಸುವಂತೆ ಎಚ್ಚರಿಕೆ ನೀಡುವ ಪರಿಸ್ಥಿತಿ ಏಕೆ ಬಂದಿದೆ ಎಂದು ಪರೋಕ್ಷವಾಗಿ ಸಚಿವ ಸಾ.ರಾ.ಮಹೇಶ್‌ ಅವರಿಗೆ ಟಾಂಗ್‌ ನೀಡಿದರು.

ಮೈಸೂರಿನಲ್ಲಿ ಮಾತನಾಡಿದ ಸಾ.ರಾ.ಮಹೇಶ್‌, ಮೈತ್ರಿಧರ್ಮ ಪಾಲಿಸುವಂತೆ ಕಾಂಗ್ರೆಸ್‌ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಮಂಡ್ಯದಲ್ಲಿ ನೀವು ಕೈ ಹಿಡಿದರೆ, ನಾವು ಮೈಸೂರಿನಲ್ಲಿ ಬೆಂಬಲಿಸುತ್ತೇವೆ ಎಂಬ ಎಚ್ಚರಿಕೆ ಯನ್ನೂ ನೀಡಿದ್ದಾರೆ. ಅಂಬರೀಷ್‌ ಅವರೇ ರಾಜಕಾರಣ ಬೇಡ ಎಂದ ಮೇಲೆ ನಿಖೀಲ್‌ ಅವರ ವಿರುದ್ಧ ನೀವೇಕೆ ಸ್ಪರ್ಧೆ ಮಾಡುತ್ತಿದ್ದೀರಾ ಎಂಬುದನ್ನು ಯೋಚಿಸಿ ಎಂದು ಸುಮಲತಾರಿಗೆ ಟಾಂಗ್‌ ನೀಡಿದ್ದಾರೆ.

ಜೆಡಿಎಸ್‌ನಲ್ಲಿ ಮೂಡದ ಸ್ಪಷ್ಟತೆ
ಜೆಡಿಎಸ್‌ನಲ್ಲಿ ಐದು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಸರತ್ತು ಇನ್ನೂ ಮುಂದುವರಿದಿದ್ದು ದೇವೇಗೌಡರು ಸ್ಪರ್ಧೆ ಮಾಡಲಿರುವ ಕ್ಷೇತ್ರದ ಬಗ್ಗೆಯೂ ಸ್ಪಷ್ಟತೆ ಮೂಡಿಲ್ಲ. ತುಮಕೂರು ಕ್ಷೇತ್ರದಿಂದ ದೇವೇಗೌಡರು ಸ್ಪರ್ಧೆ ಮಾಡಲಿದ್ದು, ಬೆಂಗಳೂರು ಕ್ಷೇತ್ರಕ್ಕೆ ನಿವೃತ್ತ ನ್ಯಾ.ಗೋಪಾಲಗೌಡ ಅವರ ಹೆಸರು ಪರಿಶೀಲನೆಯಲ್ಲಿದೆ. ಮುದ್ದಹನುಮೇಗೌಡರೇ ತುಮಕೂರು ಅಥವಾ ಬೆಂಗಳೂರು ಉತ್ತರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಲಿ ದ್ದಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿವೆ. ಆದರೆ, ಯಾವುದೂ ಅಧಿಕೃತವಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹಾಸನ, ಮಂಡ್ಯ, ಶಿವಮೊಗ್ಗ ಹೊರತುಪಡಿಸಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಮಾಡಬೇಕಿದ್ದು ದೇವೇಗೌಡರು ಕಾಂಗ್ರೆಸ್‌ ನಾಯಕರ ಜತೆ ಚರ್ಚಿಸಿದ ನಂತರವಷ್ಟೇ ಸ್ಪಷ್ಟತೆ ಸಿಗಲಿದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ. ತುಮಕೂರು ಬಿಟ್ಟುಕೊಡಬೇಕಾದರೆ ಮೈಸೂರು ಅಥವಾ ಚಿಕ್ಕಬಳ್ಳಾಪುರ ನಮಗೆ ಕೊಡಿ ಎಂದು ಜೆಡಿಎಸ್‌ ಬೇಡಿಕೆ ಇಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next