ನವದೆಹಲಿ: ದೆಹಲಿ ವಿಶೇಷ ಪೊಲೀಸ್ ಪಡೆ ಹಾಗೂ ಮುಂಬೈಯ ಭಯೋತ್ಪಾದನ ನಿಗ್ರಹ ದಳ(ಎಟಿಎಸ್)ದ ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು ಹದಿನೆಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಿಷೇಧಿತ ಸಿಮಿ(ಇಸ್ಲಾಮಿಸ್ಟ್ ಟೆರರ್ ಗ್ರೂಪ್ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ)ಯ ಉಗ್ರ ಸೆರೆಯಾಗಿರುವುದಾಗಿ ವರದಿ ತಿಳಿಸಿದೆ.
ಸಿಮಿ ಉಗ್ರ ಇಲ್ಯಾಸ್ ದೆಹಲಿ ಹಾಗೂ ಮಹಾರಾಷ್ಟ್ರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬ್ದುಲ್ ಸುಭಾನ್ ಖುರೇಷಿಯ ಸಂಬಂಧಿ. ಪ್ರಸ್ತುತ ಅಬ್ದುಲ್ 2018ರಿಂದ ದೆಹಲಿ ಪೊಲೀಸರ ವಶದಲ್ಲಿದ್ದಾನೆ.
ಇಂಡಿಯನ್ ಮುಜಾಹಿದೀನ್ ಅನ್ನು 2010ರ ಜೂನ್ 4ರಂದು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲಾಗಿತ್ತು. ನಂತರ ಸರ್ಕಾರ ನಿಷೇಧಿಸಿತ್ತು. ಇಲ್ಯಾಸ್ ಅಡಗಿರುವ ಸ್ಥಳದ ಬಗ್ಗೆ ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಆಧಾರದ ಮೇಲೆ ಮುಂಬೈ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಗುರುವಾರ ದೆಹಲಿಗೆ ಆಗಮಿಸಿದ್ದರು.
ನಂತರ ದೆಹಲಿ ವಿಶೇಷ ಪೊಲೀಸ್ ಪಡೆ ಹಾಗೂ ಮುಂಬೈ ಎಟಿಎಸ್ ತಂಡ ದೆಹಲಿಯ ಶಾಹೀನ್ ಬಾಗ್ ಪ್ರದೇಶದ ಮೇಲೆ ಜಂಟಿಯಾಗಿ ಶುಕ್ರವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ಉಗ್ರ ಇಲ್ಯಾಸ್ ನನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಇಲ್ಯಾಸ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಇಲ್ಯಾಸ್ ನನ್ನು ಮೂರು ದಿನಗಳ ಕಾಲ ಎಟಿಎಸ್ ವಶಕ್ಕೊಪ್ಪಿಸಿದೆ. ಮುಂಬೈಗೆ ಕರೆತಂದು ಮುಂದಿನ ವಿಚಾರಣೆ ನಡೆಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.