ಹೊಸದಿಲ್ಲಿ: ರೇಪ್ ಆರೋಪದಲ್ಲಿ ಮತ್ತೊಬ್ಬ ಸ್ವಯಂ ಘೋಷಿತ ದೇವ ಮಾನವನನ್ನು ಪೊಲೀಸರು ಬಂಧಿಸಿದ್ದಾರೆ. ಅಶು ಮಹಾರಾಜ್ ಎಂಬಾತನನ್ನು ಮಹಿಳೆ ಮತ್ತು ಆಕೆಯ ಅಪ್ರಾಪ್ತ ವಯಸ್ಕ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.
ದೆಹಲಿಯಲ್ಲಿ ಹೌಝ್ ಖಾಸ್ ಆಶ್ರಮ ನಡೆಸುತ್ತಿದ್ದ ಬಂಧಿತ ಅಶು ಮಹಾರಾಜ್ ವಿರುದ್ಧ ಹಲವು ಸಾಕ್ಷಾಧಾರಗಳು ಲಭಿಸಿದ ಹಿನ್ನಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ಪುತ್ರ ಸಮರ್ ಖಾನ್ ಮೇಲೂ ರೇಪ್ ಆರೋಪ ಕೇಳಿ ಬಂದಿದೆ ಆದರೆ ಇದುವರೆಗೆ ಆತನ ಬಂಧನವಾಗಿಲ್ಲ.
2008 ರಿಂದ 2013 ರ ವರೆಗೆ ನನ್ನ ಮೇಲೆ ಅಶು ಮಹಾರಾಜ್, ಆತನ ಪುತ್ರ ಮತ್ತು ಸ್ನೇಹಿತರು ಹಲವರು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ ಮಾತ್ರವಲ್ಲದೆ ನನ್ನ ಅಪ್ರಾಪ್ತ ವಯಸ್ಕ ಮಗಳ ಮೇಲೂ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
ಹೌಝ್ ಖಾಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಹೆಚ್ಚಿನ ತನಿಖೆಗಾಗಿ ಹಸ್ತಾಂತರಿಸಲಾಗಿದೆ.