Advertisement

84ರ ಸ್ಥಿತಿ ಮರಳಲು ಬಿಡೆವು : ದಿಲ್ಲಿ ಹಿಂಸಾಚಾರ ಕುರಿತು ಹೈಕೋರ್ಟ್‌ ಖಡಕ್‌ ಮಾತು

11:14 AM Feb 27, 2020 | Hari Prasad |

ಹೊಸದಿಲ್ಲಿ: ‘ಈ ದೇಶದಲ್ಲಿ ಮತ್ತೂಂದು 1984ರ ಮಾದರಿ ಘಟನೆ ನಡೆಯಲು ನಾವು ಬಿಡುವುದಿಲ್ಲ.’ ಹೀಗೆಂದು ಖಡಕ್ಕಾಗಿ ಹೇಳಿರುವುದು ದಿಲ್ಲಿ ಹೈಕೋರ್ಟ್‌. ದಿಲ್ಲಿ ಹಿಂಸಾಚಾರ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಎಸ್‌. ಮುರಳೀಧರ್‌, ರಾಜಧಾನಿ ದಿಲ್ಲಿಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಹಾಗೂ ದಿಲ್ಲಿ ಸರಕಾರಗಳು ಕೈಜೋಡಿಸಿಕೊಂಡು ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.

Advertisement

ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ಅವರೇ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, “ಕಪಿಲ್‌ ಮಿಶ್ರಾ ಅವರ ಹೇಳಿಕೆಯ ವೀಡಿಯೋ ನೋಡಿದ್ದೀರಾ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹಾಗೂ ದಿಲ್ಲಿ ಡಿಸಿಪಿ ರಾಜೇಶ್‌ ದೇವ್‌ ಅವರನ್ನು ಕೋರ್ಟ್‌ ಪ್ರಶ್ನಿಸಿತು. ಅದಕ್ಕೆ ಅವರು, ನಾವು ಅಂಥ ವೀಡಿಯೋ ವೀಕ್ಷಿಸಿಲ್ಲ ಎಂದರು.

ಇದರಿಂದ ಅಸಮಾಧಾನಗೊಂಡ ನ್ಯಾ| ಮುರಳೀಧರ್‌, “ದಿಲ್ಲಿ ಪೊಲೀಸರ ವರ್ತನೆ ನೋಡಿದರೆ ನನಗೆ ನಿಜಕ್ಕೂ ಅಚ್ಚರಿಯಾಗುತ್ತಿದೆ’ ಎಂದು ಹೇಳಿದ್ದಲ್ಲದೇ, ಕೋರ್ಟ್‌ ಕೊಠಡಿಯೊಳಗೇ ಕಪಿಲ್‌ ಮಿಶ್ರಾರ ಪ್ರಚೋದನಕಾರಿ ಹೇಳಿಕೆಯಿರುವ ವೀಡಿಯೋವನ್ನು ಪ್ಲೇ ಮಾಡುವಂತೆ ಸೂಚಿಸಿದರು. ಜತೆಗೆ, “ನಮ್ಮ ಕಣ್ಣೆದುರೇ ಮತ್ತೂಂದು 1984ರ ರೀತಿಯ ಘಟನೆ ನಡೆಯಲು ನಾವು ಬಿಡಲ್ಲ’ ಎಂದೂ ಹೇಳಿದರು. 1984ರಲ್ಲಿ ನಡೆದ ಸಿಖ್‌ ವಿರೋಧಿ ದಂಗೆಯನ್ನು ಪ್ರಸ್ತಾಪಿಸಿ ನ್ಯಾಯಮೂರ್ತಿಗಳು ಈ ಮಾತುಗಳನ್ನಾಡಿದ್ದು, ಅಂದಿನ ದಂಗೆಯ ವೇಳೆ ದಿಲ್ಲಿಯೊಂದರಲ್ಲೇ 3 ಸಾವಿರ ಮಂದಿ ಬಲಿಯಾಗಿದ್ದರು.

ಇದಕ್ಕೂ ಮುನ್ನ, ಗಲಭೆಗೆ ಸಂಬಂಧಿಸಿದ ಅರ್ಜಿಯ ತುರ್ತು ವಿಚಾರಣೆಯನ್ನು ಮಂಗಳವಾರ ರಾತ್ರೋರಾತ್ರಿ ನಡೆಸಿದ್ದ ನ್ಯಾ| ಮುರಳೀಧರ್‌, “ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಪೊಲೀಸರು ಸಕಲ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸೂಚಿಸಿದ್ದರು. ಅದರಂತೆ, ನಡೆದುಕೊಂಡ ಪೊಲೀಸರ ಬಗ್ಗೆ ಬುಧವಾರ ಮಧ್ಯಾಹ್ನ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಿಂದ ಶಾಂತಿ ಯಾತ್ರೆ: ಹಿಂಸಾಚಾರ ಖಂಡಿಸಿ ಹಾಗೂ ಶಾಂತಿ ಕಾಪಾಡುವಂತೆ ಮನವಿ ಮಾಡಿ ಕಾಂಗ್ರೆಸ್‌ ನಾಯಕರು ಬುಧವಾರ ಎಐಸಿಸಿ ಪ್ರಧಾನ ಕಚೇರಿಯಿಂದ ಗಾಂಧಿ ಸ್ಮತಿವರೆಗೆ ಪಾದಯಾತ್ರೆ ನಡೆಸಿದರು. ಈ ವೇಳೆ ಪೊಲೀಸರು ಅವರನ್ನು ಅರ್ಧದಲ್ಲೇ ತಡೆದು ವಾಪಸ್‌ ಕಳುಹಿಸಿದರು.

Advertisement

ಪಕ್ಷದ ನಾಯಕಿ ಪ್ರಿಯಾಂಕಾ ವಾದ್ರಾ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಮುಕುಲ್‌ ವಾಸ್ನಿಕ್‌, ಕೆಸಿ ವೇಣುಗೋಪಾಲ್‌, ರಣದೀಪ್‌ ಸುಜೇìವಾಲ, ರಾಜೀವ್‌ ಗೌಡ, ಮಣಿಶಂಕರ್‌ ಅಯ್ಯರ್‌, ಸುಶ್ಮಿತಾ ದೇವ್‌ ಮತ್ತಿತರ ನಾಯಕರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಪ್ರಿಯಾಂಕಾ, “ದೇಶಾದ್ಯಂತದ ಜನರು ಉದ್ಯೋಗ ಅರಸಿಕೊಂಡು ದಿಲ್ಲಿಗೆ ಬರುತ್ತಿದ್ದರು. ಅಂಥ ದಿಲ್ಲಿಯನ್ನು ಕೇಂದ್ರ ಸರಕಾರ ಈಗ ನಾಶ ಮಾಡಿದೆ. ಶಾಂತಿ ಕಾಪಾಡುವಲ್ಲಿ ವಿಫ‌ಲವಾದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ. ಜತೆಗೆ, ಶಾಂತಿ ಮತ್ತು ಸಾಮರಸ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದೂ ಹೇಳಿದ್ದಾರೆ.

ದಿಲ್ಲಿ ಗಲಭೆ ರಾಜಕೀಯ: ಒಂದೆಡೆ, ದಿಲ್ಲಿಯು ಹಿಂಸಾಚಾರದಿಂದ ನಲುಗಿದ್ದರೆ, ಮತ್ತೂಂದೆಡೆ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. 22 ಮಂದಿಯನ್ನು ಬಲಿತೆಗೆದುಕೊಂಡ ಗಲಭೆಗೆ ಕೇಂದ್ರ ಸರಕಾರ ಹಾಗೂ ದಿಲ್ಲಿ ಸರಕಾರವೇ ಕಾರಣ ಎಂದು ಕಾಂಗ್ರೆಸ್‌ ಆರೋಪಿಸಿದರೆ, ಕಾಂಗ್ರೆಸ್‌ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಬುಧವಾರ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ಸೇರಿ, ಗಲಭೆ ಕುರಿತು ಚರ್ಚಿಸಿದೆ. ಅನಂತರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಅವರೇ ಸ್ವತಃ ಸುದ್ದಿಗೋಷ್ಠಿ ನಡೆಸಿ, “ದಿಲ್ಲಿಯಲ್ಲಿನ ಗಲಭೆ ಹಿಂದೆ ವ್ಯವಸ್ಥಿತ ಷಡ್ಯಂತ್ರ ಅಡಗಿದೆ. ಗಲಭೆಯನ್ನು ಹತ್ತಿಕ್ಕುವಲ್ಲಿ ವಿಫ‌ಲವಾದ ಹೊಣೆಯನ್ನು ಕೇಂದ್ರ ಸರಕಾರ, ವಿಶೇಷವಾಗಿ ಗೃಹ ಸಚಿವ ಅಮಿತ್‌ ಶಾ ಅವರು ಹೊರಬೇಕು ಮತ್ತು ಅವರು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಜತೆಗೆ, ದಿಲ್ಲಿಯ ಜನತೆ ದ್ವೇಷದ ರಾಜಕೀಯವನ್ನು ತಿರಸ್ಕರಿಸಬೇಕು ಮತ್ತು ಈ ನಾಚಿಕೆಗೇಡಿನ ಘಟನೆಗಳಿಂದ ಮುರಿದುಹೋಗಿರುವ ಮನಸ್ಸುಗಳನ್ನು ಒಂದಾಗಿಸಲು ಯತ್ನಿಸಬೇಕು ಎಂದೂ ಕರೆ ನೀಡಿದ್ದಾರೆ. ಇದೇ ವೇಳೆ, ಸಿಎಂ ಕೇಜ್ರಿವಾಲ್‌ ವಿರುದ್ಧವೂ ವಾಗ್ಧಾಳಿ ನಡೆಸಿದ ಅವರು, ದಿಲ್ಲಿ ಹೊತ್ತಿ ಉರಿಯುತ್ತಿದ್ದರೂ, ಜನರ ಬಳಿ ತೆರಳಿ ಶಾಂತಿ ಕಾಪಾಡುವಂತೆ ನೋಡಿಕೊಳ್ಳುವಲ್ಲಿ ಸರಕಾರ ವಿಫ‌ಲವಾಗಿದೆ ಎಂದು ದೂರಿದ್ದಾರೆ.

ಕೀಳು ರಾಜಕೀಯ: ಸೋನಿಯಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಸೋನಿಯಾ ಗಾಂಧಿ ಅವರು ಹಿಂಸಾಚಾರದ ವಿಚಾರಲ್ಲಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಯಾರ ಕೈಗಳು ಅಮಾಯಕ ಸಿಖ್ಖರ ರಕ್ತದಿಂದ ತೋಯ್ದು ಹೋಗಿದೆಯೋ, ಅವರು ಈಗ ಹಿಂಸಾಚಾರವನ್ನು ನಿಯಂತ್ರಿಸುವ ಮಾತುಗಳನ್ನಾಡುತ್ತಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.

ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಮಾತನಾಡಿ, ಹಿಂಸಾಚಾರವು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಕೆಲಸ ಮಾಡಬೇಕಿದೆ. ಪರಸ್ಪರ ಆರೋಪ – ಪ್ರತ್ಯಾರೋಪ ಮಾಡಿಕೊಳ್ಳುವ ಬದಲು ಶಾಂತಿ ಕಾಪಾಡಲು ಎಲ್ಲರೂ ಸಹಕರಿಸಬೇಕಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next