“ಹೊಸದಿಲ್ಲಿಯಲ್ಲಿ ನಡೆಯಬೇಕಿದ್ದ ವಿಶ್ವಕಪ್ ಶೂಟಿಂಗ್ ಟೂರ್ನಿಯನ್ನು ಮುಂದೂಡಲಾಗಿದೆ. ಒಲಿಂಪಿಕ್ಸ್‌ಗೂ ಮೊದಲು ಕೂಟ ನಡೆಸಲಾಗುತ್ತದೆ. ಶೀಘ್ರದಲ್ಲೇ ಮುಂದಿನ ದಿನಾಂಕ ಪ್ರಕಟಿಸಲಾಗುವುದು’ ಎಂದು ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
Advertisement
ಮಾ. 15ರಿಂದ 25ರ ತನಕ ಹೊಸದಿಲ್ಲಿಯ “ಡಾ| ಕರ್ಣಿ ಸಿಂಗ್ ಶೂಟಿಂಗ್ ರೇಂಜ್’ನಲ್ಲಿ ವಿಶ್ವಕಪ್ ಶೂಟಿಂಗ್ ಆಯೋಜಿಸಲಾಗಿತ್ತು. ವಿವಿಧ ದೇಶದ ಸ್ಪರ್ಧಿಗಳು ಭಾಗವಹಿಸಬೇಕಿತ್ತು. ಕೊರೊನಾ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕೆಲವು ದೇಶಗಳು ಕೂಟದಿಂದ ಹಿಂದೆ ಸರಿದವು. ಮತ್ತೆ ಕೆಲವು ಕ್ರೀಡಾ ಪಟುಗಳ ವೀಸಾ ರದ್ದಾಯಿತು. ಈ ಎಲ್ಲ ಕಾರಣಗಳಿಂದ ಕೂಟವನ್ನೇ ಮುಂದೂಡಲು ಅಂತಾರಾಷ್ಟ್ರೀಯ ಶೂಟಿಂಗ್ ಒಕ್ಕೂಟ (ಐಎಸ್‌ಎಸ್‌ಎಫ್) ನಿರ್ಧರಿಸಿದೆ. ಮೂಲಗಳ ಪ್ರಕಾರ ಒಟ್ಟು 22 ರಾಷ್ಟ್ರಗಳು ಕೂಟದಿಂದ ಹಿಂದಕ್ಕೆ ಸರಿದಿವೆ ಎನ್ನಲಾಗಿದೆ.
ಶೂಟಿಂಗ್ ರದ್ದು
ಜಪಾನಿನ ಟೋಕಿಯೊದಲ್ಲಿ ಎ. 16ರಿಂದ ನಡೆಯಬೇಕಿದ್ದ ಒಲಿಂಪಿಕ್ಸ್ ಅರ್ಹತಾ ಶೂಟಿಂಗ್ ಕೂಟವನ್ನು ಕೂಡ ಕೊರೊನಾ ಹಿನ್ನೆಲೆಯಲ್ಲಿ ರದ್ದು ಮಾಡಲು ಅಂತಾರಾಷ್ಟ್ರೀಯ ಶೂಟಿಂಗ್ ಒಕ್ಕೂಟ ನಿರ್ಧರಿಸಿದೆ. “ಕೊರೊನಾದಿಂದ ವಿಶ್ವಾದ್ಯಂತ 3 ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾ ಗಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕಿದೆ ಎಂದು ವರದಿಯಾಗಿದೆ. ಇಂತಹ ವಿಷಮ ಸಂದರ್ಭದಲ್ಲಿ ಕೂಟವನ್ನು ನಡೆಸಲಾಗದು’ ಎಂದು ಐಎಸ್‌ಎಸ್‌ಎಫ್ ತಿಳಿಸಿದೆ.
Related Articles
ನೇಪಾಲದಲ್ಲಿ ನಡೆಯಬೇಕಿದ್ದ ಟಿ20 ಕ್ರಿಕೆಟ್ ಕೂಟವನ್ನು ತಾತ್ಕಾಲಿ ಕವಾಗಿ ರದ್ದು ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಈ ಕೂಟದಲ್ಲಿ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್, ನೇಪಾಲದ ತಾರಾ ಕ್ರಿಕೆಟಿಗ ಸಂದೀಪ್ ಲಮಿಶಾನೆ ಮೊದಲಾದವರು ಪಾಲ್ಗೊಳ್ಳಬೇಕಿತ್ತು. ಕೊರೊನಾ ಹಿನ್ನೆಲೆಯಲ್ಲಿ ಕೂಟವನ್ನು ಮುಂದೂಡಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.
Advertisement
ಕೊರೊನಾ ಎದುರಿಸಲು ಸಜ್ಜು: ಗಂಗೂಲಿಕೋಲ್ಕತಾ: ಕೊರೊನಾ ಐಪಿಎಲ್ ಮೇಲೆ ಪರಿಣಾಮ ಬೀರದು. ಕೂಟ ನಿಗದಿಯಂತೆ ನಡೆಯಲಿದೆ ಎಂಬುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಶಾವಾದ ವ್ಯಕ್ತಪಡಿಸಿದ್ದಾರೆ. “ಸದ್ಯದಲ್ಲೇ ಇಂಗ್ಲೆಂಡ್ ತಂಡ ಶ್ರೀಲಂಕಾಕ್ಕೆ, ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಆಗಮಿಸಲಿವೆ. ಯಾವುದೇ ಸಮಸ್ಯೆ ಇಲ್ಲ. ಕೊರೊನಾವನ್ನು ಎದುರಿಸಲು ನಾವೆಲ್ಲ ತಯಾರಾಗಿದ್ದೇವೆ’ ಎಂದು ಗಂಗೂಲಿ ಹೇಳಿದರು. ಭಾರತೀಯ ಕ್ರೀಡಾಪಟುಗಳ ಆಶಾವಾದ
ಕೊರೊನಾ ಭಾರತ ಸೇರಿದಂತೆ ವಿಶ್ವದ ಎಲ್ಲ ಕ್ರೀಡಾಪಟುಗಳ ಒಲಿಂಪಿಕ್ಸ್ ತಯಾರಿಗೆ ಅಡ್ಡಿಯಾಗಿ ಪರಿಣಮಿಸಿದೆ. ಆದರೂ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಕೋಚ್ ಪುಲ್ಲೇಲ ಗೋಪಿಚಂದ್, ಕುಸ್ತಿಪಟು ಭಜರಂಗ್ ಪುನಿಯ ಮೊದಲಾದವರೆಲ್ಲ ಒಲಿಂಪಿಕ್ಸ್ ಅರ್ಹತಾ ಸುತ್ತುಗಳ ಸ್ಪರ್ಧೆ ನಡೆಯುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ. “ಬ್ಯಾಡ್ಮಿಂಟನ್ ತಾರೆಯರಿಗೆ ಒಲಿಂಪಿಕ್ಸ್ ಅರ್ಹತೆ ಪಡೆದುಕೊಳ್ಳಲು ಸಮಸ್ಯೆಯಾಗಿದೆ. ಆದರೆ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ರದ್ದಾಗಿಲ್ಲ. ಇಲ್ಲಿ ಅವಕಾಶವಿದೆ’ ಎಂದು ಸಿಂಧು ಹೇಳಿದ್ದಾರೆ. “ಒಲಿಂಪಿಕ್ಸ್ ತಯಾರಿ ಬಹಳ ಕಷ್ಟವಾಗಿದೆ’ ಎಂದು ಭಜರಂಗ್ ಪುನಿಯ ಹೇಳಿದ್ದಾರೆ. “ಒಲಿಂಪಿಕ್ಸ್ 4 ವರ್ಷಕ್ಕೊಮ್ಮೆ ಬರುತ್ತದೆ. ಇದರಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸು. ಆದರೆ ಕೊರೊನಾದಿಂದಾಗಿ ಹಿನ್ನಡೆಯಾಗಿದೆ. ಆದರೂ ಕ್ರೀಡಾಪಟುಗಳ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕಿದೆ’ ಎಂದು ಗೋಪಿಚಂದ್ ಹೇಳಿದರು.