Advertisement

ಸಾರ್ವಭೌಮತೆಗೆ ಧಕ್ಕೆ ತರಲು ಚೀನಾ ಫಂಡ್‌- “NewsClick” ವಿರುದ್ಧ ದೆಹಲಿ ಪೊಲೀಸರ ಆರೋಪ

10:24 PM Oct 06, 2023 | Pranav MS |

ನವದೆಹಲಿ: ದೇಶದ ಸಾರ್ವಭೌಮತೆ ಹಾಗೂ ಏಕತೆಗೆ ಧಕ್ಕೆ ತರಲು ಹಾಗೂ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲು ದೊಡ್ಡ ಮೊತ್ತದ ಅನುದಾನವು ಚೀನಾದಿಂದ ಆನ್‌ಲೈನ್‌ ನ್ಯೂಸ್‌ ಪೋರ್ಟಲ್‌ ನ್ಯೂಸ್‌ ಕ್ಲಿಕ್‌ಗೆ ಹರಿದುಬಂದಿದೆ ಎಂದು ದೆಹಲಿ ಪೊಲೀಸರು ದಾಖಲಿಸಿರುವ ಎಫ್ಐಆರ್‌ನಲ್ಲಿ ಉಲ್ಲೇಖೀಸಲಾಗಿದೆ.

Advertisement

2019 ಲೋಕಸಭೆ ಚುನಾವಣೆ ವೇಳೆ ಚುನಾವಣೆ ಪ್ರಕ್ರಿಯೆಯನ್ನು ಹಾಳುಗೆಡವಲು ಪೀಪಲ್ಸ್‌ ಅಲಯನ್ಸ್‌ ಫಾರ್‌ ಡೆಮಾಕ್ರಸಿ ಆ್ಯಂಡ್‌ ಸೆಕ್ಯೂಲಾರಿಸಮ್‌(ಪಿಎಡಿಎಸ್‌) ಗುಂಪಿನೊಂದಿಗೆ ನ್ಯೂಸ್‌ ಕ್ಲಿಕ್‌ ಸಂಸ್ಥಾಪಕ ಕಬೀರ್‌ ಪುರಕಾಯಸ್ಥ ಸೇರಿಕೊಂಡು ಪಿತೂರಿ ನಡೆಸಿದ್ದರು. ಅಲ್ಲದೇ ಇದ್ದಕ್ಕೆ ಕಮ್ಯೂನಿಸ್ಟ್‌ ಪಾರ್ಟಿ ಆಫ್ ಚೀನಾದ ಪ್ರಚಾರ ವಿಭಾಗದ ಸಕ್ರಿಯ ಸದಸ್ಯ ನೊವಿಲೆ ರಾಯ್‌ ಸಿಂಘಮ್‌ ಅಕ್ರಮವಾಗಿ ವಿತ್ತೀಯ ನೆರವು ನೀಡಿದ್ದರು. ಚೀನಾದ ಕೆಲವು ಕಂಪನಿಗಳ ಮೂಲಕ ಈ ಹಣವನ್ನು ಪಾವತಿ ಮಾಡಲಾಗಿತ್ತು ಎಂದು ಎಫ್ಐಆರ್‌ನಲ್ಲಿ ಆರೋಪಿಸಲಾಗಿದೆ.

ಪ್ರತಿಕ್ರಿಯೆ ಸಲ್ಲಿಸಿ:
ಇನ್ನೊಂದೆಡೆ, ಭಯೋತ್ಪಾದನೆ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆ(ಯುಎಪಿಎ)ಯಡಿ ತಮ್ಮ ಬಂಧನ ಪ್ರಶ್ನಿಸಿ ನ್ಯೂಸ್‌ ಕ್ಲಿಕ್‌ ಸಂಸ್ಥಾಪಕ ಕಬೀರ್‌ ಪುರಕಾಯಸ್ಥ ಹಾಗೂ ಸಂಸ್ಥೆಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಅಮಿತ್‌ ಚಕ್ರವರ್ತಿ ಸಲ್ಲಿಸಿರುವ ಅರ್ಜಿಗಳ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ದೆಹಲಿ ಹೈಕೋರ್ಟ್‌ ಶುಕ್ರವಾರ ಸೂಚಿಸಿದೆ.

ಇದೇ ವೇಳೆ, ಮಧ್ಯಂತರ ಬಿಡುಗಡೆ ಕೋರಿ ಬಂಧಿತರು ಸಲ್ಲಿಸಿರುವ ಅರ್ಜಿಗಳ ಸಂಬಂಧ ಕೂಡ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾ. ತುಶಾರ್‌ ರಾವ್‌ ಗೆಡೆಲಾ ಅವರಿದ್ದ ನ್ಯಾಯಪೀಠವು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿತು. ಮುಂದಿನ ವಿಚಾರಣೆ ಅ.9ಕ್ಕೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next