ಹೊಸದಿಲ್ಲಿ: ಮುಸ್ಲಿಂ ಮಹಿಳೆಯರ ಫೋಟೊಗಳನ್ನು ಹರಾಜು ಮಾಡುವ ಬುಲ್ಲಿ ಬಾಯ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂನ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ದಿಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
“ದಿಲ್ಲಿ ಪೊಲೀಸರ ವಿಶೇಷ ತನಿಖಾ ತಂಡದ ಅಧಿಕಾರಿಗಳು ಅಸ್ಸಾಂನಲ್ಲಿ ನೀರಜ್ ಬಿಷ್ಣೋಯ್ ಎಂಬಾತನನ್ನು ಸೆರೆಹಿಡಿದ್ದಾರೆ. ಈತ ಈ ಬುಲ್ಲಿ ಬಾಯ್ ಆ್ಯಪ್ ನ ರಚನೆಕಾರ ಮತ್ತು ಸೂತ್ರದಾರ” ಎಂದು ಐಎಫ್ಎಸ್ಒ ನ ಡಿಸಿಪಿ ಕೆ.ಪಿ.ಎಸ್ ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ.
ಆರೋಪಿಯು ಭೋಪಾಲ್ ನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ. ಆತನ ಊರಾದ ಅಸ್ಸಾಂನ ಜೊರ್ಹಟ್ ನಲ್ಲಿ ಬಂಧಿಸಿ, ದಿಲ್ಲಿಗೆ ಕರೆತೆರಲಾಗಿದೆ.
ಇದನ್ನೂ ಓದಿ:ಅಫ್ಘಾನ್ ನಲ್ಲಿ ಆತ್ಮಹತ್ಯಾ ಬಾಂಬರ್ಸ್ ಇನ್ಮುಂದೆ ಮಿಲಿಟರಿಯ ಅವಿಭಾಜ್ಯ ಅಂಗ: ತಾಲಿಬಾನ್
ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ದನಿಯೆತ್ತಿರುವ ಪ್ರಮುಖ ಮುಸ್ಲಿಂ ಮಹಿಳಾ ಪತ್ರಕರ್ತರು, ವಕೀಲರು ಮತ್ತು ಹೋರಾಟಗಾರರ ಚಿತ್ರಗಳನ್ನು ಅಸಹ್ಯಕರ ಹರಾಜಿನಲ್ಲಿ ಹಾಕುವ ಆ್ಯಪ್ ಬಗ್ಗೆ ಕೇಂದ್ರ ಸಚಿವರು ಕೆಲದಿನಗಳ ಹಿಂದೆ ಮಾಹಿತಿ ನೀಡಿದ್ದರು. ಕೋಲಾಹಲ ಎಬ್ಬಿಸಿದ ಪ್ರಕರಣದಲ್ಲಿ ಇದು ನಾಲ್ಕನೇ ಬಂಧನವಾಗಿದೆ.
ಮುಂಬೈ ಪೊಲೀಸರ ಸೈಬರ್ ಸೆಲ್ ಈ ಹಿಂದೆ ಮೂವರನ್ನು ಬಂಧಿಸಿತ್ತು. 21 ವರ್ಷದ ವಿದ್ಯಾರ್ಥಿ ಮಯಾಂಕ್ ರಾವಲ್, 19 ವರ್ಷದ ಶ್ವೇತಾ ಸಿಂಗ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ ಝಾ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಈ ಪ್ರಕರಣದ ಮಾಸ್ಟರ್ ಮೈಂಡ್ ಶ್ವೇತಾ ಸಿಂಗ್ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.