ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ಮೆಟ್ರೋದ ನಿಲ್ದಾಣಗಳಲ್ಲಿ ಮತ್ತು ಕೋಚ್‌ಗಳಲ್ಲಿ ಅರವಿಂದ್ ಕೇಜ್ರಿವಾಲ್ ವಿರೋಧಿ ಬರಹವನ್ನು ಬರೆದ ಆರೋಪದ ಮೇಲೆ ಉತ್ತರ ಪ್ರದೇಶದ ಬರೇಲಿಯ 33 ವರ್ಷದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸಂದೇಶಗಳನ್ನು ಬರೆದು ಫೋಟೋಗಳನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಅಂಕಿತ್ ಗೋಯೆಲ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸೋಮವಾರ, ದೆಹಲಿ ಮುಖ್ಯಮಂತ್ರಿಯನ್ನು ಗುರಿಯಾಗಿಸಿಕೊಂಡು ಗೀಚುಬರಹದ ಹಲವಾರು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆಮ್ ಆದ್ಮಿ ಪಕ್ಷದಿಂದ ತೀವ್ರ ಖಂಡನೆ ವ್ಯಕ್ತವಾಗಿತ್ತು.
ಬರೇಲಿಯ ಸರಕಾರಿ ಬ್ಯಾಂಕ್‌ನಲ್ಲಿ ಲೋನ್ ಮ್ಯಾನೇಜರ್ ಆಗಿರುವ ಗೋಯೆಲ್ ಅವರು ದೆಹಲಿಗೆ ಬಂದು ಸಂದೇಶಗಳನ್ನು ಬರೆದು ತಮ್ಮ ಊರಿಗೆ ಮರಳಿದ್ದರು. ಅವರು ಮೊದಲು ಆಮ್ ಆದ್ಮಿ ಪಕ್ಷದ ಬೆಂಬಲಿಗರಾಗಿದ್ದರು, ಆದರೆ ಪಕ್ಷದಲ್ಲಿನ “ಇತ್ತೀಚಿನ ಬೆಳವಣಿಗೆಗಳಿಂದ” ಅವರು ಅಸಮಾಧಾನಗೊಂಡಿರುವುದಾಗಿ ಹೇಳಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಮೆಟ್ರೋ ರೈಲುಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಬರೆಯಲಾದ ಸಂದೇಶಗಳನ್ನು “ankit.goel_91” ಎಂಬ Instagram ಖಾತೆ ಮೂಲಕ ಹಂಚಿಕೊಳ್ಳಲಾಗಿತ್ತು.