ಹೊಸದಿಲ್ಲಿ: ದೆಹಲಿ ಪೊಲೀಸರು ಅಲ್ ಖೈದಾ ಉಗ್ರ ಜಾಲ ಭೇದಿಸಿದ್ದು, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ರಾಜಸ್ಥಾನದಿಂದ 14 ಮಂದಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ.
ಗುಪ್ತಚರ ಮಾಹಿತಿ ಆಧರಿಸಿ ಆಯಾ ರಾಜ್ಯಗಳ ಪೊಲೀಸ್ ಪಡೆಗಳೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು, ಜಾಲದ ನೇತೃತ್ವವನ್ನು ರಾಂಚಿ (ಜಾರ್ಖಂಡ್)ಯ ಡಾ. ಇಶ್ತಿಯಾಕ್ ವಹಿಸಿದ್ದ. ‘ಖಿಲಾಫತ್’ ಘೋಷಿಸಲು ಮತ್ತು ದೇಶದೊಳಗೆ ಭಾರೀ ಉಗ್ರ ಚಟುವಟಿಕೆಗಳನ್ನು ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ಸಿದ್ಧವಾಗಿದ್ದರು ಎಂದು ದೆಹಲಿ ಪೊಲೀಸ್ ಹೇಳಿಕೆ ತಿಳಿಸಿದೆ.
ಉಗ್ರ ಘಟಕದ ಸದಸ್ಯರಿಗೆ ವಿವಿಧ ಸ್ಥಳಗಳಲ್ಲಿ ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವುದು ಸೇರಿದಂತೆ ತರಬೇತಿ ನೀಡಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಶಸ್ತ್ರಾಸ್ತ್ರಗಳನ್ನು ನಿರ್ವಹಿಸಲು ತರಬೇತಿ ಪಡೆಯುತ್ತಿದ್ದ ಆರು ಮಂದಿ ರಾಜಸ್ಥಾನದ ಭಿವಾಡಿಯಿಂದ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಿಂದ ಎಂಟು ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಪೊಲೀಸ್ ಹೇಳಿಕೆ ತಿಳಿಸಿದೆ.
ವಶಕ್ಕೆ ಪಡೆದವರ ವಿಚಾರಣೆ ನಡೆಸಲಾಗುತ್ತಿದ್ದು, ಇನ್ನಷ್ಟು ಜನರನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ. ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.