ನವದೆಹಲಿ: ಪಿಜ್ಜಾ ಸರಬರಾಜು ಮಾಡುವ 19 ವರ್ಷದ ಏಜೆಂಟ್ ಗೆ ಕೋವಿಡ್ 19 ವೈರಸ್ ತಗುಲಿರುವುದು ದಕ್ಷಿಣ ದಿಲ್ಲಿಯಲ್ಲಿ ಪತ್ತೆಯಾಗಿದ್ದು, ಇದರ ಪರಿಣಾಮವಾಗಿ 70ಕ್ಕೂ ಅಧಿಕ ಕುಟುಂಬಗಳಲ್ಲಿ ಆತಂಕ ಮನೆ ಮಾಡಿದೆ ಎಂದು ವರದಿ ತಿಳಿಸಿದೆ.
ಈ ಯುವಕ ಏಪ್ರಿಲ್ 12ರವರೆಗೆ ಪಿಜ್ಜಾ ಸರಬರಾಜು ಮಾಡಿದ್ದ. ಕಳೆದ 15 ದಿನಗಳ ಕಾಲ ದಕ್ಷಿಣ ದಿಲ್ಲಿಯ ಹೌಝ್ ಖಾಸ್, ಮಾಲ್ವಿಯಾ ನಗರ್ ಮತ್ತು ಸಾವಿತ್ರಿ ನಗರದ ಸುಮಾರು 72 ಕುಟುಂಬಗಳಿಗೆ ಪಿಜ್ಜಾ ಸರಬರಾಜು ಮಾಡಿದ್ದ. ಇದೀಗ ಯುವಕ ದಿಲ್ಲಿಯ ರಾಮ್ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿ ವಿವರಿಸಿದೆ.
ದಕ್ಷಿಣ ದಿಲ್ಲಿಯ 72 ಕುಟುಂಬ ಸದಸ್ಯರನ್ನು ಹೋಮ್ ಕ್ವಾರಂಟೈನ್ ನಲ್ಲಿ ಇರಿಸಲಾಗಿದ್ದು, ಎಲ್ಲರನ್ನೂ ಪ್ರತಿದಿನ ತಪಾಸಣೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಪಿಜ್ಜಾದಲ್ಲಿ ಕೆಲಸ ಮಾಡುತ್ತಿದ್ದ ಇನ್ನೂ 20ಕ್ಕೂ ಅಧಿಕ ಹುಡುಗರು ಈ ಯುವಕನ ಸಂಪರ್ಕ್ಕೆ ಬಂದಿದ್ದು ಅವರನ್ನೂ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಡೆಲಿವರಿ ಬಾಯ್ ಗೆ ಯಾವುದೇ ಟ್ರಾವೆಲ್ (ವಿದೇಶ, ರಾಜ್ಯ) ಹಿಸ್ಟರಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೋ ಸೋಂಕು ಪೀಡಿತ ಮನೆಗೆ ಪಿಜ್ಜಾ ಡೆಲಿವರಿ ಮಾಡಲು ಹೋದಾಗ ವೈರಸ್ ತಗುಲಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಜೋಮಾಟೊ, ರೆಸ್ಟೋರೆಂಟ್ ಉದ್ಯೋಗಿಗೆ ವೈರಸ್ ಪಾಸಿಟಿವ್ ವರದಿ ಬಂದಿರುವುದು ತಿಳಿದು ಬಂದಿದೆ. ಮಾಲ್ವಿಯಾ ನಗರದ ಕೆಲವು ಗ್ರಾಹಕರಿಗೆ ಪಿಜ್ಜಾ ಡೆಲಿವರಿ ಮಾಡಿರುವುದಾಗಿ ತಿಳಿಸಿದೆ. ಈತನಿಗೆ ಪಿಜ್ಜಾ ಡೆಲಿವರಿ ಮಾಡುವ ವೇಳೆ ಸೋಂಕು ತಗುಲಿದೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ವಿವರಿಸಿದೆ.