Advertisement

ದೆಹಲಿ ಅಗ್ನಿ ದುರಂತ; ಇನ್ನೂ ಪತ್ತೆಯಾಗದ 19 ಮಂದಿ; ಮೃತದೇಹಗಳ ಪತ್ತೆಗೆ ಡಿಎನ್ಎ ಟೆಸ್ಟ್

08:53 AM May 14, 2022 | Team Udayavani |

ಹೊಸದಿಲ್ಲಿ: ಇಲ್ಲಿನ ಮುಂದ್ಕಾ ಮೆಟ್ರೋ ನಿಲ್ದಾಣದ ಬಳಿಯಿರುವ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಶುಕ್ರವಾರ ಸಂಜೆ ಬೆಂಕಿ ಅವಗಡ ಸಂಭವಿಸಿದ್ದು, 27 ಜನ ಸಜೀವ ದಹನವಾಗಿದ್ದಾರೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಹಲವರು ಕಟ್ಟಡದಿಂದ ಕೆಳಕ್ಕೆ ಜಿಗಿದು ಗಾಯಗೊಂಡಿದ್ದಾರೆ. ಇನ್ನೂ 19 ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

Advertisement

ಕಟ್ಟಡದಿಂದ 50 ಕ್ಕೂ ಹೆಚ್ಚು ಮಂದಿಯನ್ನು ಹೊರತರಲಾಗಿದೆ. ಗಾಯಗೊಂಡು ಆಸ್ಪತ್ರೆ ಸೇರಿದ್ದ 12 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಸಂಜೆ ನಾಲ್ಕೂವರೆ ಸುಮಾರಿಗೆ ಕಟ್ಟಡದ ಮೊದಲ ಅಂತಸ್ತಿನಲ್ಲಿ ಸಿಸಿಟಿವಿ ಕ್ಯಾಮೆರಾಗಳ ಗೋಡೌನ್‌ ಇದ್ದು, ಅಲ್ಲಿಂದಲೇ ಬೆಂಕಿ ಕಾಣಿಸಿಕೊಂಡು ಕ್ರಮೇಣ ಇಡೀ ಕಟ್ಟಡಕ್ಕೆ ಹಬ್ಬಿದೆ. ಸಂಜೆ 4:40ರ ಸುಮಾರಿಗೆ ವಿಷಯ ತಿಳಿದ ತಕ್ಷಣವೇ 22 ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಕಟ್ಟಡದ ಬೆಂಕಿ ನಿಂದಿಸಲು ಹಾಗೂ ಕಟ್ಟಡದಲ್ಲಿ ಸಿಲುಕಿದ್ದವರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಅಗ್ನಿ ಶಾಮಕ ಸಿಬ್ಬಂದಿ ಕೈಗೊಂಡಿದ್ದಾರೆ.

ರಾತ್ರಿಯ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಕೂಡ ಆಗಮಿಸಿದ್ದು ಪರಿಹಾರ ಕಾರ್ಯಕ್ಕೆ ಕೈ ಜೋಡಿಸಿದೆ.

ಮಾಲೀಕರ ಬಂಧನ: ಬೆಂಕಿ ಹೊತ್ತಿಕೊಂಡ ಕಂಪನಿಯ ಇಬ್ಬರು ಮಾಲೀಕರನ್ನು ಪೊಲೀಸರು ವಶಕ್ಕೆ ಪಡೆದ ನಂತರ ಬಂಧಿಸಿದ್ದಾರೆ. ಬಂಧಿತ ಇಬ್ಬರನ್ನು ವರುಣ್ ಗೋಯಲ್ ಮತ್ತು ಸತೀಶ್ ಗೋಯಲ್ ಎಂದು ಗುರುತಿಸಲಾಗಿದೆ.

Advertisement

ಡಿಎನ್ಎ ಪರೀಕ್ಷೆ: ಕಟ್ಟಡದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವಾಗ ಹಲವು ಸ್ಥಳಗಳಲ್ಲಿ ಸುಟ್ಟ ದೇಹದ ಭಾಗಗಳು ಮತ್ತು ಅವಶೇಷಗಳು ಪತ್ತೆಯಾಗಿವೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರನ್ನು ಗುರುತಿಸಲು ವಿಧಿವಿಜ್ಞಾನ ತಂಡಗಳು ಡಿಎನ್‌ಎ ಪರೀಕ್ಷೆ ನಡೆಸಲಿವೆ ಎಂದರು.

ಮತ್ತೆ ಬೆಂಕಿ: ವರದಿಗಳ ಪ್ರಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡವು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವಾಗಲೂ ಸ್ಥಳದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next