Advertisement

ದಿಲ್ಲಿ, ಮುಂಬಯಿಯಲ್ಲಿ ಆತಂಕ ; ಕಳೆದ ವಾರದಿಂದೀಚೆಗೆ ಏರುತ್ತಿರುವ ಕೋವಿಡ್‌ ಪ್ರಕರಣ

12:37 AM Dec 30, 2021 | Team Udayavani |

ಹೊಸದಿಲ್ಲಿ/ಮುಂಬಯಿ: ದೇಶದ ರಾಜಧಾನಿ ಹೊಸದಿಲ್ಲಿ ಮತ್ತು ವಾಣಿಜ್ಯ ರಾಜಧಾನಿ ಮುಂಬಯಿ ಯಲ್ಲಿ ಬುಧವಾರ ಕೊರೊನಾ ಸಂಖ್ಯೆ ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಒಂದೇ ದಿನ 923 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ, ಈ ಪ್ರಮಾಣ ಶೇ.86ರಷ್ಟು ಹೆಚ್ಚಾಗಿದೆ ಹಾಗೂ ಮೇ 30ರ ಬಳಿಕ ಗರಿಷ್ಠ ಪ್ರಮಾಣದ್ದಾಗಿದೆ. ಇದರ ಜತೆಗೆ ಸೋಂಕಿನ ಪಾಸಿಟಿವಿಟಿ ಪ್ರಮಾಣ ಕೂಡ ಶೇ.1.29ಕ್ಕೆ ಏರಿಕೆಯಾಗಿದೆ. ಕಳೆದ ವಾರದಿಂದ ಈಚೆಗೆ ಹೊಸದಿಲ್ಲಿಯಲ್ಲಿ ಸೋಂಕು ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಡಿ.28ರಂದು 496 ಹೊಸ ಕೇಸ್‌ಗಳು ದೃಢಪಟ್ಟಿದ್ದವು. ಮಂಗಳವಾರವಷ್ಟೇ ಸೋಂಕು ತಡೆಯುವ ನಿಟ್ಟಿನಲ್ಲಿ ದಿಲ್ಲಿ ಸರಕಾರ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿತ್ತು. ಅದರ ಪ್ರಕಾರ ಶಿಕ್ಷಣ ಸಂಸ್ಥೆಗಳು, ಮಾಲ್‌ಗ‌ಳು, ಸಿನೆಮಾ ಹಾಲ್‌ಗ‌ಳು, ಜಿಮ್‌ಗಳು ಮತ್ತು ಇತರ ಸ್ಥಳಗಳನ್ನು ಮುಚ್ಚಲು ಆದೇಶಿಸಲಾಗಿದೆ.

Advertisement

ಮುಂಬಯಿಯಲ್ಲಿ ಕೂಡ ಒಂದೇ ದಿನ 2,510 ಹೊಸ ಕೊರೊನಾ ಕೇಸ್‌ಗಳು ದೃಢಪಟ್ಟಿವೆ. ಡಿ.28ಕ್ಕೆ ಹೋಲಿಕೆ ಮಾಡಿದರೆ, ಶೇ.82ರಷ್ಟು ಹೆಚ್ಚಾಗಿದೆ. ಈ ಸಂಖ್ಯೆ ಮೇ 8ಕ್ಕೆ ಹೋಲಿಕೆ ಮಾಡಿದರೆ ಅತ್ಯಂತ ಗರಿಷ್ಠದ್ದಾಗಿದೆ. ಡಿ.20ರಿಂದ ಈಚೆಗೆ ಮುಂಬಯಿ ಯಲ್ಲಿ ಮತ್ತೆ ಸೋಂಕು ಸಂಖ್ಯೆ ಏರಿಕೆಯಾಗುತ್ತಿದೆ. ಆ ದಿನ 283 ಕೇಸುಗಳು ದೃಢಪಟ್ಟಿದ್ದವು.

ಈ ನಡುವೆ ಒಟ್ಟಾರೆ ಮಹಾರಾಷ್ಟ್ರ ರಾಜ್ಯಕ್ಕೆ ಸಂಬಂಧಿಸಿದಂತೆ 3,900 ಹೊಸ ಕೇಸುಗಳು ದೃಢಪಟ್ಟಿವೆ. ಜತೆಗೆ 24 ಮಂದಿ ಅಸುನೀಗಿದ್ದಾರೆ. ಇದರ ಜತೆಗೆ 85 ಹೊಸ ಒಮಿಕ್ರಾನ್‌ ಕೇಸ್‌ಗಳು ದೃಢಪಟ್ಟಿವೆ. ಈ ನಡುವೆ ರಾಜ್ಯದ ಪರಿಸ್ಥಿತಿ ಬಗ್ಗೆ ಆರೋಗ್ಯ ಸಚಿವ ರಾಜೇಶ್‌ ಟೋಪೆ ಆತಂಕ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಸೋಂಕು ತಡೆ ನಿಯಮ ಕಡ್ಡಾಯವಾಗಿ ಪಾಲಿಸ ಬೇಕು ಎಂದೂ ಒತ್ತಾಯಿಸಿದ್ದಾರೆ.

781ಕ್ಕೆ ಏರಿಕೆ: ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ ಒಮಿಕ್ರಾನ್‌ನ ಕೇಸ್‌ಗಳು 781ಕ್ಕೆ ಏರಿಕೆಯಾಗಿದೆ. ಈ ಪೈಕಿ 241 ಮಂದಿ ಗುಣಮುಖರಾಗಿ ದ್ದಾರೆ. ದೈನಂದಿನ ಕೊರೊನಾ ಸೋಂಕು ಸಂಖ್ಯೆ ಕೂಡ 9,195ಕ್ಕೆ ಏರಿಕೆಯಾಗಿ, 302 ಮಂದಿ ಅಸುನೀಗಿದ್ದಾರೆ.

ರಫ್ತಿಗೆ ಅನುಮತಿ: ಈ ನಡುವೆ, 7 ಕೋಟಿ ಡೋಸ್‌ ಕೊವೊವ್ಯಾಕ್ಸ್‌ ಲಸಿಕೆಯನ್ನು ನೆದರ್ಲೆಂಡ್‌, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ಗಳಿಗೆ ರಫ್ತು ಮಾಡಲು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಇದೇ ವೇಳೆ ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೊಸ ವರ್ಷಾಚರಣೆ ಸಂಬಂಧಿಸಿದಂತೆ ಮತ್ತಷ್ಟು ಕಠಿನ ನಿರ್ಬಂಧಗಳನ್ನು ವಿಧಿಸಿವೆ.

Advertisement

ಇದನ್ನೂ ಓದಿ:ಬೆಂಗಾಲ್‌ ಕದನ ಗೆದ್ದ ದಿಲ್ಲಿ; ಮತ್ತೆ ನವೀನ್‌ ಕುಮಾರ್‌ ಆರ್ಭಟ

ಒಮಿಕ್ರಾನ್‌ ಕೊಲ್ಲುವ ಪ್ರತಿಕಾಯ ಅಭಿವೃದ್ಧಿ
ಜಗತ್ತಿನಾದ್ಯಂತ ಒಮಿಕ್ರಾನ್‌ ರೂಪಾಂತರಿ ಕೇಸ್‌ ಗಳು ಹೆಚ್ಚಾಗುತ್ತಿರುವಂತೆಯೇ ವಿಜ್ಞಾನಿಗಳು ಹೊಸ ಸಾಧನೆ ಮಾಡಿದ್ದಾರೆ. ಹೊಸ ರೂಪಾಂತ ರಿಯನ್ನು ಕೊಲ್ಲುವಂಥ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಾಷಿಂಗ್ಟನ್‌ ಸ್ಕೂಲ್‌ ಆಫ್ ಮೆಡಿಸಿನ್‌ನ ಡಾ|ಡೇವಿಡ್‌ ವೀಸ್ಲರ್‌ ನೇತೃತ್ವದಲ್ಲಿ ನಡೆಸಲಾಗಿರುವ ಸಂಶೋಧನೆಯಲ್ಲಿ ಈ ಅಂಶ ಕಂಡುಕೊಳ್ಳಲಾಗಿದೆ. ಜತೆಗೆ “ನೇಚರ್‌’ ಎಂಬ ನಿಯತಕಾಲಿಕದಲ್ಲಿಯೂ ಈ ಅಂಶವನ್ನು ಪ್ರಕಟಿಸಲಾಗಿದೆ. ಒಮಿಕ್ರಾನ್‌ 37 ಬಾರಿ ರೂಪಾಂತರಗೊಳ್ಳುವ ಸಾಮರ್ಥ್ಯವಿದೆ. ಅದರ ಮೂಲಕ ಮಾನವನ ದೇಹದೊಳಕ್ಕೆ ಪ್ರವೇಶಿಸುವ ಸಾಮರ್ಥ್ಯ ಹೊಂದಿರುತ್ತದೆ. ಮಡೆರ್ನಾ ಮತ್ತು ಫೈಜರ್‌ ಲಸಿಕೆಯ ಎರಡೂ ಡೋಸ್‌ ಹಾಗೂ ಮೂರನೆಯ ಡೋಸ್‌ ಪಡೆದುಕೊಂಡವರ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಈ ಸಂದರ್ಭದಲ್ಲಿ ಒಮಿಕ್ರಾನ್‌ ರೂಪಾಂತರಿಯನ್ನು ನಿಯಂತ್ರಿಸುವ ವ್ಯವಸ್ಥೆ ನಾಲ್ಕು ಪಟ್ಟು ಮಾತ್ರ ಹೆಚ್ಚಾಗಿರುವುದು ದೃಢಪಟ್ಟಿದೆ ಎಂದು ಸಂಶೋಧಕ ವೀಸ್ಲರ್‌ ಪ್ರತಿಪಾದಿಸಿದ್ದಾರೆ.

ಕಪೂರ್‌ ಕುಟುಂಬಕ್ಕೆ ಸೋಂಕು
ಕರೀನಾ ಕಪೂರ್‌ಗೆ ದೃಢವಾಗಿದ್ದ ಕೊರೊನಾ ಸೋಂಕು ಇದೀಗ ಬೋನಿ ಕಪೂರ್‌ ಕುಟುಂಬಕ್ಕೂ ಕಾಲಿಟ್ಟಿದೆ. ಬೋನಿ ಕಪೂರ್‌ ಮಕ್ಕಳಾದ ಅರ್ಜುನ್‌ ಕಪೂರ್‌ ಮತ್ತು ಅಂಶುಲ್‌ ಕಪೂರ್‌ಗೆ ಬುಧವಾರ ಕೊರೊನಾ ಸೋಂಕು ದೃಢವಾಗಿದೆ. ಅವರ ಜತೆ ಅವರ ಚಿಕ್ಕಪ್ಪ ಅನಿಲ್‌ ಕಪೂರ್‌ ಮಗಳು ರಿಯಾ ಕಪೂರ್‌ ಹಾಗೂ ಆಕೆಯ ಪತಿ ಕರಣ್‌ ಬೋಲಾನಿಗೂ ಸೋಂಕು ತಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next