ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ಜನಸಂಚಾರದ ಜೀವನಾಡಿಯಾಗಿರುವ ದಿಲ್ಲಿ ಮಟ್ರೋ ಪ್ರಯಾಣ ದರ ಇಂದು ಮಂಗಳವಾರದಿಂದ ದುಬಾರಿಯಾಗಿದೆ.
ಐದು ತಿಂಗಳ ಹಿಂದಷ್ಟೇ ಮೆಟ್ರೋ ಪ್ರಯಾಣ ದರವನ್ನು ಏರಿಸಲಾಗಿತ್ತು. ಇದೀಗ ಪುನಃ ದರ ಏರಿಸಲಾಗಿರುವುದು ಜನಸಾಮಾನ್ಯರ ಮೇಲಿನ ಪ್ರಯಾಣ ದರ ಏರಿಕೆಯ ಗಾಯಕ್ಕೆ ಉಪ್ಪು ಸವರಿದಂತಾಗಿದೆ.
ದಿಲ್ಲಿ ಮಟ್ರೋದಲ್ಲಿ 2 ರಿಂದ 5 ಕಿ.ಮೀ. ವರೆಗಿನ ಪ್ರಯಾಣ ದರ ಇಂದಿನಿಂದ 5 ರೂ. ಹೆಚ್ಚಿದೆ. ಐದು ಕಿ.ಮೀ. ಗಿಂತ ಹೆಚ್ಚಿನ ಪ್ರಯಾಣ ಕೈಗೊಳ್ಳುವವರಿಗೆ ಹೆಚ್ಚುವರಿ 10 ರೂ. ದರವನ್ನು ಹೇರಲಾಗಿದೆ.
ಪರಿಷ್ಕೃತ ದರ ಪಟ್ಟಿ ಈ ರೀತಿ ಇದೆ : 2 ಕಿ.ಮೀ. ವರೆಗೆ : ರೂ.10; 2ರಿಂದ 5 ಕಿ.ಮೀ: 20 ರೂ; 5ರಿಂದ 12 ಕಿ.ಮೀ.: 30 ರೂ; 12ರಿಂದ 21 ಕಿ.ಮೀ : 40 ರೂ; 21ರಿಂದ 32 ಕಿ.ಮೀ: 50 ರೂ; 32 ಕಿ.ಮೀ. ಮೀರುವ ಪ್ರಯಾಣಕ್ಕೆ 60 ರೂ.
ದಿಲ್ಲಿ ಮೆಟ್ರೋ ಪ್ರಯಾಣಿಕರಲ್ಲಿ ಶೇ.70ರಷ್ಟು ಮಂದಿ ಸ್ಮಾರ್ಟ್ ಕಾರ್ಡ್ ಬಳಕೆದಾರರು; ಇವರಿಗೆ ಪ್ರತಿಯೊಂದು ಪ್ರಯಾಣಕ್ಕೆ ಶೇ.10ರ ರಿಯಾಯಿತಿ ಇದೆ. ಜನ ದಟ್ಟನೆ ಇರದ ಅವಧಿಯಲ್ಲಿ ಪ್ರಯಾಣಿಸಿದರೆ ಅವರಿಗೆ ಹೆಚ್ಚುವರಿ ಶೇ.10ರ ರಿಯಾಯಿತಿ ಇದೆ; ಎಂದರೆ ದಿನದಲ್ಲಿ ಬೆಳಗ್ಗಿನ ಓಡಾಟ ಆರಂಭವಾಗುವಲ್ಲಿಂದ ಬೆಳಗ್ಗೆ 8 ಗಂಟೆಯ ತನಕ, ಮಧ್ಯಾಹ್ನ 12ರಿಂದ 5ರತನಕ ಮತ್ತು ರಾತ್ರಿ 9ರಿಂದ ದಿನದ ಸೇವಾ ಓಡಾಟ ಮುಗಿಯು ತನಕ.
ದಿಲ್ಲಿ ಮೆಟ್ರೋ ಪ್ರಯಾಣ ದರ ಏರಿಸುವ ಪ್ರಕಟನೆ ಸೋಮವಾರ ಮಧ್ಯರಾತ್ರಿ ಹೊರಡಿಸಲಾಗಿತ್ತು. ಕೇಜ್ರಿವಾಲ್ ನೇತೃತ್ವದ ದಿಲ್ಲಿ ಸರಕಾರ ಈ ನಿರ್ಧಾರದ ವಿರುದ್ಧ ವಿಧಾನಸಭೆಯಲ್ಲಿ ಠರಾವು ಪಾಸು ಮಾಡಿತ್ತು.
ದರ ಏರಿಕೆ ಪ್ರಸ್ತಾವವನ್ನು ಸದ್ಯಕ್ಕೆ ತಡೆಹಿಡಿಯಬೇಕೆಂಬ ಕೇಜ್ರಿವಾಲ್ ಕೋರಿಕೆಯನ್ನು ಅನುಸರಿಸಿ ನಿರ್ಮಾಣ ಭವನದಲ್ಲಿ ರಾತ್ರಿ 8 ಗಂಟೆಗೆ ಮಂಡಳಿಯು ಸಭೆ ನಡೆಸಿತ್ತು.