Advertisement

ವೈದ್ಯನೆಂದು ವಂಚಿಸಿದ !

09:50 AM Apr 17, 2018 | Team Udayavani |

ಹೊಸದಿಲ್ಲಿ: ವೈದ್ಯರಿಗೇ ಯಾಮಾರಿಸಿ ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಏಮ್ಸ್‌ ನಲ್ಲಿ ಐದು ತಿಂಗಳು ವೈದ್ಯನಾಗಿ ಕಾರ್ಯ ನಿರ್ವಹಿಸಿದ 19 ವರ್ಷದ ಯುವಕನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಅದ್ನಾನ್‌ ಖುರ್ರಂ ಬಂಧಿತ. ಈತ ನವದಿಲ್ಲಿಯ ಜಾಮೀಯ ನಗರದ ಬಾಟ್ಲಾ ಹೌಸ್‌ ನಿವಾಸಿಯಾಗಿದ್ದು, ನಕಲಿ ಗುರುತಿನ ಚೀಟಿ ಬಳಸಿ ಏಮ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ.

Advertisement

ಸಂಸ್ಥೆಯಲ್ಲಿನ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಿಭಾಗದ ವೈದ್ಯರೊಂದಿಗೆ ಗೆಳೆತನ ಬೆಳೆಸಿಕೊಂಡಿದ್ದ ಮಾತ್ರವಲ್ಲದೆ, ಈತ ವೈದ್ಯರು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದ ಎಂದು ಏಮ್ಸ್‌ನ ವೈದ್ಯರ ಸಂಘ ತಿಳಿಸಿದೆ. ಕ್ಯಾಂಪಸ್‌ಗೆ ಬಂದ ಕೆಲ ತಿಂಗಳ ನಂತರ ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದೆವು. ಈತ ಸದಾ ಸ್ಟೆತಸ್ಕೋಪ್‌, ಲ್ಯಾಬ್‌ ಕೋಟ್‌ ಹಾಕಿಕೊಂಡಿರುತ್ತಿದ್ದ. ಒಬ್ಬೊಬ್ಬ ವೈದ್ಯರ ಜೊತೆ ಒಂದೊಂದು ರೀತಿಯಲ್ಲಿ ಪರಿಚಯಿಸಿಕೊಂಡಿದ್ದ. ಅಷ್ಟೇ ಅಲ್ಲ ವಾಟ್ಸ್‌ ಆ್ಯಪ್‌ ಗ್ರೂಪ್‌ ಕೂಡ ರಚಿಸಿಕೊಂಡಿದ್ದ ಎಂದಿದ್ದಾರೆ ವೈದ್ಯರು.

ಏಮ್ಸ್‌ನಲ್ಲಿ ಸುಮಾರು 2 ಸಾವಿರ ವೈದ್ಯರಿದ್ದಾರೆ. ಹೀಗಾಗಿ ಪ್ರತಿಯೊಬ್ಬರ ಮೇಲೂ ಪ್ರತ್ಯೇಕ ನಿಗಾ ಇಡಲು ಆಗುವುದಿಲ್ಲ. ಈ ಅವಕಾಶವನ್ನು ಬಳಿಸಿಕೊಂಡ ಅದ್ನಾನ್‌ ಶನಿವಾರ ವೈದ್ಯರು ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು, ಈ ವೇಳೆ ಕೆಲ ವೈದ್ಯರು ಈತನ ಮೇಲೆ ಸಂಶಯಗೊಂಡು ಪ್ರಶ್ನಿಸಿದ್ದಾರೆ. ಆಗ ಈತ ನೀಡಿದ ಹೇಳಿಕೆ ಸರಿಯಿಲ್ಲದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ಸಂಘದ ಅಧ್ಯಕ್ಷ ಹರಿಜಿತ್‌ ಸಿಂಗ್‌ ತಿಳಿಸಿದ್ದಾರೆ. ಈತನ ವೈದ್ಯಕೀಯ ಜ್ಞಾನ ಕಂಡು ಪೊಲೀಸರಿಗೂ ಅಚ್ಚರಿಯಾಗಿದೆ.

ಈತ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ದಾಖಲೆಗಳು ಇಲ್ಲ. ಅಲ್ಲದೆ ಯಾವ ಉದ್ದೇಶಕ್ಕೆ ಏಮ್ಸ್‌ಗೆ ಬಂದಿದ್ದ ಎಂಬ ನಿಖರ ಕಾರಣ ತಿಳಿದಿಲ್ಲ. ವೈದ್ಯರ ವಸ್ತ್ರ ತೊಟ್ಟುಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next