ನವದೆಹಲಿ: ಮಾವನಿಂದ ಪಡೆದಿದ್ದ ಸಾಲದ ಹಣ ಮರುಪಾವತಿಸುವುದರಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಅಳಿಯ ನಕಲಿ ದರೋಡೆ ಕಥೆ ಹೆಣೆದ ಘಟನೆ ಉತ್ತರಪ್ರದೇಶದ ಗಾಜಿಯಾಬದ್ ನಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ಬುಧವಾರ (ಏ.10) ತಿಳಿಸಿದ್ದಾರೆ.
ಇದನ್ನೂ ಓದಿ:PUC Result: ರಾಜ್ಯಕ್ಕೆ ದ್ವಿತೀಯ… ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಕೂಲಿಕಾರ್ಮಿಕನ ಮಗಳು
ಪಶ್ಚಿಮ ದೆಹಲಿಯ ಕರೋಲ್ ಬಾಗ್ ನಿವಾಸಿ ಆಶಿಶ್ ಗುಪ್ತಾ ಎಂಬಾತ ತುಂಡು ಭೂಮಿ ಖರೀದಿಗಾಗಿ ತನ್ನ ಮಾವನಿಂದ 8 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಆದರೆ ಅದರಲ್ಲಿ 2 ಲಕ್ಷ ರೂಪಾಯಿ ಖರ್ಚು ಮಾಡಿದ್ದ. ಆ ಸಾಲದ ಮೊತ್ತವನ್ನು ಪೂರ್ಣ ಮರುಪಾವತಿಸಲು ಗುಪ್ತಾಗೆ ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಳಿದ ಆರು ಲಕ್ಷ ರೂಪಾಯಿ ಹಣವನ್ನು ದರೋಡೆಯಾಗಿದೆ ಎಂದು ಬಿಂಬಿಸಲು ಸಂಚು ರೂಪಿಸಿದ್ದ. ಅದರಂತೆ ದಂಪತಿ ದೆಹಲಿಯಿಂದ ಗಾಜಿಯಾಬಾದ್ ನ ಟ್ರೋನಿಕಾ ನಗರದಲ್ಲಿರುವ ಮೋಹಿನಿಯ ಪೋಷಕರ ಮನೆಗೆ ಪ್ರಯಾಣ ಬೆಳೆಸಿದ್ದರು.
ಈ ಸಂದರ್ಭದಲ್ಲಿ ದಾರಿ ಮಧ್ಯೆ ಬೈಕ್ ನಲ್ಲಿ ಬಂದ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಮೋಹಿನಿ ಬಳಿ ಬಂದು ಚಾಕು ತೋರಿಸಿ, ಹಣವಿದ್ದ ಬ್ಯಾಗ್ ಅನ್ನು ಕಸಿದುಕೊಂಡು ಪರಾರಿಯಾಗಿದ್ದರು.
ಕಿರುಚಾಟ, ಗಲಾಟೆಯಿಂದ ಎಚ್ಚೆತ್ತ ಸ್ಥಳೀಯರು ಇಬ್ಬರನ್ನೂ ಬೆನ್ನಟ್ಟಿ ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದರು. ವಿಚಾರಣೆಯಲ್ಲಿ ಇಬ್ಬರೂ ದರೋಡೆಕೋರರು ಆಶಿಶ್ ಹೆಸರು ಹೇಳಿದ್ದು, ಇದು ಆತನ ಸಂಚು ಎಂದು ತಿಳಿಸಿದ್ದರು. ದೀಪಕ್ ಮತ್ತು ಯೋಗೇಶ್ ಜತೆ ಆಶಿಶ್ ನನ್ನು ಪೊಲೀಸರು ಬಂಧಿಸಿದ್ದಾರೆ.