ಮುಂಬೈ/ನವದೆಹಲಿ: ದೆಹಲಿ, ಮಹಾರಾಷ್ಟ್ರ ಸೇರಿದಂತೆ ಒಟ್ಟು ಒಂಬತ್ತು ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ದೇಶದಲ್ಲಿ ಪ್ರಾಣಿಗಳಿಗೆ ನೀಡಲು ಅಗತ್ಯವಿರುವ ಲಸಿಕೆ ಕುರಿತು ಮಾಹಿತಿ ಪಡೆಯುವ ನಿಟ್ಟಿನಲ್ಲಿ ಕೃಷಿ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ, ಪಶುಸಂಗೋಪನಾ ಸಚಿವಾಲಯದ ಹಿರಿಯ ಅಧಿಕಾರಿಗಳ ಸಭೆ ಕರೆದಿದೆ ಎಂದು ವರದಿ ತಿಳಿಸಿದೆ.
ದೆಹಲಿ, ಮಹಾರಾಷ್ಟ್ರ, ಉತ್ತರಪ್ರದೇಶ, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ್ ಪ್ರದೇಶ, ಹರ್ಯಾಣ ಮತ್ತು ಗುಜರಾತ್ ಗಳಲ್ಲಿ ಈಗಾಗಲೇ ಹಕ್ಕಿಜ್ವರ ಪತ್ತೆಯಾಗಿದ್ದು, ದೇಶಾದ್ಯಂತ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಹಕ್ಕಿಗಳು ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಈಗಾಗಲೇ ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಸೋಮವಾರ(ಜನವರಿ 11, 2021) ಮಧ್ಯಾಹ್ನ 3ಗಂಟೆಗೆ ಸಭೆ ಕರೆಯಲಾಗಿದೆ. ಏತನ್ಮಧ್ಯೆ ಜಮ್ಮು-ಕಾಶ್ಮೀರ ಮತ್ತು ಛತ್ತೀಸ್ ಗಢ ರಾಜ್ಯದಲ್ಲಿಯೂ ಅಲರ್ಟ್ ಆಗಿರಲು ಸೂಚನೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಸೋಂಕಿತ ಪ್ರದೇಶಗಳಿಗೆ ಪಕ್ಷಿಗಳ ಪ್ರವೇಶ ನಿರ್ಬಂಧಿಸಬೇಕು, ಝೂಗೆ ಬರುವ ಎಲ್ಲ ವಾಹನಗಳನ್ನು ಸ್ಯಾನಿಟೈಸ್ ಮಾಡಬೇಕು, ಝೂ ಒಳಗಿನ ಎಲ್ಲ ಜಲಮೂಲಗಳ ಮೇಲೆ ನಿಗಾ ಇಡಬೇಕು, ಕೃತಕ ಜಲಮೂಲಗಳ ನೀರನ್ನು ಬರಿದಾಗಿಸಬೇಕು ಎಂದೂ ಸೂಚಿಸಲಾಗಿದೆ.
ಇದನ್ನೂ ಓದಿ:ಸಚಿವ ಸಂಪುಟ ಸರ್ಕಸ್ ನಲ್ಲಿ ‘ಏಳರಾಟ’: ಯಾರಿಗೆಲ್ಲಾ ಸಿಗಬಹುದು ಸಚಿವಗಿರಿ?
ಕುಂಭಮೇಳಕ್ಕೆ ಸಿದ್ಧತೆ ನಡೆಯುತ್ತಿರುವಾಗಲೇ ಈ ಬೆಳವಣಿಗೆ ನಡೆದಿರುವುದು ಉ.ಪ್ರದೇಶದಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಾನ್ಪುರ ಝೂ ಮುಚ್ಚಲಾಗಿದೆ. ಇದರ ಒಂದು ಕಿ.ಮೀ. ವ್ಯಾಪ್ತಿಯನ್ನು ಸೋಂಕಿತ ಪ್ರದೇಶ ಎಂದು ಘೋಷಿಸಲಾಗಿದೆ. ಮ.ಪ್ರದೇಶದಲ್ಲಿ ಭಾನುವಾರ 5 ನವಿಲುಗಳೂ ಸತ್ತುಬಿದ್ದಿದ್ದು, ಅವುಗಳ ಮಾದರಿಯನ್ನು ಪ್ರಯೋಗಾಲ ಯಕ್ಕೆ ಕಳುಹಿಸಲಾಗಿದೆ. ರಾಜ್ಯದ 13 ಜಿಲ್ಲೆಗಳಲ್ಲಿ ಹಕ್ಕಿಜ್ವರ ಪತ್ತೆಯಾಗಿದೆ.