ನವದೆಹಲಿ: 2ರಿಂದ 18 ವರ್ಷದೊಳಗಿನ ವಯಸ್ಸಿನವರಿಗೆ ಕೋವ್ಯಾಕ್ಸಿನ್ ಕೋವಿಡ್ ಲಸಿಕೆಯ 2ನೇ ಮತ್ತು 3ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುವುದರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಬುಧವಾರ(ಮೇ 19) ಕೇಂದ್ರ ಸರ್ಕಾರ ಮತ್ತು ಭಾರತ್ ಬಯೋಟೆಕ್ ಗೆ ನೋಟಿಸ್ ಜಾರಿಗೊಳಿಸಿದೆ.
ಇದನ್ನೂ ಓದಿ:ಲಾಕ್ ಡೌನ್ ಸಂಕಷ್ಟ: 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಸಿಎಂ ಬಿಎಸ್ ವೈ
2ರಿಂದ 18 ವರ್ಷದ ವಯೋಮಾನದವರ ಮೇಲೆ ಕೋವ್ಯಾಕ್ಸಿನ್ ಕೋವಿಡ್ 19 ಲಸಿಕೆಯ 2ನೇ ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಭಾರತ್ ಬಯೋಟೆಕ್ ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಪಿಐಎಲ್ ಗೆ ಸಂಬಂಧಿಸಿದಂತೆ ಜುಲೈ 15ರೊಳಗೆ ವಿವರಣೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಭಾರತ್ ಬಯೋಟೆಕ್ ಗೆ ಹೈಕೋರ್ಟ್ ಪೀಠದ ಚೀಫ್ ಜಸ್ಟೀಸ್ ಡಿಎನ್ ಪಟೇಲ್ ಮತ್ತು ಜಸ್ಟೀಸ್ ಜ್ಯೋತಿ ಸಿಂಗ್ ನೋಟಿಸ್ ಜಾರಿಗೊಳಿಸಿದ್ದಾರೆ.
ಕ್ಲಿನಿಕಲ್ ಪ್ರಯೋಗಕ್ಕಾಗಿ ಮೇ 12ರಂದು ನೀಡಲಾದ ಅನುಮತಿಗೆ ತಡೆ ನೀಡಬೇಕೆಂಬ ಅರ್ಜಿದಾರರಾದ ಸಂಜೀವ್ ಕುಮಾರ್ ಅವರ ಮನವಿಯನ್ನು ನಿರಾಕರಿಸಿದ ಪೀಠ, ಯಾವುದೇ ಮಧ್ಯಂತರ ಆದೇಶ ನೀಡುವುದಿಲ್ಲ ಎಂದು ತಿಳಿಸಿದೆ.