ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಆಸ್ಪತ್ರೆಗಳಲ್ಲಿ ಮತ್ತೂಮ್ಮೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಲಾರಂಭಿಸಿದೆ. ಕಳೆದ 15 ದಿನಗಳಲ್ಲಿ ಕೊರೊನಾದಿಂದಾಗಿ ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆ ಶೇ.60ಕ್ಕೆ ಏರಿದ್ದರೆ, ಕೃತಕ ಆಮ್ಲಜನಕದ ಸಹಾಯದಿಂದ ಉಸಿರಾಡುತ್ತಿರುವವರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ!
ದಿಲ್ಲಿಯಲ್ಲಿ ಮಂಗಳವಾರ 917 ಕೊರೊನಾ ಪ್ರಕರಣಗಳು ದೃಢವಾಗಿವೆ. ಅಘಾತಕಾರಿ ಅಂಶವೆಂದರೆ ಅದರಲ್ಲಿ 563 ಸೋಂಕಿತರು ಆಸ್ಪತ್ರೆ ಸೇರಿದ್ದಾರೆ. ಅದರಲ್ಲೂ 202 ಸೋಂಕಿತರು ಐಸಿಯು ಸೇರಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ. ಆ.9 ರಂದು 2,495 ಮಂದಿಯಲ್ಲಿ ಸೋಂಕು ದೃಢವಾಗಿತ್ತಾದರೂ ಅದರಲ್ಲಿ ಕೇವಲ ಶೇ.20 ಸೋಂಕಿತರು ಮಾತ್ರವೇ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ರೀತಿ ಆ.2ರಂದು 1,506 ಪ್ರಕರಣ ಪತ್ತೆಯಾಗಿದ್ದು, ಅದರಲ್ಲೂ ಶೇ.20 ಸೋಂಕಿತರು ಆಸ್ಪತ್ರೆ ಸೇರಿದ್ದರು. ಆದರೆ ಇದೀಗ ಪತ್ತೆಯಾಗುತ್ತಿರುವ ಪ್ರಕರಣಗಳಲ್ಲಿ ಶೇ. 60 ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆ.1ಕ್ಕೆ ಶೇ.11ರಷ್ಟಿದ್ದ ಕೊರೊನಾ ಪಾಸಿಟಿವಿಟಿ ಪ್ರಮಾಣ ಇದೀಗ ಶೇ.19.2ಕ್ಕೆ ಏರಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಮುನ್ನೆಚ್ಚರಿಕೆ ಡೋಸ್ ಅವಶ್ಯ: ಈಗ ಕೊರೊನಾದಿಂದಾಗಿ ಆಸ್ಪತ್ರೆಗೆ ದಾಖಲಾಗಿ ರುವ ಸೋಂಕಿತರಲ್ಲಿ ಶೇ.90 ಸೋಂಕಿತರು ಕೇವಲ 2 ಡೋಸ್ ಲಸಿಕೆ ಪಡೆದವರು. ಶೇ. 10 ಸೋಂಕಿತರು ಮಾತ್ರ ಮುನ್ನೆಚ್ಚರಿಕೆ ಡೋಸ್ ಪಡೆದಿದ್ದಾರೆ ಎಂದೂ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಮಾಸ್ಕ್ ಕಡ್ಡಾಯ: ಕೊರೊನಾ ಸೋಂಕಿನ ಸಮಸ್ಯೆ ಏರಿಕೆಯಾದ ಬೆನ್ನಲ್ಲೇ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಎಲ್ಲ ಏರ್‌ಲೈನ್‌ಗಳಿಗೆ ಸೂಚನೆ ನೀಡಿದೆ. ಎಲ್ಲ ವಿಮಾನಗಳಲ್ಲಿ ಕೊರೊನಾ ಮುನ್ನೆಚ್ಚರಿಕೆ ನಿಯಮಗಳನ್ನು ಕಟ್ಟುನಿಟ್ಟಿ ನಿಂದ ಪಾಲಿಸಬೇಕು. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು. ತಪ್ಪಿದಲ್ಲಿ ಅಂಥ ಪ್ರಯಾಣಿಕರ ವಿರುದ್ಧ ಕ್ರಮ ತೆಗೆದುಕೊಳ್ಳ ಬೇಕೆಂದು ಏರ್‌ಲೈನ್‌ಗಳಿಗೆ ಸೂಚಿಸಿದೆ.