ನವದೆಹಲಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಕೋರ್ಟ್ ಆರೋಪಿಯನ್ನು ದೋಷಮುಕ್ತಗೊಳಿಸಿದ್ದು, ಅತ್ಯಾಚಾರ ಘಟನೆ ನಡೆದ ದಿನ ಆ ಮಹಿಳೆ ಆತನ ಪತ್ನಿಯಾಗಿದ್ದಳು. ಹೀಗಾಗಿ ಇದನ್ನು ರೇಪ್ ಅಂತ ಹೇಗೆ ಪರಿಗಣಿಸಲು ಸಾಧ್ಯ ಎಂದು ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಈ ಪ್ರಕರಣದಲ್ಲಿ ಮಹಿಳೆ ಆರೋಪಿಸಿದಂತೆ ವ್ಯಕ್ತಿಯೊಬ್ಬರು 2016ರ ಜುಲೈ 5ರಂದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ತಿಳಿಸಿದ್ದರು. ಆದರೆ ಈ ಪ್ರಕರಣವನ್ನು ರೇಪ್ ಎಂದು ಪರಿಗಣಿಸಲು ಸಾಧ್ಯವಿಲ್ಲ. ಯಾಕೆಂದರೆ ಆರೋಪ ಹೊರಿಸಿದಾಕೆ ಪತ್ನಿಯೇ ಆಗಿದ್ದಾಳೆ ಎಂಬುದನ್ನು ಗಮನಿಸಲಾಗಿದೆ ಎಂದು ಅಡಿಷನಲ್ ಸೆಷನ್ಸ್ ಜಡ್ಜ್ ಉಮೇದ್ ಸಿಂಗ್ ಗ್ರೇವಾಲ್ ತಿಳಿಸಿರುವುದಾಗಿ ವರದಿ ಹೇಳಿದೆ.
ತನಿಖೆ ವೇಳೆ ಸಂತ್ರಸ್ತ ಮಹಿಳೆ ತಾನು ಆರೋಪಿ ಜತೆ 2.11.2015ರಲ್ಲಿಯೇ ಮದುವೆಯಾಗಿರುವುದಾಗಿ ತಿಳಿಸಿದ್ದಳು. ಆಕೆಯನ್ನು ಆರೋಪಿ ರೇಪ್ ಮಾಡಿರುವುದಾಗಿ ದೂರು ನೀಡಿದ್ದು 2016ರ ಜುಲೈ 5ರಂದು. ಹೀಗಾಗಿ ಪತ್ನಿ ಮೇಲೆ ಪತಿ ಅತ್ಯಾಚಾರ ಎಸಗಿದ್ದಾನೆಂದು ಪರಿಗಣಿಸಲು ಆಗಲು ಎಂದು ಹೇಳಿರುವ ಕೋರ್ಟ್ ವ್ಯಕ್ತಿಯನ್ನು ಖುಲಾಸೆಗೊಳಿಸಿ ಆದೇಶ ನೀಡಿದೆ ಎಂದು ವರದಿ ವಿವರಿಸಿದೆ.
ದೂರು ನೀಡಿರುವಾಕೆ (ಪತ್ನಿ) ಈ ವ್ಯಕ್ತಿಯೊಂದಿಗೆ ಪಂಜಾಬ್ ನಲ್ಲಿ ಒಟ್ಟಿಗೆ ವಾಸ್ತವ್ಯ ಹೂಡಿದ್ದರು. ಈ ವ್ಯಕ್ತಿ ಕಳ್ಳತನ ಮಾಡಿದ ಆರೋಪದಲ್ಲಿ ಜೈಲುಶಿಕ್ಷೆ ಅನುಭವಿಸಿದ್ದ ವೇಳೆ ಈಕೆ ಆತನಿಗೆ(ಪತಿ) ಮಾಹಿತಿ ನೀಡದೆ ದೆಹಲಿಗೆ ಆಗಮಿಸಿದ್ದಳು ಎಂದು ವರದಿ ತಿಳಿಸಿದೆ.
ಜೈಲಿನಿಂದ ಹೊರಬಂದ ನಂತರ ದೆಹಲಿಗೆ ಹುಡುಕಿಕೊಂಡು ಬಂದ ಪತಿ ಆಕೆಯ ಮನವೊಲಿಸಿ ಇನ್ಮುಂದೆ ಆ ರೀತಿ ನಡೆದುಕೊಳ್ಳಲ್ಲ ಎಂದು ಭರವಸೆ ನೀಡಿದ್ದ ಮೇಲೆ ಮತ್ತೆ ಒಟ್ಟಿಗೆ ವಾಸ್ತವ್ಯ ಹೂಡಿದ್ದರು. ಏತನ್ಮಧ್ಯೆ ಆತ ಪತ್ನಿ ಮೇಲೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ. ಈ ಘಟನೆ ಹಿನ್ನೆಲೆಯಲ್ಲಿ ಆಕೆ ಅತ್ಯಾಚಾರ ಪ್ರಕರಣದಡಿ ಗಂಡನ ವಿರುದ್ಧ ದೂರು ನೀಡಿದ್ದಳು ಎಂದು ವರದಿ ತಿಳಿಸಿದೆ.