ಹೊಸದಿಲ್ಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಖೋಟಾ ನೋಟು ಜಾಲ ನಡೆಸುತ್ತಿದ್ದಾನೆ ಎಂಬುದು ಗೌಪ್ಯವಾಗಿ ಉಳಿದಿರಲಿಲ್ಲವಾದರೂ, ಈ ಬಾರಿ ದಿಲ್ಲಿ ಪೊಲೀಸರಿಗೆ ಮಹತ್ವದ ಕೊಂಡಿಯೊಂದು ಸಿಕ್ಕಿದೆ. ದಿಲ್ಲಿಯಲ್ಲಿ ಇತ್ತೀಚೆಗೆ ಭೇದಿಸಿದ ಖೋಟಾನೋಟು ಜಾಲಕ್ಕೂ ದಾವೂದ್‌ಗೂ ನಂಟು ಇರುವುದು ತಿಳಿದು ಬಂದಿದೆ. 2 ಸಾವಿರ ರೂ. ಮುಖ ಬೆಲೆಯ 5.50 ಲಕ್ಷ ರೂ. ಮೌಲ್ಯದ ನೋಟುಗಳನ್ನು ದಿಲ್ಲಿ ಪೊಲೀಸರು ವಶಪಡಿಸಿಕೊಂಡು, ನೇಪಾಳ ಪ್ರಜೆ ಅಸ್ಲಂ ಅನ್ಸಾರಿಯನ್ನು ಬಂಧಿಸಿದ್ದಾರೆ. ಈ ಖೋಟಾನೋಟುಗಳನ್ನು ದಾವೂದ್ ಇಬ್ರಾಹಿಂ ಪಾಕಿಸ್ಥಾನ ದಿಂದ ಕಳಿಸಿದ್ದಾನೆ ಎಂದು ಹೇಳಿ ನಮಗೆ ಕೊಟ್ಟಿದ್ದಾರೆ ಎಂಬುದಾಗಿ ತನಿಖಾಧಿಕಾರಿಗಳಿಗೆ ಅನ್ಸಾರಿ ಹೇಳಿದ್ದಾನೆ ಎನ್ನಲಾಗಿದೆ.
ಖೋಟಾ ನೋಟುಗಳನ್ನು ಪಾಕ್‌ನಿಂದ ನೇಪಾಳ ಮೂಲಕ ಭಾರತಕ್ಕೆ ತಂದು, ದಿಲ್ಲಿ, ಬಿಹಾರ ರಕೌಲ್‌ನಲ್ಲಿ ಮತ್ತು ಇತರ ಭಾಗಗಳಲ್ಲಿ ಚಲಾವಣೆ ಮಾಡಲಾಗುತ್ತಿದೆ ಎಂದು ಅನ್ಸಾರಿ ಹೇಳಿದ್ದಾನೆ.
1 ಕೋಟಿ ವಹಿವಾಟು: ಅಸ್ಲಂ ಅನ್ಸಾರಿ ಎಂಬಾತ ದಿಲ್ಲಿಗೆ ಬರುತ್ತಾನೆ ಎಂಬುದು ತಿಳಿಯುತ್ತಿದ್ದಂತೆ ಬಲೆ ಬೀಸಿ ಆತನನ್ನು ಬಂಧಿಸಲಾಗಿತ್ತು. ಈತನಿಂದ 2 ಸಾವಿರ ರೂ. ಮುಖಬೆಲೆಯ 275 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನಿಗೆ ಅಬ್ದುಲ್ ರೆಹಮಾನ್, ಸಜ್ಜದ್ ಮತ್ತು ಶೇರ್ ಮೊಹಮ್ಮದ್ ಎಂಬ ಮೂವರು ವ್ಯಕ್ತಿಗಳು ಖೋಟಾ ನೋಟು ನೀಡುತ್ತಿದ್ದರು. 5 ವರ್ಷದಿಂದ ಈ ವಹಿವಾಟು ನಡೆಸುತ್ತಿದ್ದು, 1 ವರ್ಷದಲ್ಲಿ 1 ಕೋಟಿ ರೂ. ಸಾಗಾಟ ಮಾಡಿದ್ದಾನೆ.
ಇನ್ನಷ್ಟು ತಂಡಗಳು?: 2016ರಲ್ಲಿ ನೋಟು ಅಮಾನ್ಯವಾದ ಅನಂತರ ಖೋಟಾನೋಟು ವಹಿವಾಟು ನಿಂತಿತ್ತು. ಕಳೆದ ವರ್ಷದಿಂದ ಮತ್ತೆ ಆರಂಭವಾಗಿದೆ. ಇದೇ ರೀತಿಯ ಇನ್ನಷ್ಟು ತಂಡಗಳೂ ಖೋಟಾ ನೋಟು ವಹಿವಾಟು ನಡೆಸುತ್ತಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.