Advertisement
ಹರಿಯಾಣದ ಜಿಂದ್ ಜಿಲ್ಲೆಯ ದಾತಾ ಸಿಂಘ್ವಾಲ-ಖನೌರಿ ಗಡಿ ಮತ್ತು ಅಂಬಾಲ ಜಿಲ್ಲೆಯ ಶಂಭು ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪಂಜಾಬ್ ಹರಿಯಾಣ ದಾಟಿ ಮುಂದೆ ಹೋಗದಂತೆ ಹರಿಯಾಣ ಪೊಲೀಸರು ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ. ಮತ್ತೂಂದು ಕಡೆ ರೈತರು ತಮ್ಮ ಸಂಘರ್ಷವನ್ನು ಮುಂದುವರಿಸಿದ್ದಾರೆ. ಇತ್ತ ಪಂಜಾಬ್ ಸರಕಾರ, ರೈತರ ಮೇಲೆ ತೀವ್ರ ಬಲಪ್ರಯೋಗ ಮಾಡದಂತೆ, ಹರಿಯಾಣ ಸರಕಾರಕ್ಕೆ ವಿನಂತಿಸಿದೆ.
Related Articles
Advertisement
ರಸ್ತೆಗಳ ಬದಿಯಲ್ಲಿ ಅಡುಗೆಯ ಸಿದ್ಧತೆ ಮಂಗಳವಾರ ರಾತ್ರಿಯನ್ನು ಪ್ರತಿಭಟನ ಸ್ಥಳಗಳಲ್ಲೇ ರೈತರು ಕಳೆದಿದ್ದು, ತಮ್ಮ ವಾಹನಗಳಲ್ಲೇ ಹಲವರು ನಿದ್ರಿಸಿದ್ದಾರೆ. ಇನ್ನೂ ಕೆಲವರು ಟೆಂಟ್‌ಗಳನ್ನು ಹಾಕಿಕೊಂಡು ಉಳಿದಿದ್ದಾರೆ. ಹೆಂಗಸರು ರಸ್ತೆ ಬದಿಗಳಲ್ಲೇ ಪಾತ್ರೆ-ಪಗಡೆಗಳನ್ನು ಇಳಿಸಿ ಅಡುಗೆ ತಯಾರಿಸಿದ್ದಾರೆ. ದೊಡ್ಡ ದೊಡ್ಡ ಪಾತ್ರೆಗಳು, ಒಲೆಗಳೊಂದಿಗೆ ರೈತರು ಸಜ್ಜಾಗಿ ಬಂದಿರುವುದು ಕಂಡುಬಂದಿದೆ. ಗಾಯಗೊಂಡ ರೈತರ ಜತೆ ರಾಹುಲ್ ಮಾತುಕತೆ
ಅಶ್ರುವಾಯು ಪ್ರಯೋಗ ಮತ್ತು ಘರ್ಷಣೆಯಲ್ಲಿ ಗಾಯಗೊಂಡ ರೈತರೊಬ್ಬರ ಜತೆಗೆ ಸಂಸದ ರಾಹುಲ್ ಗಾಂಧಿ ಫೋನ್‌ನಲ್ಲಿ ಮಾತನಾಡಿ ಸಾಂತ್ವನ ಹೇಳಿದ್ದಾರೆ. ರೈತರ ಜತೆಗೆ ಕಾಂಗ್ರೆಸ್ ಬೆಂಬಲವಾಗಿ ನಿಲ್ಲಲಿದೆ ಎಂದರು. ಬಳಿಕ ವ್ಯಾಟ್ಸ್ ಆ್ಯಪ್ ಚಾನೆಲ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿ, “ಮೋದಿ ಸರಕಾರ ದೇಶದ ರೈತರ ವಿರುದ್ಧ ನಿರಂಕುಶ ರೀತಿಯಲ್ಲಿ ವರ್ತಿಸುತ್ತಿದೆ ಎಂದು ದೂರಿದ್ದಾರೆ. ಪಂಜಾಬ್, ಹರಿಯಾಣಗಳಲ್ಲಿ ಇಂಟರ್‌ನೆಟ್ ಸ್ಥಗಿತ
ಪ್ರಚೋದನಾಕಾರಿ ಅಂಶಗಳನ್ನು ಕಳುಹಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ. ಪಂಜಾಬ್‌ನ ಪಾಟಿಯಾಲಾ, ಸಂಗ್ರೂರ್, ಫತೇಗರ್ ಸಾಹಿಬ್ ಜಿಲ್ಲೆಗಳಲ್ಲಿ ಇಂಟರ್‌ನೆಟ್‌ಗೆ ನಿಷೇಧ ಹೇರಲಾಗಿದೆ. ಫೆ. 12ರಂದೇ ಈ ಆದೇಶ ಹೊರಡಿಸಲಾಗಿದ್ದು, ಶುಕ್ರವಾರದ ವರೆಗೆ ಇಂಟರ್‌ನೆಟ್ ಕಡಿತಗೊಳಿಸಲಾಗಿದೆ. ಇದೇ ವೇಳೆ, ಹರಿಯಾಣದ ಅಂಬಾಲಾ, ಕುರುಕ್ಷೇತ್ರ, ಕೈಥಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ಗುರುವಾರದ ವರೆಗೆ ಮೊಬೈಲ್ ಇಂಟರ್‌ನೆಟ್ ಕಡಿತಗೊಳಿಸಲು ಆದೇಶಿಸಲಾಗಿದೆ. ಡ್ರೋನ್ ತಡೆಯಲು ವಿರುದ್ಧ ಗಾಳಿಪಟ ಹಾರಿಸಿದ ರೈತರು
ಶಂಭು ಗಡಿಯಲ್ಲಿಯಲ್ಲಿ ನಿಯೋಜಿಸಿರುವ ಬ್ಯಾರಿಕೇಡ್‌ಗಳನ್ನು ಮುರಿಯಲು ರೈತರು ಮುಂದಾಗುತ್ತಿದ್ದಂತೆಯೇ ಪೊಲೀಸರು ಅಶ್ರುವಾಯು ಹಾಗೂ ಸ್ಮೋಕ್ ಬಾಂಬ್‌ಗಳ ಬಳಕೆ ಹೆಚ್ಚಿಸಿದ್ದಾರೆ. ಇದರಿಂದ ಕುಪಿತಗೊಂಡ ರೈತರು ಭದ್ರತಾಪಡೆಗಳ ಡ್ರೋನ್‌ಗಳನ್ನೇ ನಾಶ ಪಡಿಸಲು ಗಾಳಿಪಟಗಳನ್ನು ಬಳಕೆ ಮಾಡುತ್ತಿದ್ದಾರೆ. ಪ್ರತಿಭಟನ ಪ್ರದೇಶಗಳಲ್ಲಿ ಡ್ರೋನ್‌ಗಳ ಮೂಲಕ ಸ್ಮೋಕ್‌ಬಾಂಬ್‌ಗಳನ್ನು ಹಾಕಲಾಗುತ್ತಿದ್ದ ಹಿನ್ನೆಲೆಯಲ್ಲಿ ಪ್ರತಿಭಟನ ನಿರತರಾಗಿರುವ ಕೆಲವು ಯುವಕರು ಆಕ್ರೋಶಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಡ್ರೋನ್‌ಗಳನ್ನೇ ಗುರಿಯಾಗಿಸಿ ಗಾಳಿಪಟ ಹಾರಿಸಿದ್ದಾರೆ. ಡ್ರೋನ್‌ಗಳಿಗೆ ಗಾಳಿಪಟವನ್ನು ಢಿಕ್ಕಿ ಹೊಡೆಸಿ, ಅವುಗಳು ಕೆಳಗೆ ಬೀಳುವಂತೆ ಮಾಡಿರುವುದು ವರದಿಯಾಗಿದೆ. ಅಶ್ರುವಾಯುವಿನಿಂದ ರಕ್ಷಿಸಿಕೊಳ್ಳಲು ಮೇಕಪ್
ಅಶ್ರುವಾಯು ಬಳಕೆಯಿಂದಾಗಿ ಹಲವಾರು ರೈತರಿಗೆ ಗಾಯಗಳಾಗಿರುವುದು ವರದಿಯಾಗಿದೆ. ಕೆಲವರು ಕಣ್ಣು ಉರಿ ಮತ್ತು ಉಸಿರಾಟ ಸಮಸ್ಯೆಗಳಿಂದ ಬಳಲುತ್ತಿರುವುದಾಗಿಯೂ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಎಲ್ಲ ರೈತರಿಗೂ ಗಾಗಲ್ಸ್ /ಕೂಲಿಂಗ್ ಗ್ಲಾಸ್‌ಗಳನ್ನು ವಿತರಣೆ ಮಾಡಿದ್ದು, ಗಾಗಲ್ಸ್‌ಗಳನ್ನು ಧರಿಸಿಯೇ ರೈತರು ಪ್ರತಿಭಟಿಸಿದ್ದಾರೆ. ಸ್ಮೋಕ್ ಬಾಂಬ್ ಮತ್ತು ಅಶ್ರುವಾಯು ಸಿಡಿತದಿಂದ ಕಣ್ಣು ಮತ್ತು ಮುಖಕ್ಕೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಯುವ ರೈತರು ಮುಖದ ತುಂಬೆಲ್ಲಾ ಮುಲ್ತಾನಿ ಮಟ್ಟಿ ಹಚ್ಚಿಕೊಂಡು ಪ್ರತಿಭಟನೆಗೆ ಇಳಿದಿದ್ದಾರೆ. ತ್ವಚೆಯನ್ನು ಕಾಪಾಡಿಕೊಳ್ಳುವುದಲ್ಲದೇ, ಸಂಭಾವ್ಯ ಅಪಾಯಗಳನ್ನು ತಪ್ಪಿಸಲು ಈ ಕ್ರಮ ಅನುಸರಿಸುವುದಾಗಿಯೂ ಹೇಳಿಕೊಂಡಿದ್ದಾರೆ. ನಾಳಿನ ಗ್ರಾಮೀಣ ಭಾರತ ಬಂದ್ ರದ್ದು: ರೈತ ಸಂಘಟನೆಗಳ ಹೇಳಿಕೆ
ಪ್ರತಿಭಟನೆ ಬಿರುಸುಗೊಂಡಿರುವಂತೆಯೇ ರೈತ ಸಂತ ಸಂಘಟನೆಗಳು ಫೆ.16ರಂದು ಕರೆ ನೀಡಿರುವ ಗ್ರಾಮೀಣ ಭಾರತ ಬಂದ್ ಅದನ್ನು ಹಿಂಪಡೆದಿರುವ ಬಗ್ಗೆ ರೈತ ಸಂಘಟನೆಗಳು ಘೋಷಣೆ ಮಾಡಿವೆ. ಆದರೆ, ಶಂಭು ಗಡಿ ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರಿಗೆ ಬೆಂಬಲ ಸೂಚಿಸಿ, ಪಂಜಾಬ್‌ನಲ್ಲಿ ಭಾರತೀಯ ಕಿಸಾನ್ ಯೂನಿಯನ್- ಉಗ್ರಾನ್ ಸಂಘಟನೆಯು ಗುರುವಾರ ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯ ವರೆಗೆ ರೈಲುಗಳ ಸಂಚಾರಕ್ಕೆ ತಡೆ ನೀಡುವುದಕ್ಕಾಗಿ ರೈಲು ರೋಕೋ ಅಭಿಯಾನಕ್ಕೆ ಕರೆ ನೀಡಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಲು ಹೊರಟಿದ್ದ ಕೆಲ ರೈತ ಸಂಘಟನೆಗಳನ್ನು ಹರ್ಯಾಣ ಸರಕಾರ ಹತ್ತಿಕ್ಕಲು ಪ್ರಯತ್ನಿಸಿದೆ ರೈತರು ದೂರಿದ್ದಾರೆ.