ನವದೆಹಲಿ: ನಿರ್ದಿಷ್ಟ ಸಮುದಾಯದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಬಿಜೆಪಿ ಹಿರಿಯ ನಾಯಕನೆಂದು ಕರೆಸಿಕೊಳ್ಳುವ ವ್ಯಕ್ತಿಯೊಬ್ಬರ ಮೇಲೆ ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ತನ್ನನ್ನು ತಾನು ಬಿಜೆಪಿಯ ಹಿರಿಯ ನಾಯಕನೆಂದು ಬಣ್ಣಿಸಿಕೊಳ್ಳುವ ಜೈ ಭಗವಾನ್ ಗೋಯಲ್ ಎಂಬುವವರು ಈಶಾನ್ಯ ದೆಹಲಿಯಲ್ಲಿ ಯುನೈಟೆಡ್ ಹಿಂದೂ ಫ್ರಂಟ್ ಆಯೋಜಿಸಿದ ಪಂಚಾಯತ್ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯಯ ವಿರುದ್ಧ ಪ್ರಚೋದನಕಾರಿಯಾಗಿ ಮಾತನಾಡಿ ವಿವಾದಕ್ಕೆ ಸಿಲುಕಿದ್ದಾರೆ.
“ಪಿಎಫ್ ಐಯನ್ನು ಯಾವ ಮುಸ್ಲಿಂ ನಾಯಕರು ಕೂಡ ಖಂಡಿಸಿಲ್ಲ. ಏಕೆಂದರೆ ಎಲ್ಲಾ ಮುಸ್ಲಿಂಮರು ಕೂಡ ಒಂದೇ. ನಾವು ತ್ರಿಶೂಲ ಹಿಡಿದು ಬೀದಿಗೆ ಇಳಿಯದೇ ಇದ್ದರೆ, 5-7 ವರ್ಷಗಳಲ್ಲಿ ಭಾರತ ಮುಸ್ಲಿಂ ರಾಷ್ಟ್ರವಾಗಲಿದೆ. ಮುಸ್ಲಿಂಮರನ್ನು ಆರ್ಥಿಕವಾಗಿ ಬಾಯ್ಕಾಟ್ ಮಾಡುವುದು ಪ್ರತಿಯೊಬ್ಬ ಹಿಂದೂವಿನ ಗುರಿಯಾಗಿರಬೇಕು” ಎಂದು ಪ್ರಚೋದನಕಾರಿಯಾಗಿ ಹೇಳಿಕೆಯನ್ನು ನೀಡಿದ್ದಾರೆ.
ದೆಹಲಿ ಬಿಜೆಪಿ ಖಜಾಂಚಿ ರಾಮ್ ಅವತಾರ್ ಗುಪ್ತಾ ಮತ್ತು ಮಾಜಿ ಕೇಂದ್ರ ಸಚಿವ ಸತ್ಯನಾರಾಯಣ್ ಜಟಿಯಾ ಅವರು ಈ ಕಾರ್ಯಕ್ರಮ ನಡೆಯುವ ವೇಳೆ ಉಪಸ್ಥಿತರಿದ್ದರು.
ಪ್ರಚೋದನಕಾರಿ ಹೇಳಿಕೆ ನೀಡಿದ ಜೈ ಭಗವಾನ್ ಗೋಯಲ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇನ್ನು ಕಾರ್ಯಕ್ರಮ ಆಯೋಜಕರ ವಿರುದ್ಧ ಕೂಡ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ ಎಂದು “ಇಂಡಿಯಾ ಟುಡೇ” ವರದಿ ತಿಳಿಸಿದೆ.
ಇತ್ತೀಚೆಗೆ, ಧರಮ್ ಸಂಸದ್ ದ್ವೇಷ ಭಾಷಣ ಪ್ರಕರಣದಲ್ಲಿ ಅಸಭ್ಯ ಭಾಷೆ ಬಳಸಿದ ಪ್ರಕರಣದಲ್ಲಿ ಎಫ್‌ಐಆರ್ ಮತ್ತು ಚಾರ್ಜ್‌ಶೀಟ್ ದಾಖಲಿಸಲು ವಿಳಂಬ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿತ್ತು.