Advertisement
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮಾತೆ ಮಹಾದೇವಿ ನೇತೃತ್ವದಲ್ಲಿ ದೆಹಲಿಯಲ್ಲಿ ಲಿಂಗಾಯತ ಮಹಾರ್ಯಾಲಿ ನಡೆಸಲು ಸಿದ್ಧತೆ ನಡೆದಿದೆ. ಆದರೆ, ಎಂ.ಬಿ. ಪಾಟೀಲ್ ಈ ಹೋರಾಟದಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ. ಸಂಪುಟ ವಿಸ್ತರಣೆಯಲ್ಲಿ ಸಚಿವಗಿರಿ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಇದು ಮುಳ್ಳಾಗಬಹುದು ಮತ್ತು ಕಳೆದ ಬಾರಿ ಚುನಾವಣೆಯಲ್ಲಿ ಸರ್ಕಾರದ ಪತನದ ಕಾರಣಗಳಲ್ಲಿ ಈ ವಿಷಯವೂ ಒಂದಾಗಿದ್ದು, ವೈಯಕ್ತಿಕ ರಾಜಕೀಯ ಬೆಳವಣಿಗೆಗೂ ಇದು ಧಕ್ಕೆ ತಂದೊಡ್ಡುವ ಸಾಧ್ಯತೆಯನ್ನು ಅವರು ಮನಗಂಡಿರುವುದು ಈ ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗಿದೆ.
Related Articles
Advertisement
ಬಸವ ತತ್ವ ಅನುಸರಿಸುವ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ನಿಟ್ಟಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಹುಟ್ಟಿಕೊಂಡಿತ್ತು. ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಪ್ರತ್ಯೇಕ ಧರ್ಮಕ್ಕಾಗಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗಿತ್ತು. ಆದರೆ, ಈಗ ಮಾತೆ ಮಹಾದೇವಿ ಪ್ರತ್ಯೇಕವಾಗಿ ಬಸವ ಧರ್ಮ ಪೀಠದ ನೇತೃತ್ವದಲ್ಲಿ ಹೋರಾಟ ಮಾಡುತ್ತಿರುವುದರಿಂದ ಎಲ್ಲ ನಾಯಕರು ತಟಸ್ಥ ಧೋರಣೆ ಅನುಸರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾಪಕ್ಕೆ ಒಪ್ಪಿಗೆ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಬಸವ ಧರ್ಮ ಪೀಠದ ವತಿಯಿಂದ ಮೂರು ದಿನ ಲಿಂಗಾಯತ ರ್ಯಾಲಿ ಮಾಡುತ್ತಿದ್ದೇವೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉದ್ಘಾಟನೆ ಮಾಡಲಿದ್ದಾರೆ. ಸುಮಾರು 10 ಸಾವಿರ ಜನರು ಸೇರಲಿದ್ದಾರೆ.– ಮಾತೆ ಮಹಾದೇವಿ, ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ. ಬಸಣ್ಣನ ತತ್ವದಲ್ಲಿ ನಂಬಿಕೆ ಇಟ್ಟವರು ಎಲ್ಲರೂ ಸೇರಿ ಹೋಗಬೇಕು. ಮಾತೆ ಮಹಾದೇವಿ ಎಲ್ಲರನ್ನೂ ಕರೆದುಕೊಂಡು ಹೋಗುತ್ತಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕರೆಸುವುದರಿಂದ ನಮ್ಮ ಬೇಡಿಕೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.
– ಜಿ.ಬಿ. ಪಾಟೀಲ್, ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ. ಬಸವ ಮಂಟಪದ ಮಾತೆ ಮಹಾದೇವಿ ನೇತೃತ್ವದಲ್ಲಿ ಈ ರ್ಯಾಲಿ ನಡೆಯಲಿದೆ. ಜಾಗತಿಕ ಲಿಂಗಾಯತ ಮಹಾಸಭಾ ಅವರ ಕೆಲಸ ಅವರು ಮಾಡುತ್ತಿದ್ದಾರೆ. ಅವರೂ ದೆಹಲಿಯಲ್ಲಿ ಅಧಿಕೃತ ಸಮಾವೇಶ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ. ನವೆಂಬರ್ 12 ರಂದು ಗದುಗಿನ ತೋಂಟದ ಸಿದ್ದಲಿಂಗ ಶ್ರೀಗಳ ಶ್ರದ್ದಾಂಜಲಿ ನಡೆಯಲಿದ್ದು, ಆ ಸಭೆಯಲ್ಲಿ ಪ್ರತ್ಯೇಕ ಧರ್ಮದ ಬೇಡಿಕೆಗೆ ಒತ್ತಡ ಹೇರಲಿದ್ದೇವೆ.
– ಬಸವ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಪೀಠಾಧ್ಯಕ್ಷರು. – ಶಂಕರ ಪಾಗೋಜಿ