ಹೊಸದಿಲ್ಲಿ : ದಿಲ್ಲಿಯ ರಯಾನ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಎರಡನೇ ತರಗತಿ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್ ಕೊಲೆಯಾದ ಕೆಲವೇ ತಿಂಗಳಲ್ಲಿ ಇದೀಗ ದಿಲ್ಲಿಯ ಕರವಾಲ್ ನಗರದ ಜೀವನ ಜ್ಯೋತಿ ಸೀನಿಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ, ಹದಿನಾಲ್ಕು ವರ್ಷದ ಬಾಲಕ, ಶಾಲೆಯ ಶೌಚಾಲಯದಲ್ಲಿ ಮೃತಪಟ್ಟಿರುವುದು ವರದಿಯಾಗಿದೆ.
ಪೂರ್ವ ದಿಲ್ಲಿಯ ವಿದ್ಯಾರ್ಥಿಗಳ ಗುಂಪೊಂದು 9ನೇ ತರಗತಿಯ ವಿದ್ಯಾರ್ಥಿಯಾಗಿರುವ ತುಷಾರ್ ಎಂಬಾತನನ್ನು ಶಾಲೆಯ ಶೌಚಾಲಯದಲ್ಲಿ ಮಾರಣಾಂತಿಕವಾಗಿ ಹೊಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತೀವ್ರಗಾಯಗೊಂಡಿದ್ದ ಬಾಲಕನನ್ನು ಒಡನೆಯೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಆದರೆ ಶಾಲಾ ಆಡಳಿತದವರು ತುಷಾರ್‌ನ ಸಾವಿಗೆ ಬೇರೆಯ ಕಾರಣ ನೀಡಿದ್ದಾರೆ. ಅವರ ಪ್ರಕಾರ ತುಷಾರ್ ಡಯೋರಿಯಾ ದಿಂದ ಬಳಲುತ್ತಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ತುಷಾರ್ ಸಾವಿಗೆ ಬೇರೆಯೇ ಕಾರಣವಿದೆ; ಇದರ ತನಿಖೆಯಾಗಬೇಕು ಎಂದು ಆಗ್ರಹಿಸಿ ಬಾಲಕನ ಹೆತ್ತವರು ಮತ್ತು ಶಾಲೆಯ ಇತರ ಮಕ್ಕಳ ಹೆತ್ತವರು ಶಾಲೆಯ ಗೇಟ್ ಮುಂದೆ ಗುರುವಾರ ತಡರಾತ್ರಿಯ ವರೆಗೂ ಪ್ರತಿಭಟನೆ ನಡೆಸಿದ್ದಾರೆ.
ಪೊಲೀಸರೀಗ ಸಿಸಿಟಿವಿ ಚಿತ್ರಿಕೆಯನ್ನು ಪರಿಶೀಲಿಸುತ್ತಿದ್ದಾರೆ. ತುಷಾರ್ ಶಾಲಾ ಶೌಚಾಲಯ ಪ್ರವೇಶಿಸಿದ ಬಳಿಕ ಕೆಲವು ವಿದ್ಯಾರ್ಥಿಗಳು ಅಲ್ಲಿಗೆ ಹೋಗಿರುವುದು ಸಿಸಿಟಿವಿ ಚಿತ್ರಿಕೆಯಲ್ಲಿ ಕಂಡು ಬಂದಿದೆ.
ಈ ನಿಗೂಢ ಕೊಲೆ ಪ್ರಕರಣ್ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.