ನವದೆಹಲಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಸಮಾಜಿಕ ಜಾಲತಾಣದಲ್ಲಿ ಹಾಕಿದ್ದ ಎಲ್ಲ ಪೋಸ್ಟ್‌ಗಳನ್ನು 24 ಗಂಟೆ ಒಳಗಾಗಿ ಡಿಲೀಟ್ ಮಾಡುವಂತೆ ಸುಪ್ರೀಂಕೋರ್ಟ್ ಡಿ.ರೂಪಾ ಅವರಿಗೆ ಗುರುವಾರ ನಿರ್ದೇಶಿಸಿದೆ.
ರೂಪಾ ಅವರ ವಿರುದ್ಧ ರೋಹಿಣಿ ಸಿಂಧೂರಿ ಅವರು ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ರೂಪಾ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಓಕಾ ಹಾಗೂ ನ್ಯಾಯಮೂರ್ತಿ ಪಂಕಜ್ ಮಿಥಲ್ ಅವರ ನ್ಯಾಯಪೀಠ ವಿಚಾರಣೆ ನಡೆಸಿದೆ.
ಈ ವೇಳೆ ರೋಹಿಣಿ ವಿರುದ್ಧದ ಪೋಸ್ಟ್‌ಗಳನ್ನು ತೆಗದುಹಾಕಲು 24 ಗಂಟೆಗಳ ಗಡುವನ್ನು ಮೌಖೀಕವಾಗಿ ನ್ಯಾಯಾಲಯ ನೀಡಿದೆ. ಜತೆಗೆ ಎಲ್ಲ ಪೋಸ್ಟ್‌ಗಳನ್ನು ಡಿಲೀಟ್ ಮಾಡಲು ಸಾಧ್ಯವಾಗದಿದ್ದರೆ, ರೋಹಿಣಿ ಅವರ ವಿರುದ್ಧ ನಾನು ಈವರೆಗೆ ನೀಡಿದ ಎಲ್ಲ ಹೇಳಿಕೆಗಳನ್ನೂ ಹಿಂಪಡೆಯುತ್ತಿದ್ದೇನೆ ಎಂದು ಹೊಸ ಪೋಸ್ಟ್ ಒಂದನ್ನು ಹಾಕುವಂತೆ ರೂಪಾ ಅವರಿಗೆ ಸೂಚನೆ ನೀಡಿದೆ.
ಕರ್ನಾಕಟದ ಉನ್ನತ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಮತ್ತು ರೂಪಾ ನಡುವೆ ಜಾಲತಾಣದಲ್ಲೇ ಬಹಿರಂಗ ಜಟಾಪಟಿ ನಡೆದಿತ್ತು. ಈ ವೇಳೆ ರೋಹಿಣಿ ಅವರ ಕೆಲ ಖಾಸಗಿ ಫೋಟೋಗಳನ್ನು ರೂಪಾ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಹಲವು ಆರೋಪಗಳನ್ನು ಮಾಡಿದ್ದರು. ಭ್ರಷ್ಟಾಚಾರದ ಆರೋಪಗಳೂ ರೋಹಿಣಿ ಅವರ ವಿರುದ್ಧ ಮಾಡಲಾಗಿತ್ತು. ಆ ಬಳಿಕ ರೋಹಿಣಿ ಸಿಂಧೂರಿ ಅವರು ಡಿ.ರೂಪಾ ವಿರುದ್ಧ ಮಾನನಷ್ಟ ಆರೋಪದ ಮೊಕದ್ದಮೆ ಹೂಡಿದ್ದರು.
ಪ್ರಕರಣವನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ನ್ಯಾಯಾಲಯ ಸೂಚಿಸಿತ್ತು. ಅದೂ ವಿಫಲವಾದ ಹಿನ್ನೆಲೆಯಲ್ಲಿ ಆಡಳಿತದ ಬಗೆಗಿನ ಕಾಳಜಿಯಿಂದ ಅರ್ಜಿಯನ್ನು ಆಲಿಸಿದೆ. ಇಬ್ಬರೂ ಅಧಿಕಾರಿಗಳು ಖುದ್ದು ಹಾಜರಾಗಿದ್ದಾಗ ರೂಪಾ ಅವರಿಗೆ ಪೋಸ್ಟ್‌ಗಳನ್ನು ತೆಗೆಯಲು ಸೂಚನೆ ನೀಡಿದ್ದು, ಈ ಸಂಬಂಧಿಸಿದಂತೆ ಶುಕ್ರವಾರ ಅಫಿಡವಿಟ್ ಸಲ್ಲಿಸುವಂತೆಯೂ ತಿಳಿಸಿದೆ.