ನವದೆಹಲಿ: ಯೋಧರು ಮತ್ತು ಸೇನಾ ಅಧಿಕಾರಿಗಳು ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸುವ ಭಾರತೀಯ ಸೇನೆಯ ಇತ್ತೀಚಿನ ನೀತಿಯನ್ನು ಪ್ರಶ್ನಿಸಿರುವ ಹಿರಿಯ ಸೇನಾಧಿಕಾರಿಗೆ ಯಾವುದೇ ಮಧ್ಯಂತರ ಪರಿಹಾರ ನೀಡಲು ದೆಹಲಿ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.
ಮಾತ್ರವಲ್ಲದೆ ನಿಮ್ಮಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಿ, ಇಲ್ಲವೇ ಭಾರತೀಯ ಸೇನಾಪಡೆಯ ಹುದ್ದೆಗೆ ರಾಜಿನಾಮೆ ನೀಡಿ ಎಂದು ಹೈಕೋರ್ಟ್ ತಾಕೀತು ಮಾಡಿದೆ,
ರಾಷ್ಟ್ರದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸೇನಾ ಸಿಬ್ಬಂದಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವ ಮತ್ತು ಎಲ್ಲಾ ಖಾತೆಗಳನ್ನು ಡಿಲೀಟ್ ಮಾಡುವ ನೀತಿಯನ್ನು ತೆಗೆದುಕೊಳ್ಳಲಾಗಿದೆ. ಅದ್ದರಿಂದ ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡುವುದು ಇಲ್ಲವೇ ಸೇನಾಪಡೆಯ ಹುದ್ದೆಯಲ್ಲಿ ಮುಂದುವರೆಯುವುದು, ಎರಡರಲ್ಲಿ ಯಾವುದಾದರೂ ಒಂದು ಆಯ್ಕೆ ಮಾಡಿಕೊಳ್ಳುವಂತೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜೀವ್ ಸಹಾಯ್ ಮತ್ತು ಆಶಾ ಮೆನನ್ ಅವರಿದ್ದ ನ್ಯಾಯಪೀಠ ಸೂಚನೆ ನೀಡಿದೆ.
ಇದಕ್ಕೂ ಮುನ್ನ ಅರ್ಜಿ ಸಲ್ಲಿಸಿದ್ದ ಸೇನಾಧಿಕಾರಿ, ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ಸೇರಿ ಸಾಮಾಜಿಕ ಜಾಲತಾಣದ ಖಾತೆಗಳನ್ನು ರದ್ದು ಮಾಡುವುದರಿಂದ ಇದುವರೆಗೂ ಸಾಧಿಸಿರುವ ಸಂಪರ್ಕಗಳು ಕೈತಪ್ಪಿಹೋಗುತ್ತದೆ. ಮತ್ತೆ ಅವುಗಳನ್ನು ಪಡೆಯುವುದು ಅಸಾಧ್ಯ. ಅದ್ದರಿಂದ ಫೇಸ್ ಬುಕ್ ಖಾತೆಯನ್ನು ಹೊಂದಿರಲು ಅವಕಾಶ ಮಾಡಿಕೊಡುವಂತೆ ಭಾರತೀಯ ಸೇನಾಪಡೆಗೆ ಸೂಚಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದರು.