ನವದೆಹಲಿ: ಮಾನಸಿಕ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಗೆ ಸಂಬಂಧಿಸಿದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕ್ಯೂಲೇಟ್ ಆಗುತ್ತಿದ್ದು, ಇದು ಕೆಟ್ಟ ಚಾಳಿಯಾಗಿದೆ ಎಂದು ಟ್ವೀಟ್ ಮಾಡಿರುವ ಮಹಾರಾಷ್ಟ್ರ ಪೊಲೀಸರು, ಇಂತಹ ಪೋಟೋಗಳನ್ನು ಶೇರ್ ಮಾಡಿದರೆ ಕಾನೂನನ್ನು ಮೈಮೇಲೆ ಎಳೆದುಕೊಂಡಂತೆ, ಕೂಡಲೇ ಅಂತಹ ಫೋಟೋಗಳನ್ನು ಡಿಲೀಟ್ ಮಾಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಂಬೈನ ಬಾಂದ್ರಾದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್ ಮೃತದೇಹದ ಫೋಟೋಗಳನ್ನು ಶೇರ್ ಮಾಡುತ್ತಿರುವ ಬಗ್ಗೆ ಮುಂಬೈ ಪೊಲೀಸರು ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿ ಹೇಳಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮೃತ ಸುಶಾಂತ್ ಸಿಂಗ್ ರಜಪೂತ್ ಫೋಟೋಗಳು ಹರಿದಾಡುತ್ತಿರುವುದನ್ನು ಮಹಾರಾಷ್ಟ್ರ ಸೈಬರ್ ವಿಭಾಗ ಪತ್ತೆ ಹಚ್ಚಿದ್ದು, ಇದು ತುಂಬಾ ಕಿರಿಕಿರಿಯುಂಟು ಮಾಡುತ್ತಿದೆ. ಯಾರಾದರೂ ಇಂತಹ ಫೋಟೊಗಳನ್ನು ಅಪ್ ಲೋಡ್ ಮಾಡಿದ್ದರೆ ಡಿಲೀಟ್ ಮಾಡಿ ಎಂದು ಟ್ವೀಟ್ ನಲ್ಲಿ ಸೂಚಿಸಿದ್ದಾರೆ.
ಇಂತಹ ಫೋಟೊಗಳನ್ನು ಹರಿಯಬಿಡುವುದು ಕಾನೂನು ವ್ಯಾಪ್ತಿಯನ್ನು ಉಲ್ಲಂಘಿಸಿದಂತೆ. ಅಷ್ಟೇ ಅಲ್ಲ ಕೋರ್ಟ್ ನಿರ್ದೇಶನವನ್ನೂ ಉಲ್ಲಂಘಿಸಿದಂತೆ ಇದರಿಂದ ನೀವೇ ಕಾನೂನು ಕುಣಿಕೆಯನ್ನು ಆಹ್ವಾನಿಸಿಕೊಂಡಂತೆ ಆಗುತ್ತದೆ ಎಂದು ಮತ್ತೊಂದು ಟ್ವೀಟ್ ನಲ್ಲಿ ಮುಂಬೈ ಪೊಲೀಸರು ಎಚ್ಚರಿಕೆಯನ್ನು ರವಾನಿಸಿದ್ದಾರೆ.