Advertisement

ಕರಾವಳಿ ಮೀನುಗಾರರ ಬೇಡಿಕೆ ಈಡೇರಿಕೆಗೆ ಆಗ್ರಹ; ನಾಳೆ ಮುಖ್ಯಮಂತ್ರಿ ಬಳಿಗೆ ನಿಯೋಗ

01:44 AM Feb 11, 2020 | Team Udayavani |

ಮಲ್ಪೆ: ಕರಾವಳಿಯ ಮೀನುಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಡಾ| ಜಿ. ಶಂಕರ್‌ ನೇತೃತ್ವದ ಮೀನುಗಾರರ ನಿಯೋಗವು ಫೆ. 12ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ನೀಡಿ ಆಗ್ರಹಿಸಲಿದೆ.

Advertisement

ಬೇಡಿಕೆಗಳೇನು?
ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ತತ್‌ಕ್ಷಣ ಮಹಿಳಾ ಮೀನುಗಾರರ ಸಾಲ ಮನ್ನಾ ಘೋಷಣೆಯನ್ನು ಮಾಡಿದ್ದಾರೆ. ಆದರೆ ಆ ಯೋಜನೆಯಲ್ಲಿ ಬಹಳಷ್ಟು ಗೊಂದಲಗಳಿದ್ದು, 27 ಸಾವಿರ ಮಹಿಳಾ ಮೀನುಗಾರರು ಬ್ಯಾಂಕಿನಲ್ಲಿ ಸುಸ್ತಿದಾರರಾಗಿ ಸಂಕಷ್ಟದಲ್ಲಿದ್ದಾರೆ. ಮಹಿಳಾ ಮೀನುಗಾರರ ಸಾಲ ಮಂಜೂರಾತಿ ಮಾಡುವಾಗ ಕೈಗೊಂಡ ಮಾನದಂಡವನ್ನೇ ಅನುಸರಿಸಿಕೊಂಡು ಸಾಲ ಮನ್ನಾ ಯೋಜನೆಯನ್ನು ಕೈಗೊಳ್ಳಬೇಕು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಘೋಷಣೆಯಾದ ಸಾಲ ಮನ್ನಾವನ್ನು ಸಹಕಾರಿ ಬ್ಯಾಂಕ್‌ಗಳಿಗೂ ವಿಸ್ತರಿಸಬೇಕು. ಕರಾವಳಿ ಮತ್ತು ಒಳನಾಡು ಮೀನುಗಾರಿಕೆಗೆ ಸಮಗ್ರ ಹೊಸ ನೀತಿ ರಚಿಸಬೇಕು. ಮತ್ಸಾಶ್ರಯ ಯೋಜನೆಯಡಿ ಸೂಕ್ತ ಕ್ರಮ ಕೈಗೊಂಡು ಮೀನುಗಾರರಿಗೆ ಮನೆಗಳನ್ನು ಮಂಜೂರು ಗೊಳಿಸಬೇಕು. ಕೇಂದ್ರ ಪುರಸ್ಕೃತ ಯೋಜನೆಯಡಿ ಹಣ ಬಿಡುಗಡೆಯಾಗದೆ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಪುನರ್‌ ಪ್ರಾರಂಭಿಸಬೇಕು.

ಈಗಾಗಲೇ ಮುಖ್ಯಮಂತ್ರಿಗಳ ಮೂಲಕ ಗಂಗಾಮತಸ್ಥ ಮತ್ತು 39 ಉಪಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸುವಂತೆ ಸಲ್ಲಿಸಲಾದ ಪ್ರಸ್ತಾವದ ಕುರಿತು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು. ಒಣ ಮೀನು ವ್ಯಾಪಾರಸ್ಥರಿಗೆ ಕೇಂದ್ರ ಪುರಸ್ಕೃತ ಯೋಜನೆಯಂತೆ ಸೋಲಾರ್‌ ಡ್ರಯರ್‌ ಖರೀದಿಸಲು ವಿಶೇಷ ಸಹಾಯಧನ ಒದಗಿಸಬೇಕು.

ಮೀನುಗಾರಿಕೆಗೆ ಕರರಹಿತ ಡೀಸೆಲ್‌ ಮೇಲೆ ವಿಧಿಸುತ್ತಿರುವ ರಸ್ತೆ ಕರವನ್ನು ಮನ್ನಾ ಮಾಡಬೇಕು. ರಾಜ್ಯದ ಎಲ್ಲ ಬಂದರುಗಳಲ್ಲಿ ಬ್ರೇಕ್‌ ವಾಟರ್‌ ನಿರ್ಮಾಣ, ಕರರಹಿತ ಡೀಸೆಲ್‌ ಪ್ರಮಾಣ ದಿನಕ್ಕೆ 300 ಲೀ.ನಿಂದ 500 ಲೀ.ಗೆ ಹೆಚ್ಚಳ, ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಕರರಹಿತ ಸೀಮೆಎಣ್ಣೆಯನ್ನು ಪ್ರತಿ ಪರ್ಮಿಟ್‌ಗೆ 400 ಲೀ.ನಂತೆ ನೀಡುವುದು. ಇವೇ ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ, ಮುಖ್ಯಮಂತ್ರಿ, ಮೀನುಗಾರಿಕೆ ಸಚಿವರು, ಸಂಸದರು ಹಾಗೂ ಕರಾವಳಿ ಜಿಲ್ಲೆಯ ಎಲ್ಲ ಶಾಸಕರನ್ನು ಡಾ| ಜಿ. ಶಂಕರ್‌ ಅವರ ನೇತೃತ್ವದ ಮೀನುಗಾರರ ನಿಯೋಗದ ಮೂಲಕ ಒತ್ತಾಯಿಸಲಾಗುವುದು ಎಂದು ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಮೆಯಾಗದ ಡೀಸೆಲ್‌ ಸಬ್ಸಿಡಿ
5 ತಿಂಗಳಿನಿಂದ ಮೀನುಗಾರಿಕೆಗೆ ಬಳಸುವ ಡೀಸೆಲ್‌ ಸಬ್ಸಿಡಿ ಮೊತ್ತ ಬ್ಯಾಂಕ್‌ ಖಾತೆಗೆ ಜಮೆಯಾಗದೆ ಮೀನುಗಾರರು ತೊಂದರೆ ಅನುಭವಿಸುತ್ತಿದ್ದು, ಪ್ರತೀ ತಿಂಗಳ 5ರೊಳಗೆ ಖಾತೆಗೆ ಜಮೆಯಾಗುವಂತೆ ಇಲಾಖಾ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ನಿಯೋಗ ಮನವಿ ಮಾಡಲಿದೆ.

Advertisement

ಸುವರ್ಣ ತ್ರಿಭುಜ: ಪರಿಹಾರಕ್ಕೆ ಆಗ್ರಹ
ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟ್‌ ಅವಘಡದಲ್ಲಿ ನಾಪತ್ತೆಯಾದ ಏಳು ಮೀನುಗಾರರ ಕುಟುಂಬಗಳಿಗೆ ವಿಶೇಷ ಪರಿಹಾರವಾಗಿ ತಲಾ 25 ಲಕ್ಷ ರೂ. ನೀಡಬೇಕು ಮತ್ತು ಬೋಟಿನ ವಿಮಾ ಮೊತ್ತಕ್ಕೆ ಸಂಬಂಧಪಟ್ಟಂತೆ ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next