ಇಂಡಿ: ರಾಜ್ಯಾದ್ಯಂತ ಸರ್ಕಾರಿ ಕಾಲೇಜುಗಳಲ್ಲಿರುವ ಬಾಲಕಿಯರಿಗೆ ಕರಾಟೆ ತರಬೇತಿ ನೀಡಲು ಸರ್ಕಾರ ಆದೇಶ ಹೊರಡಿಸಿದ್ದು ಇದನ್ನು ಬಾಲಕರಿಗೂ ವಿಸ್ತರಿಸುವಂತೆ ಕೋರಿ ಶೀಘ್ರ ಬೆಂಗಳೂರಿಗೆ ನಿಯೋಗ ತೆರಳಿ ಮುಖ್ಯಮಂತ್ರಿ, ಶಿಕ್ಷಣ ಮಂತ್ರಿ ಮತ್ತು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂತ್ರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಕರಾಟೆ ಡೂ ಸಂಸ್ಥೆ ರಾಜ್ಯಾಧ್ಯಕ್ಷ ಶಿವಕುಮಾರ ಶಾರದಳ್ಳಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ವಿಜಯಪುರ ಜಿಲ್ಲಾ ಕರಾಟೆ ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಅವರು, ಸರಕಾರದ ಈ ನಡೆಗೆ ಸ್ವಾಗತಿಸುತ್ತೇವೆ. ಹೆಣ್ಣುಮಕ್ಕಳ ಪ್ರಾಣ, ಮಾನ ಉಳಿವಿಗೆ ಈ ಕ್ರಮ ಕೈಗೊಂಡಿದ್ದು ಸಂತಸ ತಂದಿದೆ. ಶಾಲಾ ಗಂಡು ಮಕ್ಕಳಿಗೂ ಇದನ್ನು ವಿಸ್ತರಿಸಬೇಕೆಂದು ಸರಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.
2012ರಿಂದಲೂ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಮಕ್ಕಳಿಗೆ ಕರಾಟೆ ತರಬೇತಿ ದೊರಕುವಂತೆ ನೋಡಿಕೊಳ್ಳಲಾಗಿದೆ. ಸರ್ಕಾರದ ತಪ್ಪು ತಡೆಗಳನ್ನು ಗಮನ ಸೆಳೆದು ಸರ್ಕಾರದ ಪ್ರತಿನಿ ಧಿಗಳಿಗೆ ಕಾಲ ಕಾಲಕ್ಕೆ ಮನವಿ ಸಲ್ಲಿಸಿ ಎಚ್ಚರಿಸುವ ಕೆಲಸವನ್ನೂ ಮಾಡಲಾಗಿದೆ. ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ದೊರಕುವಂತೆ ನೋಡಿಕೊಳ್ಳುವಲ್ಲಿ ನಮ್ಮ ಸಂಘಟನೆಯ ಅದರಲ್ಲೂ ವಿಜಯಪುರದ ಕರಾಟೆ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಕರಾಟೆ ಶಿಕ್ಷಕರು ಒಗ್ಗಟ್ಟಿನಿಂದಿದ್ದು ನಮ್ಮ ಶಕ್ತಿ ಪ್ರದರ್ಶಿಸಬೇಕು ಎಂದರು.
ಬುಡೋಕಾನ್ ಇಂಟರ್‌ನ್ಯಾಷನಲ್ ಕರಾಟೆ ಸಂಸ್ಥೆಯ ಜಿಲ್ಲಾಧ್ಯಕ್ಷ ಎ.ಎಸ್. ಪಟೇಲ್ ಮಾತನಾಡಿ, ಜಿಲ್ಲೆಯ ಎಲ್ಲ ಕರಾಟೆ ಶಿಕ್ಷಕರು ಸಂಘಟಿತರಾಗಿ ನಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಬೇಕು. ಇದರಿಂದ ಎಲ್ಲರಿಗೂ ಕರಾಟೆ ತರಬೇತಿ ನೀಡುವ ಮತ್ತು ಎಲ್ಲರೂ ಕರಾಟೆ ಕಲಿಯುವ ಅವಕಾಶ ದೊರಕುತ್ತದೆ ಎಂದರು. ಉತ್ತರ ಕರ್ನಾಟಕ ಟೆಕ್ವಾಂಡೊ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ರಾಠೊಡ ಮಾತನಾಡಿ, ಜಿಲ್ಲೆಯಲ್ಲಿ ಕರಾಟೆ ಶಿಕ್ಷಕರ ಸಂಘಟನೆಯಲ್ಲಿ ಬಲಿಷ್ಠಗೊಳಸಲಾಗುತ್ತಿದ್ದು ಇದಕ್ಕೆ ಎಲ್ಲರೂ ಸಹಕಾರ ಕೊಡಬೇಕು. ಕರಾಟೆ ತರಬೇತಿ ವಿಷಯದಲ್ಲಿ ಅಧಿಕಾರಿಗಳು ನಮ್ಮ ಸಂಘಟನೆಗೆ ಆದ್ಯತೆ ನೀಡುವಂತೆ ಅವರ ಮನವೊಲಿಸಬೇಕು ಎಂದರು.
ಇಂಡಿಯ ಕರಾಟೆ ಶಿಕ್ಷಕ ಅಯೂಬ ನಾಟೀಕಾರ ಮಾತನಾಡಿ, ಹಿಂದಿನ ದಿನಗಳಲ್ಲಿ 5-6 ಕಿ.ಮೀ. ಸೈಕಲ್ ತುಳಿದುಕೊಂಡು ಬಂದು ನಾವೆಲ್ಲ ಕರಾಟೆ ಕಲಿತಿದ್ದೇವೆ. ಇದೀಗ ಸರ್ಕಾರ ಕಲಿಯುವವರ ಹತ್ತಿರವೇ ಕರಾಟೆಯನ್ನು ತಂದಿದೆ. ಎಲ್ಲ ಶಿಕ್ಷಕರು ಒಗ್ಗಟ್ಟಿನಿಂದಿದ್ದು ಸರ್ಕಾರದ ಈ ಸೌಲಭ್ಯವನ್ನು ಎಲ್ಲ ಮಕ್ಕಳಿಗೂ ತಲುಪಿಸುವಲ್ಲಿ ಭೇದ ತೋರದೆ ಶ್ರಮಿಸಬೇಕು ಎಂದರು.
ದೈಹಿಕ ಶಿಕ್ಷಕರೂ ಆಗಿರುವ ಕರಾಟೆ ತರಬೇತುದಾರ ಅನಿಲ ಖುದಾನಪುರ, ಸಿಂದಗಿಯ ಖಾಜಾ ಪಟೇಲ್ ಅವರು ಕರಾಟೆ ತರಬೇತಿ ಕುರಿತು ಮಾತನಾಡಿದರು. ಇಂಡಿಯ ಯಮಾಗುಚಿ ಕರಾಟೆ ಸಂಸ್ಥೆಯ ವಿಜಯಪುರದ ಬುಡೋಕಾನ್ ಕರಾಟೆ ಸಂಸ್ಥೆ, ವಿಜಯಪುರದ ಉತ್ತರ ಕರ್ನಾಟಕ ಟೆಕ್ವಾಂಡೋ ಸಂಸ್ಥೆ, ಕರಾಟೆ ಡೂ ಅಸೋಶಿಯೇಷನ್, ಗೋಜುರೋ ಕರಾಟೆ ಡೂ ಸಂಸ್ಥೆ ಸೇರಿ ಹಲವು ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.
ಬಸವನಬಾಗೇವಾಡಿ, ಇಂಡಿ, ತಾಳಿಕೋಟೆ, ಮುದ್ದೇಬಿಹಾಳ, ವಿಜಯಪುರ ಸೇರಿದಂತೆ ಜಿಲ್ಲೆಯ 40ಕ್ಕೂ ಹೆಚ್ಚು ಕರಾಟೆ ಶಿಕ್ಷಕರು ಪಾಲ್ಗೊಂಡಿದ್ದರು. ಎಂ.ಎಲ್. ಚೌಧರಿ ಸ್ವಾಗತಿಸಿದರು. ಗೌರೀಶ ಕಟ್ಟಿಮನಿ ವಂದಿಸಿದರು.