ಬೀದರ: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಜಾಗೃತ ಕೋಶ) ವರದಿ ಪಡೆದ ನಂತರವೇ ಗೊಂಡ ಸೇರಿದಂತೆ ವಿವಿಧ ಜಾತಿಗಳ ಸಿಂಧುತ್ವ ಪ್ರಮಾಣಪತ್ರ ನೀಡುವಂತೆ ಹೊರಡಿಸಿರುವ ಆದೇಶ ಹಿಂಪಡೆಯಲು ಒತ್ತಾಯಿಸಿ ಜಿಲ್ಲೆಯ ಗೊಂಡ ಸಮುದಾಯದ ಮುಖಂಡರು ನವೆಂಬರ್ ಮೊದಲ ವಾರದಲ್ಲಿ ಜನಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಬಳಿಗೆ ನಿಯೋಗ ಒಯ್ಯಲು ನಿರ್ಧರಿಸಿದ್ದಾರೆ.
ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಕಲಬುರ್ಗಿ-ಬೀದರ-ಯಾದಗಿರಿ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ, ರಾಜ್ಯ ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತರಾವ್ ಚಿದ್ರಿ ಹಾಗೂ ಜಿಲ್ಲಾ ಗೊಂಡ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಾಳಗೆ ಈ ಮಾಹಿತಿ ನೀಡಿದರು.
ಜಿಲ್ಲಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗೊಂಡ ಸಂಘದ ಅಧ್ಯಕ್ಷ ಬಾಬುರಾವ್ ಮಲ್ಕಾಪೂರ ಹಾಗೂ ಜಿಪಂ ಮಾಜಿ ಅಧ್ಯಕ್ಷ ವಿಜಯಕುಮಾರ ಕಾಂಶೆಂಪೂರ ಅವರ ನೇತೃತ್ವದಲ್ಲಿ 24 ಗೊಂಡ ಸಮುದಾಯದ ಮುಖಂಡರ ನಿಯೋಗ ಒಯ್ಯಲಾಗುವುದು. ಕಾಗಿನೆಲೆ ಕನಕಗುರುಪೀಠದ ಶ್ರೀಗಳು, ಸಮುದಾಯದವರೇ ಆಗಿರುವ ಸಚಿವರಾದ ಕೆ.ಎಸ್. ಈಶ್ವರಪ್ಪ, ಬಸವರಾಜ ಭೈರತಿ, ಎಂ.ಟಿ.ಬಿ. ನಾಗರಾಜ, ಮಾಜಿ ಸಚಿವ ಎಚ್. ಎಂ. ರೇವಣ್ಣ, ಶಾಸಕ ಬಂಡೆಪ್ಪ ಕಾಶೆಂಪೂರ ಹಾಗೂ ಎಂಎಲ್‌ಸಿ ರಘುನಾಥರಾವ್ ಮಲ್ಕಾಪೂರೆ ಅವರ ಮುಂದಾಳತ್ವದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಮುದಾಯದ ಬೇಡಿಕೆ ಕುರಿತು ಗಮನ ಸೆಳೆಯಲಾಗುವುದು ಎಂದರು.
ಸುಳ್ಳು ಜಾತಿ ಸಿಂಧುತ್ವ ಪ್ರಮಾಣ ಪತ್ರ ತಡೆಯುವ ದಿಸೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯು ಸರ್ಕಾರದ ಇಲಾಖೆಗಳು ಹಾಗೂ ಸಂಸ್ಥೆಗಳಿಗೆ ಉದ್ಯೋಗಕ್ಕೆ ಆಯ್ಕೆಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೆಲ ಜಾತಿಗಳ ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ನಾಗರಿಕ ಹಕ್ಕು ನಿರ್ದೇಶನಾಲಯ (ಜಾಗೃತ ಕೋಶ)ದ ವರದಿ ಕಡ್ಡಾಯಗೊಳಿಸಿರುವುದು ಅನ್ಯಾಯವಾಗಿದೆ ಎಂದು ದೂರಿದರು.
ಎಲ್ಲ ಜಾತಿಗಳ ಸಿಂಧುತ್ವ ಪ್ರಮಾಣಪತ್ರ ವಿತರಣೆ ನಿಯಮ ಒಂದೇ ಆಗಿರಬೇಕು. ಆದರೆ, ಗೊಂಡ, ರಾಜಗೊಂಡ, ನಾಯ್ಕಪೋಡ, ಜೇನು ಕುರುಬ, ಕಾಡು ಕುರುಬ, ಟೋಕರೆ ಕೋಳಿ ಸೇರಿದಂತೆ ಕೆಲ ಜಾತಿಗಳ ಸಿಂಧುತ್ವಕ್ಕೆ ಮಾತ್ರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ವರದಿ ಕಡ್ಡಾಯಗೊಳಿಸಿರುವುದು ಸರಿಯಲ್ಲ. ಇದರಿಂದಾಗಿ ಸಮುದಾಯದ ಅಭ್ಯರ್ಥಿಗಳು ತೀವ್ರ ಪರದಾಡುವಂತಾಗಿದೆ. ಹೀಗಾಗಿ ಕೂಡಲೇ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಗೊಳ್ಳಿ ರಾಯಣ್ಣ ಗೊಂಡ ಸಂಘದ ಅಧ್ಯಕ್ಷ ಬಾಬುರಾವ್ ಮಲ್ಕಾಪೂರ, ಜಿಪಂ ಮಾಜಿ ಅಧ್ಯಕ್ಷ ವಿಜಯಕುಮಾರ ಕಾಶೆಂಪೂರ, ಮುಖಂಡರಾದ ಎಂ.ಎಸ್. ಕಟಗಿ, ಮಾಳಪ್ಪ ಅಡಸಾರೆ, ರವಿ ಕಣಜಿ, ನಗರಸಭೆ ಸದಸ್ಯ ಹಣಮಂತ, ಗಣಪತಿ ಕಮಠಾಣ ಸುದ್ದಿಗೋಷ್ಠಿಯಲ್ಲಿ ಇದ್ದರು.
ಕೆಲ ಜಾತಿಗಳ ಎಳ್ಗೆಯನ್ನು ಸಹಿಸಲಾಗುತ್ತಿಲ್ಲ. ಈ ಕಾರಣಕ್ಕಾಗಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಈ ರೀತಿ ಆದೇಶ ಹೊರಡಿಸಿ ಸ್ವಜಾತಿ ಪ್ರೇಮ ಮೆರೆಯುತ್ತಿದ್ದಾರೆ. ಇದರಿಂದ ಗೊಂಡ, ರಾಜಗೊಂಡ ಮತ್ತು ಟೋಕರಿ ಕೋಳಿ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದು, ಇದು ಸಂವಿಧಾನದ ಕಲಂ 15ರ ಸ್ಪಷ್ಟ ಉಲ್ಲಂಘನೆಯಾಗಲಿದೆ. ಆಗಿರುವ ಅನ್ಯಾಯವನ್ನು ಸಿಎಂ ಸರಿಪಡಿಸದಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ.
-ಬಸವರಾಜ ಮಾಳಗೆ, ಜಿಲ್ಲಾ ಗೊಂಡ ನೌಕರರ ಸಂಘದ ಅಧ್ಯಕ್ಷ