Advertisement

ಬಾಪೂಜಿ ಕೇಂದ್ರ ಆರಂಭಕ್ಕೆ ಮೀನಮೇಷ 

04:49 PM Nov 28, 2018 | |

ಗೋಕಾಕ: ಸರ್ಕಾರ ರಾಜ್ಯಾದ್ಯಂತ ಬಾಪೂಜಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಆದೇಶ ನೀಡಿದ್ದರೂ ತಾಲೂಕಿನಲ್ಲಿ ರೈತರಿಗೆ ಹಾಗೂ ಗ್ರಾಮಾಂತರ ಪ್ರದೇಶದ ಜನರಿಗೆ ಅನುಕೂಲವಾಗುವ ಬಾಪೂಜಿ ಸೇವಾ ಕೇಂದ್ರಗಳು ಇನ್ನೂ ಆರಂಭಗೊಂಡಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರು ತಾಲೂಕು ಕೇಂದ್ರಕ್ಕೆ ಎಡತಾಕುವಂತಾಗಿದೆ.

Advertisement

ರಾಜ್ಯದ ಪ್ರತಿ ಗ್ರಾಪಂನಲ್ಲಿ ವಿವಿಧ ಇಲಾಖೆಗಳ 50ಕ್ಕೂ ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯ ಸರಕಾರ 2016ರಲ್ಲಿ ಒಂದು ಆದೇಶ ಹೊರಡಿಸಿ ಪ್ರತಿ ಗ್ರಾಪಂನಲ್ಲಿ ಗ್ರಾಮೀಣ ಜನತೆಗೆ ಪ್ರಮುಖವಾಗಿ ಬೇಕಾಗುವ ಜಾತಿ ಆದಾಯ ಪ್ರಮಾಣ ಪತ್ರ, ಉತಾರ (ಪಹಣಿ), ಖಾತೆ ಬದಲಾವಣೆ, ವಿಧವಾ, ವೃದ್ಧಾಪ್ಯ, ವಿಧವಾ, ಸಂಧ್ಯಾ ಸುರಕ್ಷಾ, ಗೇಣಿ ರಹಿತ, ಜನನ ಮರಣ, ರಹವಾಸಿ ಸೇರಿದಂತೆ ವಿವಿಧ 43 ಸೇವೆಗಳನ್ನು’ಗ್ರಾಪಂ-100′ ಯೋಜನೆಯನ್ವಯ ಒದಗಿಸುವ ಗುರಿ ಹೊಂದಲಾಗಿತ್ತು. ಈ ಬಗ್ಗೆ ಪಿಡಿಒ ಹಾಗೂ ಕಂಪ್ಯೂಟರ್‌ ಆಪರೇಟರ್‌ಗಳಿಗೆ ತರಬೇತಿ ಕೂಡಾ ನೀಡಲಾಗಿದೆ. ಅಲ್ಲದೇ ಬಾಪೂಜಿ ಸೇವಾ ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಭಿತ್ತಿಪತ್ರ ತಯಾರಿಸಿ ಪ್ರತಿ ನಾಡ ಕಚೇರಿ ಮುಂದೆ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಲು ಸರಕಾರ ಆದೇಶ ನೀಡಿದ್ದರೂ ಈವರೆಗೆ ತಾಲೂಕಿನ ಯಾವ ನಾಡಕಚೇರಿ ಮುಂದೆ ಬೋರ್ಡ್‌ ಕಂಡು ಬರುತ್ತಿಲ್ಲ.

ತಾಲೂಕಿನಲ್ಲಿ ಒಟ್ಟು 56 ಗ್ರಾಪಂಗಳಿದ್ದು, ಅವುಗಳ ಮೇಲ್ವಿಚಾರಣೆ ತಾಪಂ ಇಒಗಳಿದ್ದರೂ ಅವರು ಕೂಡಾ ಮೌನವಹಿಸಿದ್ದಾರೆ. ಸರ್ಕಾರ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇವೆ ಸಲ್ಲಿಸಲು ಮುಂದಾದರೆ ತಾಲೂಕಿನಲ್ಲಿ ಬಾಪೂಜಿ ಸೇವಾ ಕೇಂದ್ರಗಳಿಗೆ ಬೆಲೆ ಇಲ್ಲದಂತಾಗಿದೆ. ಇದರ ಬಗ್ಗೆ ಚುನಾಯಿತ ಜನಪ್ರತಿನಿಧಿಗಳು ಮತ್ತು ಸಂಬಂಧಿ ಸಿದ ಅಧಿಕಾರಿಗಳು ಗಮನ ಹರಿಸಬೇಕು. ತಾಲೂಕಿನವರೇ ಆದ ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಅವಶ್ಯಕ ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಡಿಸಿ ಗಮನಕ್ಕೆ ತರಲಾಗಿದೆ
ರೈತರಿಗಾಗುವ ತೊಂದರೆ ಗಮನಿಸಿ ತಾಲೂಕಿನ ಗ್ರಾಪಂಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ಆರಂಭವಾಗದಿರುವ ಬಗ್ಗೆ ಜಿಲ್ಲಾಧಿಕಾರಿಗಳು ಕರೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ. ಅಲ್ಲದೇ ಸೇವಾ ಕೇಂದ್ರಗಳನ್ನು ಆಯಾ ಗ್ರಾಪಂಗಳಲ್ಲಿ ಆರಂಭಿಸುವಂತೆ ಈಗಾಗಲೇ ತಾಪಂ ಇಒಗಳಿಗೆ ತಿಳಿಸಲಾಗಿದೆ.
 ಜಿ.ಎಸ್‌.ಮಳಗಿ, ತಹಶೀಲ್ದಾರ್‌.

ಹೋರಾಟ ಎಚ್ಚರಿಕೆ
ಸರ್ಕಾರ ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಅಧಿಕಾರಿಗಳ ನಿರುತ್ಸಾಹದಿಂದ ಅವು ಜಾರಿಯಾಗುತ್ತಿಲ್ಲ. ಗೋಕಾಕ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿಯೇ ಬಾಪೂಜಿ ಸೇವಾ ಕೇಂದ್ರಗಳು ಆರಂಭವಾಗಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಳ್ಳದೇ ಹೋದರೆ ಬರುವ ವಿಧಾನಸಭೆ ಚಳಿಗಾಲದ ಅಧಿವೇಶನ ಸಮಯದಲ್ಲಿ ರೈತ ಸಂಘದಿಂದ ಹೋರಾಟ ಮಾಡಲಾಗುವುದು.
 ಭೀಮಶಿ ಗದಾಡಿ
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷರು.

Advertisement

ಗ್ರಾಮಗಳಲ್ಲೇ ವಿತರಣೆಯಾಗಲಿ
ನಮಗೆ ಪಹಣಿ ಪತ್ರಿಕೆಗಳು ಹಾಗೂ ಆಧಾರ್‌ ಕಾರ್ಡ್‌ ಪಡೆಯಬೇಕಾದರೆ ಗೋಕಾಕ ನಗರಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಹೊಲದಲ್ಲಿನ ಕೆಲಸ ಬಿಟ್ಟು ಒಂದು ದಿನ ಪೂರ್ತಿಯಾಗಿ ಸರದಿ ಸಾಲಿನಲ್ಲಿ ನಿಂತು ಪಹಣಿ ಪತ್ರಿಕೆ ಪಡೆಯಬೇಕಾಗುತ್ತದೆ. ಅಧಿಕಾರಿಗಳು ಕೂಡಲೇ ಗ್ರಾಮಗಳಲ್ಲಿ ವಿತರಿಸುವ ಕಾರ್ಯವಾಗಬೇಕು.
ಎಸ್‌.ಆರ್‌.ಮುಕ್ಕಣ್ಣವರ
ಗುಜನಟ್ಟಿ ಗ್ರಾಮಸ್ಥ.

ಮಲ್ಲಪ್ಪ ದಾಸಪ್ಪಗೋಳ 

Advertisement

Udayavani is now on Telegram. Click here to join our channel and stay updated with the latest news.

Next