ರಾಮನಗರ: ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಕಳೆದ ಐದು ತಿಂಗಳಿಂದ ಪಿಂಚಣಿ ವಿತರಣೆಯಾಗದಿರುವುದು, ಸರ್ಕಾರಿ ಖಜಾನೆ ನೀಡಿದ ಅಂಕಿ – ಅಂಶಗಳಿಗೂ ಅಂಚೆ ಇಲಾಖೆ ನೀಡುವ ಅಂಕಿ ಅಂಶಗಳಿಗೂ ತಾಳೆಯಾಗುತ್ತಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಅಂಚೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಳೆದ ಐದು ತಿಂಗಳಿಂದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಪಿಂಚಣಿ ವಿತರಣೆಯಾಗುತ್ತಿಲ್ಲ. ಅದನ್ನೇ ನಂಬಿ ಜೀವನ ನಡೆಸುವ ಅವರು ಜೀವನ ನಡೆಸುವುದಾದರು ಹೇಗೆ ಎಂದು ಪ್ರಶ್ನಿಸಿದರು. ವೃದ್ದರು ಇದೇ ಹಣದಲ್ಲಿ ಔಷಧಿ ಕೊಳ್ಳು ಕಾಯುತ್ತಿರುತ್ತಾರೆ ಅವರ ಬಗ್ಗೆ ಕಾಳಜಿ ವಹಿಸಿ, ಇನ್ನೊಂದು ವಾರದಲ್ಲಿ ಪಿಂಚಣಿ ವಿತರಸಿ ತಮಗೆ ಮಾಹಿತಿ ಕೊಡುವಂತೆ ಸೂಚಿಸಿದರು.
ಈ ವೇಳೆ ಪೋಸ್ಟ್ ಮಾಸ್ಟರ್‌ಗಳು, ಪೋಸ್ಟ್ ಮನ್‌ಗಳು ತಮಗೆ ಸಮಯದ ಅಭಾವವಿದೆ. ಕಚೇರಿಯಲ್ಲಿ ಕಡ್ಡಾಯವಾಗಿ ಇರಬೇಕಾದ ಸಮಯವನ್ನು ಮೊಟಕುಗೊಳಿಸಿದರೆ ಪಿಂಚಣಿ ವಿತರಣೆ ಬಗ್ಗೆ ಗಮನಹರಿಸಲು ಸಾಧ್ಯ ಎಂದು ಇಲಾಖಾಧಿಕಾರಿಗಳಿಗೆ ಮನವಿ ಮಾಡಿಕೊಂಡರು. ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪಂಚಾಯತ್‌ನ ಸಿಇಓ ಎಂ.ಪಿ.ಮುಲ್ಲೈ ಮುಹಿಲನ್, ಅಪರ ಜಿಲ್ಲಾಧಿಕಾರಿಗಳಾದ ಬಿ.ಪಿ.ವಿಜಯ್ ಹಾಜರಿದ್ದರು.
Advertisement
ಗುರುವಾರ ಸಂಜೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಅಂಚೆ ಇಲಾಖೆ, ಖಜಾನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಇನ್ನೊಂದು ವಾರದಲ್ಲಿ ಈ ಬಗ್ಗೆ ವರದಿ ಕೊಡಿ ಎಂದು ಸಂಸದರು ಅಂಚೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಅಂಚೆ ಇಲಾಖೆ ಅಂಕಿ ಅಂಶಗಳು ತಾಳೆ ಆಗುತ್ತಿಲ್ಲ: ಡಿ.ಕೆ.ಸುರೇಶ್ ಗರಂ
ಸಾಮಾಜಿಕ ಭದ್ರತೆಯಡಿ ವಿವಿಧ ಪಿಂಚಣಿ ಯೋಜನೆಯಡಿಯಲ್ಲಿ ಸರ್ಕಾರದ ಅನುದಾನ ಖಜಾನೆಯಿಂದ ಅಂಚೆ ಇಲಾಖೆಗೆ ವರ್ಗಾವಣೆ ಆಗುತ್ತಿದೆ. ಆದರೆ ಖಜಾನೆಯ ಮಾಹಿತಿ ಮತ್ತು ಅಂಚೆ ಇಲಾಖೆಯ ಮಾಹಿತಿಯನ್ನು ತಾಳೆ ಹಾಕಿದರೆ ಸುಮಾರು 2 ಕೋಟಿ ರೂ ವ್ಯತ್ಯಾಸ ವ್ಯಕ್ತವಾಗುತ್ತಿದೆ. ಈ ಬಗ್ಗೆ ವರದಿ ಕೊಡುವಂತೆ ಸೂಚಿಸಿದ್ದೇನೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಮಾಸಿಕ 18 ಕೋಟಿ ರೂ ಪಿಂಚಣಿ ರೂಪದಲ್ಲಿ ಫಲಾನುಭವಿಗಳಿಗೆ ವಿತರಣೆಯಾಗಬೇಕು. ಈ ಪೈಕಿ ಖಜಾನೆ ಅಧಿಕಾರಿಗಳು ತಾವು 8 ಕೋಟಿ ರೂ ಹಣವನ್ನು ಅಂಚೆ ಇಲಾಖೆಗೆ ವರ್ಗಾಯಿಸುತ್ತಿರುವುದಾಗಿ ಮಾಹಿತಿ ಕೊಟ್ಟಿದ್ದಾರೆ. ಆದರೆ ಅಂಚೆ ಇಲಾಖೆಯ ಅಧಿಕಾರಿಗಳು ತಮಗೆ 6 ಕೋಟಿ ರೂ ಮಾತ್ರ ಸಿಗುತ್ತಿದೆ ಎಂದು ಮಾಹಿತಿ ನೀಡಿದ್ಧಾರೆ. ಈ ವಿಚಾರದಲ್ಲಿ ವರದಿ ಕೇಳಿರುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ವಿವಿಧ ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ 2.85 ಲಕ್ಷ ಪಿಂಚಣಿದಾರರಿದ್ದಾರೆ. ಈ ಪೈಕಿ 111509 ಪಿಂಚಣಿದಾರರಿಗೆ ಬ್ಯಾಂಕ್ ಖಾತೆಗೆ ನೇರ ಜಮಾವಣೆ ಆಗುತ್ತಿದೆ. ಅಂಚೆ ಇಲಾಖೆಯ ಮೂಲಕ 97 ಸಾವಿರ ಫಲಾನುಭವಿಗಳಿಗೆ ವಿತರಣೆಯಾಗುತ್ತಿದೆ. ಈ ಪೈಕಿ ಸುಮಾರು 40 ಸಾವಿರ ಪಿಂಚಣಿದಾರರಿಗೆ ಅಂಚೆ ಇಲಾಖೆಯಲ್ಲಿ ಆರಂಭವಾಗಿರುವ ಬ್ಯಾಂಕ್‌ನಲ್ಲಿ ಖಾತೆಗಳು ಸೃಜನೆಯಾಗಿದ್ದು, ಪಿಂಚಣಿ ಈ ಖಾತೆಗಳಿಗೆ ಜಮಾವಣೆ ಆಗಿವೆ. ಉಳಿದವರಿಗೆ ಮನಿಯಾರ್ಡ್‌ರ್ ಮೂಲಕ ವಿತರಣೆಯಾಗುತ್ತಿದೆ ಎಂದು ಸಂಸದರು ಮಾಹಿತಿ ಕೊಟ್ಟರು.