ರಾಮನಗರ: ಬಡವರಿಗೆ ಸಹಕಾರಿಯಾಗಲೆಂದು ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತದೆ. ಅದರಲ್ಲೂ ವಿಶೇಷವಾಗಿ ಕೋವಿಡ್ ಹೊಡೆತಕ್ಕೆ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಬಡವರಿಗೆ ಅನುಕೂಲ ವಾಗಲೆಂದು ಬೆಸ್ಕಾಂ ವಿನೂತನ ಯೋಜನೆಯೊಂದನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿನ ಬಿಪಿಎಲ್ ಕಾರ್ಡ್ ಹೊಂದಿರುವ ಎಸ್‌ಸಿ, ಎಸ್‌ಟಿ ವರ್ಗಕ್ಕೆ ಸೇರಿದವರಿಗೆ ಗೃಹ ಬಳಕೆಯಲ್ಲಿ 75 ಯೂನಿಟ್‌ಗಳವರೆಗೆ ಉಚಿತವಾಗಿ ನೀಡಲು ಆದೇಶ ಹೊರಡಿಸಿದೆ.
ವಿಪರ್ಯಾಸ ಎಂದರೆ, ಜಿಲ್ಲೆಯಲ್ಲಿ ಯೋಜನೆಯ ಬಗ್ಗೆ ಸಮರ್ಪಕ ಪ್ರಚಾರ ನೀಡಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಜಿಲ್ಲೆಯಲ್ಲಿ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಸರ್ಕಾರದ ಯೊಜನೆಗೆ ದಾಖಲಾತಿಗಳನ್ನು ಪಡೆದು ಸ್ವತಃ ಯೋಜನೆ ಅನುಷ್ಠಾನಕ್ಕೆ ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿ ದೆ. ಈವರೆಗೂ ಯಾವುದೇ ಪ್ರಚಾರ ಸಂಬಂಧ ಕ್ರಮ ಕೈಗೊಳ್ಳದ ಅಧಿಕಾರಿಗಳು ಕಣ್ಣು ಮನಸ್ಸು ಎರಡು ಬೇರೆಡೆ ಕೇಂದ್ರೀಕೃತವಾದಂತಿದೆ.
ಏನಿದು ಯೋಜನೆ: ಸರ್ಕಾರ ಬಡ ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ ನೆರವಾಗಲೆಂದು ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿಗೆ ತಂದಿದೆ. ಅದರಲ್ಲಿ 75 ಯೂನಿಟ್ ಉಚಿತವಾಗಿ ನೀಡಬೇಕೆಂಬ ನಿಯಮವಿದೆ. ಈ ಯೋಜನೆಯನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಮರ್ಪಕ ಪ್ರಚಾರ ನೀಡಿ ಫಲಾನು ಭವಿಗಳಿಗೆ ಯೋಜನೆ ತಲುಪಿಸುವಲ್ಲಿ ಇಲಾಖೆ ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಆದರೆ, ಪಾಪ ನಮ್ಮ ರಾಮನಗರ ಜಿಲ್ಲೆಯ ಅಧಿಕಾರಿಗಳಿಗೆ ಅದು ಸಾಧ್ಯವಾಗಿಲ್ಲ, ಏನಿದ್ದರೂ ಇನ್‌ಕಮಿಂಗ್ ಅಷ್ಟೇ. ಸಾರ್ವಜನಿ ಕರ ಹಿತದೃಷ್ಟಿ ಲೆಕ್ಕಕ್ಕಿಲ್ಲ ಎನ್ನುವಂತಾಗಿದ್ದಾರೆ.
ಯೋಜನೆಗೆ ಬೇಕಾದ ದಾಖಲೆ: ಬಿಪಿಎಲ್ ರೇಷನ್ ಕಾರ್ಡ್(ಆರ್‌ಸಿ ಸಂಖ್ಯೆಸಹಿತ)ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಜಾತಿ ಪ್ರಮಾಣಪತ್ರ (ಅರ್‌ಡಿ ಸಂಖ್ಯೆ ಸಹಿತ), ಬ್ಯಾಂಕ್ ಖಾತೆ ಸಂಖ್ಯೆ ಐಎಫ್‌ಎಸ್‌ಸಿ ಕೋಡ್ ಇತ್ಯಾದಿ ವಿವರಗಳನ್ನೊಳಗೊಂಡ ಪಾಸ್‌ಬುಕ್ ಜೆರಾಕ್ಸ್ ಪ್ರತಿಯನ್ನು ತಮ್ಮ ವ್ಯಾಪ್ತಿಯ ಬೆಸ್ಕಾಂ ವಿಭಾಗಕ್ಕೆ ನೀಡಬೇಕು. ಎಲ್ಲಾ ದಾಖಲೆಗಳೂ ಕೂಡ ವಿದ್ಯುತ್ ಸಂಪರ್ಕ ಹೊಂದಿರುವವರ ಹೆಸರಿನಲ್ಲಿಯೆ ಇರಬೇಕು.
ಯೋಜನೆ ಜಾರಿ ವಿಳಂಬ: ಸರ್ಕಾರದ ಮಹತ್ತರ ಯೋಜನೆಗಳಲ್ಲೊಂದು ಜಾರಿ ವಿಳಂಬವಾಗುವ ಜೊತೆಗೆ ಬಡವರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಮಾಹಿತಿಗಾಗಿ ಕರೆ ಮಾಡಿದರೂ, ಕಾರ್ಯಪಾಲಕ ಅಭಿಯಂತರರ ದೂರವಾಣಿ ಸಂಖ್ಯೆ ನಾಟ್ ರೀಚಬಲ್ ಬರುತ್ತೆ ಕಿರಿಯ ಅಧಿಕಾರಿಗಳನ್ನು ಕೇಳಿದ್ರೆ ನಮಗಿಂತ ದೊಡ್ಡವರಿದ್ದಾರೆ ಸಾರ್ ದಯಮಾಡಿ ಅವರನ್ನ ಕೇಳಿ ಎನ್ನುತ್ತಾರೆ. ಜೊತೆಗೆ ಯೋಜನೆಯ ಬಗ್ಗೆ ದಾಖಲೆಗಳನ್ನು ಸ್ವಯಂ ಫಲಾನು ಭವಿಗಳು ಇಲಾಖೆ ಕೌಂಟರ್‌ಗೆ ತಂದು ಕೊಟ್ಟರೆ ಯೋಜನೆಯ ಪ್ರಯೋಜನಕ್ಕೆ ಅವಕಾಶ ಮಾಡಿಕೊಡುವು ದಾಗಿ ಹೇಳುತ್ತಾರೆ. ಆದರೆ, ಇಲಾಖೆಯಿಂದ ಈ ಸಂಬಂಧ ಯಾವುದೇ ಪ್ರಚಾರ ಮಾಡಿಲ್ಲ ಎನ್ನುವುದನ್ನೂ ಹೇಳ್ತಾರೆ. ಇದು ಸರ್ಕಾರದ ಯೋಜನೆಯ ಫಲ ಪಡೆಯುವಲ್ಲಿ ಫಲಾನುಭವಿಗಳಿಗೆ ಹಿನ್ನಡೆಯಾಗಿದ್ದು, ಅಧಿಕಾರಿಗಳ ವೈಫಲ್ಯ ಎತ್ತಿ ತೋರುತ್ತದೆ ಎನ್ನುತ್ತಾರೆ ಸ್ಥಳೀಯರು.
ಸರ್ಕಾರ ದಲಿತರ ಏಳ್ಗೆಗೆ ಯೋಜನೆ ರೂಪಿಸಿದರೂ, ಅಧಿಕಾರಿಗಳು ಅದನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ವಿಳಂಬ ಮಾಡುತ್ತಿದ್ದಾರೆ. ನಮ್ಮ ಸಂಘಟನೆಯಿಂದ ಒಮ್ಮೆ ಬೆಸ್ಕಾಂ ಅಧಿಕಾರಿಗಳ ಬಳಿ ಕೇಳಿ ಒತ್ತಾಯ ಮಾಡಿದಾಗ ಕೂಡಲೇ ಕ್ರಮ ಕೈಗೊಳ್ಳುತ್ತೇವೆ ಎಂಬ ಉತ್ತರ ನೀಡಿದ್ದರು. ನಾಮ್ ಕೇ ವಾಸ್ತೆ ದಾಖಲೆ ಕ್ರೂಢಿಕರಿಸುತ್ತಿದ್ದೇವೆ ಎನ್ನುವ ಅಧಿಕಾರಿಗಳು, ಅದರ ಅನುಷ್ಠಾನಕ್ಕೆ ವೇಗ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ.
– ವೆಂಕಟೇಶ್, ಬಿವಿಎಸ್ ಸಂಘಟನೆ ಜಿಲ್ಲಾಧ್ಯಕ್ಷ
ಬೆಸ್ಕಾಂ ವತಿಯಿಂದ ಸರ್ಕಾರ ಬಡ ದಲಿತರಿಗೆ ನೆರವಾಗಲು ಮುಂದಾಗಿದೆ. ಆದರೆ, ಬೆಸ್ಕಾಂ ಅಧಿಕಾರಿಗಳ ಜಿಡ್ಡುತನದಿಂದ ಯೋಜನೆ ಮೂಲ ದಲಿತರಿಗೆ ತಲುಪುವಲ್ಲಿ ವಿಫಲವಾಗುತ್ತಿದೆ. ಕೂಡಲೇ ಅಧಿಕಾರಿಗಳು ಸ್ವಯಂಪ್ರೇರಿತರಾಗಿ ಮನೆ ಮನೆಗೆ ತಮ್ಮ ಸಿಬ್ಬಂದಿ ಕಳುಹಿಸಿ ದಾಖಲೆ ಪಡೆದು ಉಚಿತ ವಿದ್ಯುತ್ ನೀಡುವ ಮೂಲಕ ಯೋಜನೆ ಸಾಕಾರಗೊಳಿಸಬೇಕು.
– ಸೋಮಶೇಖರ್, ನಗರಸಭಾ ಸದಸ್ಯ
ಸರ್ಕಾರದ ಯೋಜನೆಯೊಂದು ವಾಟ್ಸ್ ಆಪ್ ಮೂಲಕ ಹರಿದಾಡಿದ್ದು ಬಿಟ್ಟರೆ, ಇಲಾಖೆ ಅಧಿಕಾರಿಗಳು ಮೀಟರ್ ರೀಡರ್ ಪ್ರತಿ ತಿಂಗಳು ಬಿಲ್ ಕೊಟ್ಟು ವಸೂಲಿಗೆ ಬೆನ್ನು ಬೀಳ್ತಾರೆ. ಜೊತೆಗೆ ವಿದ್ಯುತ್ ದರ ಹೆಚ್ಚಳ ಕೂಡ ಸದ್ದಿಲ್ಲದೆ ಬಿಲ್‌ನಲ್ಲಿ ಮಾಡಿದ್ದು, ಗ್ರಾಮೀಣ ಭಾಗದಲ್ಲಿ ಪ್ರತಿ ಮೀಟರ್‌ಗೆ ಕನಿಷ್ಟ ದರ 70 ರೂ. ಇದ್ದದ್ದು 85 ರೂ.ಗೆ ಹೆಚ್ಚಳವಾಗಿದೆ. ಜನರ ಲೂಟಿಗೆ ಇಲಾಖೆ ನಿಂತಂತಿದೆ.
– ಎಂ.ಕೆ. ಮರಿಸ್ವಾಮಯ್ಯ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ
– ಎಂ.ಎಚ್. ಪ್ರಕಾಶ್