ರಾಣಿಬೆನ್ನೂರ: ಇತ್ತೀಚಿಗೆ ಸುರಿದ ಮಹಾ ಮಳೆಗೆ ತಾಲೂಕಿನಲ್ಲಿ ಬಿದ್ದ ಮನೆಗಳಿಗೆ ಪರಿಹಾರ ನೀಡಿಕೆ ವಿಳಂಬ, ಸರ್ಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಕೊರತೆ, ಸ್ವತ್ಛತೆ ನಿರ್ಲಕ್ಷ್ಯ, ಕೆರೆ ಕೋಡಿ ಬಿದ್ದರೂ ಅಗತ್ಯ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ತಾಪಂ ಸದಸ್ಯರು ಹರಿಹಾಯ್ದರು.
ಇಲ್ಲಿನ ತಾಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನೆರೆ ಹಾಗೂ ಮಳೆಗೆ ಬಿದ್ದ ಮನೆಗಳ ಅರ್ಹ ಪರಿಹಾರ ವಿತರಣೆ ವಿಚಾರದಲ್ಲಿ ನಡೆದ ಚರ್ಚೆ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಕಂದಾಯ ಇಲಾಖೆ ಅಧಿಕಾರಿ ಈ ಕುರಿತು ಸ್ಪಷ್ಟನೆ ನೀಡಲು ಮುಂದಾದಾಗ ಬಿಜೆಪಿ ಸದಸ್ಯ ರಾಮಪ್ಪ ಬೆನ್ನೂರ ಸಮೀಕ್ಷೆ ನಡೆಸಿರುವ ವಿಧಾನದ ಬಗ್ಗೆ ಪ್ರಶ್ನಿಸಿದರು. ಕಾಂಗ್ರೆಸ್ ಸದಸ್ಯರಾದ ಡಾ| ಪುಟ್ಟಪ್ಪ ಭೀಕ್ಷಾವರ್ತಿಮಠ, ರೂಪ್ಲಪ್ಪ ಹಂಚಿನಮನಿ, ಬಿಜೆಪಿಯ ಕರಿಯಪ್ಪ ತೋಟಗೇರ ಧನಿಗೂಡಿಸಿದರು.
ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವಾಗ ಆಗಿರುವ ಲೋಪಕ್ಕೆ ಸಾಕ್ಷಿಯಾಗಿ ರೂಪ್ಲಪ್ಪ ಹಂಚಿನಮನಿ ತಮ್ಮ ಮೊಬೈಲ್‌ನಲ್ಲಿ ಶೇ.20 ಮಾತ್ರ ಪರಿಹಾರ ನಿಗದಿಪಡಿಸಿರುವ ಸಂಪೂರ್ಣ ಬಿದ್ದ ಮನೆಯ ಫೋಟೋಗಳನ್ನು ಅಧ್ಯಕ್ಷರು ಹಾಗೂ ಇಒಗೆ ತೋರಿಸಿದರು. ಇನ್ನು ಕಾಕೋಳ ಗ್ರಾಮದಲ್ಲಿ ಕಮಲವ್ವ ಲಮಾಣಿ ಎಂಬ ವಿಶೇಷಚೇತನ ಮಹಿಳೆಯ ಮನೆಯ ಸಮೀಕ್ಷೆ ಮಾಡಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ಆಗ ಡಾ| ಭೀಕ್ಷಾವರ್ತಿಮಠಮಠ ಮಾತನಾಡಿ, ಸರ್ವೇಗೆ ಯಾವ ಎಂಜಿನಿಯರ್‌ಗಳನ್ನು ಕರೆದುಕೊಂಡು ಹೋಗಿದ್ದಿರಿ? ಪಿಡಿಒಗಳು ಸ್ಥಳಕ್ಕೆ ತೆರಳದೆ ಕಚೇರಿಯಲ್ಲಿ ಕುಳಿತು ಸರ್ವೇ ಮಾಡಿದ್ದಾರೆ ಎಂದು ದೂರಿದರು. ಇಟಗಿ ಗ್ರಾಪಂ ಅಧ್ಯಕ್ಷರು ಮಾತನಾಡಿ, ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಯಾಗಿ ನಾಲ್ಕು ವರ್ಷಗಳಾದರೂ ಸೂಕ್ತ ಸಿಬ್ಬಂದಿ ನಿಯೋಜಿಸಿಲ್ಲ. ಪರಿಣಾಮ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ಇದಕ್ಕೆ ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ| ಸಂತೋಷ, ಸದ್ಯ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ ಇದೆ. ಅದನ್ನು 24×7 ಮಾಡಿದರೆ ಮಾತ್ರ ಮತ್ತಷ್ಟು ಸಿಬ್ಬಂದಿ ನಿಯೋಜನೆ ಸಾಧ್ಯ ಎಂದು ತಿಳಿಸಿದರು. ಆಗ ತಾಪಂ ಇಒ ಎಸ್.ಎಂ.ಕಾಂಬಳೆ ಮಾತನಾಡಿ, ಸದಸ್ಯರ ಮನವಿಯನ್ನು ಆಲಿಸಿ ಸಮಸ್ಯೆ ಕುರಿತು ಡಿಎಚ್‌ಒಗೆ ಪತ್ರ ಬರೆದು ಒಂದು ಪ್ರತಿಯನ್ನು ತಮಗೂ ನೀಡಿ ಎಂದು ಟಿಎಚ್‌ಒಗೆ ಸೂಚಿಸಿದರು. ತಾಲೂಕಿನ ಐರಣಿ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಳಾಂತರ ವಿಳಂಬವಾಗುತ್ತಿರುವುದಕ್ಕೆ ಕಾರಣವೇನು ಎಂದು ಉಪಾಧ್ಯಕ್ಷೆ ಕಸ್ತೂರೆಮ್ಮ ಹೊನ್ನಾಳಿ ತಾಲೂಕು ಆರೋಗ್ಯಾಧಿಕಾರಿಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಸ್ಥಳಾಂತರಿಸಬೇಕಾದ ಗ್ರಾಪಂ ಹಳೇ ಕಟ್ಟಡದಲ್ಲಿ ಸ್ವತ್ಛತೆ ಸಮಸ್ಯೆ ಎದುರಾಗಿದೆ ಎಂದರು.
ಚರ್ಚೆ ಸಮಯದಲ್ಲಿ ಬಿಜೆಪಿ ಸದಸ್ಯ ಕರಿಯಪ್ಪ ತೋಟಗೇರ ಭಾಗವಹಿಸಿ, ಇತ್ತೀಚಿಗೆ ಶಾಸಕರು ನಡೆಸಿದ ಸಭೆಯಲ್ಲಿ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅದಕ್ಕೆ ಏನು ಕ್ರಮ ಕೈಗೊಂಡಿರುವಿರಿ? ನಗರದ ಸರಕಾರಿ ಆಸ್ಪತ್ರೆಯ ಶವಾಗಾರದ ಬಳಿ ಸಾಕಷ್ಟು ಕಸ ಬಿದ್ದಿದೆ. ಯಾಕಿ ನಿರ್ಲಕ್ಷ್ಯ ಎಂದು ಆರೋಪಿಸಿದರು.
670 ಎಕರೆ ವಿಸ್ತೀರ್ಣದ 4 ಸಾವಿರ ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ತಾಲೂಕಿನ ಹೊನ್ನತ್ತಿ ಕೆರೆ ಕೊಡಿ ಬಿದ್ದು ಹರಿಯುತ್ತಿದ್ದರೂ ಅಧಿಕಾರಿಗಳು
ಸರಿಯಾದ ಕ್ರಮ ಕೈಗೊಂಡಿಲ್ಲ. ಅಕಸ್ಮಾತ ಕೆರೆ ಒಡೆದರೆ ಸುಮಾರು ಐದಾರು ಹಳ್ಳಿಗಳು ಜಲಾವೃತಗೊಳ್ಳುವ ಸಾಧ್ಯತೆಯಿದೆ ಎಂದು ಹೊನ್ನತ್ತಿ ಗ್ರಾಪಂ ಅಧ್ಯಕ್ಷರು ಹಾಗೂ ತಾಪಂ ಸದಸ್ಯ ಡಾ| ಪುಟ್ಟಪ್ಪ ಭೀಕ್ಷಾವರ್ತಿಮಠ ಆತಂಕ
ವ್ಯಕ್ತಪಡಿಸಿದರು. ತಾಪಂ ಅಧ್ಯಕ್ಷೆ ಗೀತಾ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜು ಸೂರ್ವೆ, ಇಒ ಎಸ್.ಎಂ.ಕಾಂಬಳೆ, ಸಹಾಯಕ ನಿರ್ದೇಶಕ ಅಶೋಕ ನಾರಜ್ಜಿ, ವ್ಯವಸ್ಥಾಪಕ ಬಸವರಾಜ ಶಿಡೇನೂರ ಇದ್ದರು.