Advertisement

500 ವರ್ಷಗಳ ಹಿಂದಿನ ಕಥೆ ಹೇಳಲಿದೆ ದೇಯಿ ಬೈದೆತಿ

07:03 AM Jan 17, 2019 | |

ಐತಿಹಾಸಿಕ ತುಳು ಚಲನಚಿತ್ರ ದೇಯಿಬೈದೆತಿ 1.15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಫೆಬ್ರವರಿಯಲ್ಲಿ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ. ಕನ್ನಡ ಹಾಗೂ ತುಳು ಎರಡು ಭಾಷೆಗಳಲ್ಲಿ ಈ ಚಿತ್ರವನ್ನು ತಯಾರಿಸಲಾಗಿದ್ದು, ಮೊದಲು ತುಳು ಸಿನೆಮಾ ರಿಲೀಸ್‌ ಆದ ಬಳಿಕ ಕನ್ನಡ ಸಿನೆಮಾ ರಿಲೀಸ್‌ ಮಾಡುವ ಸಿದ್ಧತೆ ನಡೆಯಲಿದೆ ಎಂಬುದು ಚಿತ್ರದ ನಿರ್ದೇಶಕ ಸೂರ್ಯೋದಯ್‌ ಪೆರಂಪಳ್ಳಿ ಅವರ ಅಭಿಪ್ರಾಯ. ತುಳುನಾಡಿನಲ್ಲಿ ಬಲ್ಲಿದರ ಪರವಾಗಿ ಪರಾಕ್ರಮ ತೋರಿದ ರಣರಂಗದಲ್ಲಿಯೇ ಪ್ರಾಣಾರ್ಪಣೆ ಮಾಡಿದ ವೀರಪುರುಷರಾದ ಕೋಟಿ- ಚೆನ್ನಯರ ತಾಯಿ ದೇಯಿಬೈದೆತಿಯ ಜೀವನಗಾಥೆ ಈ ಚಿತ್ರದ ಕಥೆ.

Advertisement

ವಿಶೇಷ ಅಂದರೆ, ಸಿನೆಮಾ ಬಿಡುಗಡೆಗೆ ಇನ್ನೂ ಒಂದು ತಿಂಗಳು ಬಾಕಿ ಇರುವ ಸಂದರ್ಭದಲ್ಲಿಯೇ ಆನ್‌ಲೈನ್‌ ಮೂಲಕ ಟಿಕೆಟ್ ಪಡೆಯುವವರ ಸಂಖ್ಯೆ ಅಧಿಕವಿದೆ. ನೂರಾರು ಟಿಕೆಟ್‌ಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ ಎಂಬುದನ್ನು ಚಿತ್ರತಂಡ ಸಂತಸದಿಂದ ಹಂಚಿಕೊಳ್ಳುತ್ತಿದೆ.

ಹಿರಿಯಡ್ಕ ಸಮೀಪದ ಶೀರೂರು ಮೂಲ ಮಠದಲ್ಲಿ 500 ವರ್ಷಗಳ ಹಿಂದಿನ ಕಾಲಕ್ಕೆ ಸರಿ ಹೊಂದುವ ಅದ್ದೂರಿ ಸೆಟ್ ಹಾಕಿ ಚಿತ್ರದ ಮುಖ್ಯ ಭಾಗಗಳನ್ನು ಚಿತ್ರೀಕರಿಸಲಾಗಿದೆ. ಹಾಗೆಯೇ ಪಡುಮಲೆ ಪರ್ಕಳದ ಶೆಟ್ಟಿಬೆಟ್ಟಿನ ಅರಮನೆ ಹಾಗೂ ಉಳಿದ ಭಾಗಗಳನ್ನು ಕರಾವಳಿ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. 2 ಗಂಟೆ 50 ನಿಮಿಷಗಳ ಈ ಐತಿಹಾಸಿಕ ಸಿನೆಮಾ ಪ್ರೇಕ್ಷಕರನ್ನು 500 ವರ್ಷ ಹಿಂದೆ ಕೊಂಡೊಯ್ಯಲಿದೆ. ಈ ಕಥೆಯನ್ನು ಎರಡು ವರ್ಷಗಳ ಕಾಲ ಅಧ್ಯಯನ ಮಾಡಿ ಸಂಶೋಧಕರಲ್ಲಿ ಚರ್ಚಿಸಿ ಚಿತ್ರಕಥೆಯನ್ನು ರಚಿಸಲಾಗಿದೆ. ಈಗಾಗಲೇ ದೇಯಿಬೈದೆತಿಯ ಕುರಿತಂತೆ ತುಳುನಾಡಿನ ಪಾಡ್ದನಗಳಲ್ಲಿ ಇರುವ ಕೆಲವು ಗೊಂದಲಗಳಿಗೆ ಆಕೆಯ ಹುಟ್ಟಿಗೆ ಸಂಬಂಧಿಸಿದಂತೆ ಕೇಳಿ ಬರುವ ಪ್ರಶ್ನೆಗಳಿಗೆ ಈ ಚಿತ್ರದ ಮೂಲಕ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ ಎಂಬುದು ಅವರ ಅಭಿಪ್ರಾಯ. ಬಿ. ಭಾಸ್ಕರ ರಾವ್‌ ಸಂಗೀತ ನೀಡಿದ್ದು, ಮಣಿಕಾಂತ್‌ ಕದ್ರಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ರವಿ ಸುವರ್ಣ ಹಾಗೂ ಹರೀಶ್‌ ಪೂಜಾರಿ ಅವರ ಛಾಯಾಗ್ರಹಣವಿದೆ. ಮೋಹನ್‌ ಎಲ್‌. ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ದೇವರಾಜ್‌ ಪಾಲನ್‌ ರಾಜ್‌ಕೃಷ್ಣ, ಅಮಿತ್‌ ರಾವ್‌ ಅವರು ಸಹನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸೀತಾಕೋಟೆ, ಚೇತನ್‌ ರೈ ಮಾಣಿ, ಸೌಜನ್ಯಾ ಹೆಗ್ಡೆ, ಅಮಿತ್‌ ರಾವ್‌ ಮುಂತಾದವರು ಸಿನೆಮಾದಲ್ಲಿದ್ದಾರೆ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next