ದೆಹಲಿ ಕೇಂದ್ರಾಡಳಿತ ಪ್ರದೇಶದ ಮೇಲೆ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡುವ, ಅಲ್ಲಿಯ ಚುನಾಯಿತ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಕಡ್ಡಾಯವಾಗಿ ಲೆಫ್ಟಿನೆಂಟ್ ಗವರ್ನರ್(ಎಲ್-ಜಿ)ರ ಅಭಿಪ್ರಾಯ ಪಡೆದುಕೊಳ್ಳುವ ಮಸೂದೆಯನ್ನು ಲೋಕಸಭೆಯು ಅಂಗೀಕರಿಸಿದ ಎರಡು ದಿನಗಳಲ್ಲಿ ರಾಜ್ಯಸಭೆಯೂ ಅಂಗೀಕರಿಸಿದೆ. ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆ, 2021 ಅಥವಾ ದೆಹಲಿಯ ಎನ್ ಸಿ ಟಿ (ತಿದ್ದುಪಡಿ) ಮಸೂದೆ 2021 ಎಲ್-ಜಿ ಮತ್ತು ದೆಹಲಿ ಶಾಸಕಾಂಗ ಸಭೆಗಳಲ್ಲಿ ಅಧಿಕಾರ ಮತ್ತು ಜವಾಬ್ದಾರಿಗಳ ಹಂಚಿಕೆಗೆ ಸಂಬಂಧಿಸಿದ ಕೆಲವು ನಿಬಂಧನೆಗಳನ್ನು ತಿದ್ದುಪಡಿ ಮಾಡುತ್ತದೆ. ದೆಹಲಿ ಒಂದು ಕೇಂದ್ರಾಡಳಿತ ಪ್ರದೇಶವಾಗಿದ್ದರೂ, ಆಡಳಿತದ ವಿಷಯದಲ್ಲಿ ಇತರ ಕೇಂದ್ರಾಡಳಿತ ಪ್ರದೇಶಗಳಿಗಿಂತ ಅದು ಭಿನ್ನವಾಗಿದೆ.
ಓದಿ : ಕೋವೊವ್ಯಾಕ್ಸ್ ಸಪ್ಟೆಂಬರ್ ನಲ್ಲಿ ಬಳಕೆಗೆ ಲಭ್ಯ : ಪೂನವಾಲಾ
ಹಿನ್ನೆಲೆ
ಭಾರತದಲ್ಲಿ ಪ್ರಸ್ತುತ 9 ಕೇಂದ್ರಾಡಳಿತ ಪ್ರದೇಶಗಳು ಇದ್ದು, ಉಳಿದೆಲ್ಲಾ ಕಡೆ ಲೆಫ್ಟಿನೆಂಟ್ ಗವರ್ನರ್ ಸರ್ವಸ್ವ. ರಾಜ್ಯದಲ್ಲಿ ಒಬ್ಬ ರಾಜ್ಯಪಾಲ ಹೊಂದಿರುವ ಅಧಿಕಾರಕ್ಕಿಂತಲೂ ಹೆಚ್ಚಿನ ಅಧಿಕಾರವನ್ನು ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ)ಹೊಂದಿರುತ್ತಾರೆ. ಇಲ್ಲಿ ಇತರ ರಾಜ್ಯಗಳಂತೆ ಎಲ್ ಜಿಗಳು ಕೇವಲ ಒಬ್ಬ ರಾಜ್ಯಪಾಲರಾಗಿರದೇ, ರಾಜ್ಯದ ಒಬ್ಬ ಸಂಪೂರ್ಣ ನಿರ್ವಾಹಕನಾಗಿರುತ್ತಾನೆ.
ದೆಹಲಿಯಲ್ಲಿ ಸರ್ಕಾರ ಹಾಗೂ ಎಲ್-ಜಿಯ ನಡುವೆ ಭಿನ್ನಾಭಿಪ್ರಾಯ ಬಂದಾಗ, 2018ರಲ್ಲಿ ಈ ವಿಷಯವು ಸುಪ್ರೀಂ ಕೋರ್ಟ್ ಅಂಗಳಕ್ಕೆ ಕಾಲಿಟ್ಟಿತ್ತು.ಸರ್ವೋಚ್ಚನ್ಯಾಯಾಲಯದ ಪಂಚ ಸದಸ್ಯ ಪೀಠವು, ಪೋಲಿಸ್, ಜನಾದೇಶ ಹಾಗೂ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ, ಇತರ ವಿಷಯಗಳ ಮೇಲೆ ಕಾನೂನು ರಚಿಸಲು ಲೇಫ್ಟಿನೆಂಟ್ ಗವರ್ನರ್(ಎಲ್-ಜಿ) ರ ಒಪ್ಪಿಗೆ ಅಗತ್ಯವಿಲ್ಲ ಎಂದು ಆದೇಶ ಹೊರಡಿಸಿತ್ತು. ಅದಲ್ಲದೆ, ಸಂವಿಧಾನದ ವಿಧಿ 239 ಎಎ(4) ರಲ್ಲಿ ನೆರವು ಮತ್ತು ಸಲಹೆ ಎಂಬ ಪದವನ್ನು ಬಳಸಲಾಗಿದ್ದು, ಎಲ್-ಜಿಯು ದೆಹಲಿಯ ಚುನಾಯಿತ ಸರ್ಕಾರದ ಮಂತ್ರಿ ಮಂಡಳಿಯ ಸಹಾಯ ಮತ್ತು ಸೂಚನೆಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸಬೇಕು. ಹೀಗಿದ್ದರೂ, ಮಂತ್ರಿ ಮಂಡಳಿಯ ಎಲ್ಲಾ ನಿರ್ಧಾರಗಳನ್ನು ಎಲ್-ಜಿಗೆ ತಿಳಿಸಬೇಕು ಎಂದು ತಿಳಿಸಿತ್ತು. ಆದರೆ ನ್ಯಾಯಾಲಯದ ತೀರ್ಪು ಹೊರಬಿದ್ದಿದ್ದೇ ತಡ, ದೆಹಲಿ ಸರ್ಕಾರವು ಎಲ್-ಜಿಯ ಬಳಿ ಹೋಗುವುದನ್ನೇ ನಿಲ್ಲಿಸಿ ಬಿಟ್ಟಿತ್ತು. ಖುದ್ದು ಸರ್ಕಾರವೇ ಎಲ್-ಜಿಗೆ ತಿಳಿಸದೇ ಎಲ್ಲಾ ನಿರ್ಧಾರಗಳನ್ನು, ಯೋಜನೆಗಳನ್ನು ಜಾರಿಗೆ ತಂದು, ಕೊನೆಗೆ ಎಲ್-ಜಿಯ ಬಳಿ ಹೋಗುತ್ತಿತ್ತು.
ಓದಿ : ಸಚಿನ್ ಬಳಿಕ ಯೂಸುಫ್ ಪಠಾಣ್ ಗೂ ಕೋವಿಡ್ ಪಾಸಿಟಿವ್: ಆಟಗಾರರಿಗೆ ಶುರುವಾಯಿತು ಆತಂಕ
ಈಗ ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಮಸೂದೆಯು ಜಾರಿಗೆ ಬಂದರೆ, ಯಾವುದೇ ವಿಷಯದ ಕುರಿತು ಚುನಾಯಿತ ಸರ್ಕಾರವು ಕ್ರಮಕೈಗೊಳ್ಳುವ ಮೊದಲು ಎಲ್-ಜಿಯ ಸಲಹೆಯನ್ನು ಪಡೆಯುವುದು ಅತ್ಯಗತ್ಯವಾಗಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ದೆಹಲಿ ಒಂದು ಕೇಂದ್ರಾಡಳಿತ ಪ್ರದೇಶವಾಗಿದ್ದು, ಆಡಳಿತರೂಢ ಆಪ್(ಆಮ್ ಆದ್ಮಿ ಪಕ್ಷ) ಸರ್ಕಾರವು ಕಳೆದ ಕೆಲವು ವರ್ಷಗಳಿಂದ ದೆಹಲಿಯ ಸ್ಥಾನಮಾನವನ್ನು ರಾಜ್ಯಕ್ಕೆ ಬದಲಿಸಬೇಕೆಂದು ಕೇಂದ್ರಕ್ಕೆ ಒತ್ತಾಯಿಸುತ್ತಿದೆ. ಆದರೆ ಈ ಕಾಯ್ದೆಯು ಆಪ್ ಸರ್ಕಾರಕ್ಕೆ ಮತ್ತಷ್ಟು ಹಿನ್ನಡೆಯನ್ನುಂಟು ಮಾಡಿದೆ.
ದೆಹಲಿಯ ರಾಷ್ಟ್ರೀಯ ರಾಜಧಾನಿ ಸರ್ಕಾರ ಕಾಯಿದೆ, 1991
ಪ್ರಸ್ತುತ ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಮಸೂದೆಯು ದೆಹಲಿ ರಾಷ್ಟ್ರೀಯ ರಾಜಧಾನಿ ಸರ್ಕಾರ ಕಾಯಿದೆ, 1991 ಗೆ ತಂದಿರುವ ತಿದ್ದುಪಡಿಯಾಗಿದೆ. ಸಂವಿಧಾನದ 69ನೇ ತಿದ್ದುಪಡಿಯ ಮೂಲಕ ವಿಧಿ 239 ಎಎ ಮತ್ತು 239 ಬಿಬಿ ವಿಧಿಯನ್ನು ಪರಿಚಯಿಸಲಾಯಿತು. ಈ ಕಾಯ್ದೆಯು ದೆಹಲಿಯ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಗೆ ಇರುವ ಅಧಿಕಾರಗಳನ್ನು ವಿವರಿಸುತ್ತದೆ. ಮುಖ್ಯವಾಗಿ, ಇತರೆ ರಾಜ್ಯಗಳಿಗಿಂತ ಭಿನ್ನವಾಗಿ, ದೆಹಲಿಯ ಮುಖ್ಯಮಂತ್ರಿಗಿಂತಲೂ ಹೆಚ್ಚಿನ ಅಧಿಕಾರವನ್ನು ಇಲ್ಲಿ ಲೆಫ್ಟಿನೆಂಟ್ ಗವರ್ನರ್ ಹೊಂದಿರುತ್ತಾರೆ.
ಮಸೂದೆಯ ನಿಬಂಧನೆಗಳು ಹೇಗಿವೆ, ಏನಿವೆ..?
- ‘ಸರ್ಕಾರ’ ಎಂದರೆ ‘ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ)’: ದೆಹಲಿ ಶಾಸಕಾಂಗವು ಜಾರಿಗೊಳಿಸಬೇಕಾದ ಯಾವುದೇ ಕಾನೂನಿನಲ್ಲಿ ‘ಸರ್ಕಾರ’ ಎಂಬ ಪದ ಉಲ್ಲೇಖಗೊಂಡರೆ ಅದು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಗೆ ಸಮವಾಗಿರುತ್ತದೆ. ಇದರರ್ಥ, ದೆಹಲಿ ಸರ್ಕಾರ ಏನೇ ಜಾರಿಗೊಳಿಸಬೇಕಾದರೂ ಎಲ್‌ಜಿಯ ಅನುಮತಿ ಕಡ್ಡಾಯವಾಗಿರುತ್ತದೆ.
- ಎಲ್-ಜಿಯ ವಿವೇಚನಾ ಅಧಿಕಾರವನ್ನು ವಿಸ್ತರಿಸುವುದು: ದೆಹಲಿಯ ಶಾಸಕಾಂಗವು ಕಾನೂನುಗಳನ್ನು ಮಾಡಲು ಅಧಿಕಾರ ಹೊಂದಿರುವ ಎಲ್ಲಾ ವಿಷಯಗಳಲ್ಲಿಯೂ ಎಲ್ಜಿಗೆ ವಿವೇಚನಾಧಿಕಾರವನ್ನು ನೀಡುತ್ತದೆ.
- ಎಲ್-ಜಿ ಕಡ್ಡಾಯವಾಗಿ ತನ್ನ ನಿರ್ಧಾರ ಪ್ರಕಟಿಸಬೇಕು: ಮಂತ್ರಿ ಮಂಡಳಿ (ಅಥವಾ ದೆಹಲಿ ಕ್ಯಾಬಿನೆಟ್) ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಕಾರ್ಯಗತಗೊಳಿಸುವ ಮೊದಲು ಎಲ್‌ಜಿಗೆ ಅವರ ಅಭಿಪ್ರಾಯವನ್ನು ನೀಡಲು “ಅಗತ್ಯವಾಗಿ ಒಂದು ಅವಕಾಶವನ್ನು ನೀಡಲಾಗಿದೆ” ಎಂದು ಈ ಕಾಯ್ದೆ ಖಚಿತಪಡಿಸುತ್ತದೆ.
- ಆಡಳಿತಾತ್ಮಕ ನಿರ್ಧಾರಗಳಿಗೆ ಸಂಬಂಧಿಸಿದಂತೆ: ಈ ತಿದ್ದುಪಡಿಯು ರಾಜಧಾನಿ ದೆಹಲಿಯ ದೈನಂದಿನ ವಿಷಯಗಳಿಗೆ ಸಂಬಂಧಿಸಿದಂತೆ ಅಥವಾ ಮಂತ್ರಿಮಂಡಲದ ಆಡಳಿತಾತ್ಮಕ ನಿರ್ಧಾರಗಳಿಗೆ ಸಂಬಂಧಿಸಿದಂತೆ ಶಾಸಕಾಂಗವು ಯಾವುದೇ ನಿಯಮಗಳನ್ನು ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸುತ್ತದೆ.
ಕೇಂದ್ರ ಸರ್ಕಾರದ ನಿಲುವೇನು?
2018ರಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿರುವ ತೀರ್ಪಿಗೆ ಅನುಗುಣವಾಗಿ ಈ ಮಸೂದೆಯನ್ನು ರಚಿಸಲಾಗಿದೆ. ದೆಹಲಿಯಲ್ಲಿ ಸರ್ಕಾರದ ವ್ಯಾಖ್ಯಾನವನ್ನು ಈ ಕಾಯ್ದೆ ಸ್ಪಷ್ಟಪಡಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅದಲ್ಲದೆ, ಈ ಮಸೂದೆಯ ಬಗ್ಗೆ ಸ್ಪಷ್ಟೀಕರಣವನ್ನು ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉಚ್ಚ ನ್ಯಾಯಾಲಯವು ವ್ಯಾಖ್ಯಾನಿಸಿದಂತೆ ರಾಷ್ಟ್ರ ರಾಜಧಾನಿಯ ಸರ್ಕಾರದ ಜವಾಬ್ದಾರಿಗಳನ್ನು ಜಿ ಎನ್ ಸಿ ಟಿ ಡಿ 2021 ವ್ಯಾಖ್ಯಾನಿಸುತ್ತದೆ” ಎಂದಿದೆ.
ಓದಿ : ಡಿಕೆಶಿ ಮೇಲೆ ಗೂಬೆ ಕೂರಿಸುವ ಕೆಲಸವಾಗುತ್ತಿದೆ, ಆರೋಪಿಗೆ ಎಸ್ ಐಟಿ ರಕ್ಷಣೆ: ಮಿಥುನ್ ರೈ
ದೆಹಲಿ ಸರ್ಕಾರದ ಕಾರ್ಯಚಟುವಟಿಕೆಗೆ ಸಂಬಂಧಿಸಿದ ಕೆಲವು ವಿಷಯಗಳಲ್ಲಿ ಅಸ್ಪಷ್ಟತೆ ಇರುವುದರಿಂದ ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆ 2021 ಅಗತ್ಯವಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ನ್ಯಾಯಾಲಯದಲ್ಲಿ ತಿಳಿಸಿದ್ದರು. ಒಬ್ಬ ನಿರ್ವಾಹಕರಾಗಿ ಲೆಫ್ಟಿನೆಂಟ್ ಗವರ್ನರ್ ಗೆ ದೆಹಲಿಯಲ್ಲಿ ನಡೆಯುವ ದೈನಂದಿನ ವ್ಯವಹಾರಗಳನ್ನು ತಿಳಿದುಕೊಳ್ಳುವ ಹಕ್ಕಿದೆ ಎಂದು ಹೇಳಿದ ರೆಡ್ಡಿ, “ನಾವು ದೆಹಲಿ ಸರ್ಕಾರದಿಂದ ಯಾವುದೇ ಅಧಿಕಾರವನ್ನು ಕಸಿದುಕೊಂಡಿಲ್ಲ ಅಥವಾ ಎಲ್-ಜಿಗೆ ಯಾವುದೇ ಹೆಚ್ಚುವರಿ ಅಧಿಕಾರವನ್ನು ನೀಡಿಲ್ಲ” ಎಂದು ಅವರು ತಿಳಿಸಿದ್ದಾರೆ.
ದೆಹಲಿ ಸರ್ಕಾರ ಏಕೆ ವಿರೋಧಿಸುತ್ತಿದೆ ?
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನವನ್ನು ರಾಜ್ಯಕ್ಕೆ ಬದಲಿಸಬೇಕೆಂದು ಹಲವು ಬಾರಿ ಕೇಂದ್ರಕ್ಕೆ ಒತ್ತಾಯಿಸಿದರೂ, ಇದುವರೆಗೂ ಫಲಕಾರಿಯಾಗಲಿಲ್ಲ. ಆದರೆ, ಈ ಕಾಯ್ದೆಯು ಕೇಜ್ರಿವಾಲ್ ಸರ್ಕಾರಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ. “ಲೆಫ್ಟಿನೆಂಟ್ ಗವರ್ನರ್ ಗೆ ಎಲ್ಲಾ ಅಧಿಕಾರ ಇದ್ದರೆ, ಇಲ್ಲಿ ಚುನಾಯಿತ ಸರ್ಕಾರ ಏಕೆ ಇರಬೇಕು? ಲೋಕಸಭೆಯು ಅಂಗೀಕರಿಸಿರುವ ಈ ಕಾಯ್ದೆಯು 4.7.18 ಸಂವಿಧಾನ ಪೀಠದ ತೀರ್ಪಿಗೆ ವಿರುದ್ಧವಾಗಿದೆ. ಈ ತೀರ್ಪಿನ ಅನುಸಾರ, ಚುನಾಯಿತ ಸರ್ಕಾರವೇ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಬಳಿಕ, ಈ ನಿರ್ಧಾರದ ಪ್ರತಿಯನ್ನು ಎಲ್-ಜಿಗೆ ಕಳುಹಿಸಿಕೊಡಬೇಕು ಎಂದು ಹೇಳುತ್ತದೆ” ಎಂದು ಕೇಜ್ರಿವಾಲ್ ಟ್ವಿಟ್ಟರ್‌ನಲ್ಲಿ ಕೇಂದ್ರಕ್ಕೆ ಚಾಟಿ ಬೀಸಿದ್ದಾರೆ. “ವಿಧಾನಸಭೆಯಲ್ಲಿ ಕೇವಲ 8 ಹಾಗೂ ಎಂಸಿಡಿ ಉಪಚುನಾವಣೆಗಳಲ್ಲಿ ಶೂನ್ಯ ಸ್ಥಾನವನ್ನು ಪಡೆದು ಸೋತಿರುವ ಬಿಜೆಪಿ, ದೆಹಲಿಯಲ್ಲಿನ ಚುನಾಯಿತ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿದೆ” ಎಂದು ಕೇಂದ್ರದ ನಿರ್ಧಾರವನ್ನು ಖಂಡಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಕಾಯ್ದೆಯು ಪ್ರಸ್ತುತ ಕೇವಲ ದೆಹಲಿ ಮಾತ್ರವಲ್ಲದೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರದ ಹಲವು ನಿರ್ಧಾರಗಳನ್ನು ಸ್ವಾಗತಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಈಗ ತಮ್ಮ ವಿಷಯಕ್ಕೆ ಬಂದಾಗ ಕೇಂದ್ರದ ವಿರುದ್ಧ ನಿಂತಿದ್ದಾರೆ. ಏನೇ ಆದರೂ, ದೆಹಲಿಯ ಎನ್ ಸಿ ಟಿ ತಿದ್ದುಪಡಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಆದೇಶದನ್ವಯ, ಪ್ರದೇಶ, ಪೋಲಿಸ್ ಮತ್ತು ಸಾರ್ವಜನಿಕ ಆದೇಶದ ವಿಷಯಗಳನ್ನು ಹೊರತುಪಡಿಸಿ ಉಳಿದವುಗಳ ಬಗ್ಗೆ ಕಾನೂನು ರಚಿಸಲು ಚುನಾಯಿತ ಸರ್ಕಾರಕ್ಕೆ ಸ್ವಾತಂತ್ರö್ಯ ನೀಡಬೇಕಾಗುತ್ತದೆ. ಇದಿಲ್ಲದಿದ್ದರೆ, ಎಲ್-ಜಿಯೇ ಸರ್ವಸ್ವರಾದರೆ, ಚುನಾಯಿತ ಸರ್ಕಾರ ಇದ್ದೂ ಏನು ಪ್ರಯೋಜನ ? ಎಂಬ ಪ್ರಶ್ನೆಯನ್ನು ಎಬ್ಬಿಸಿದೆ.
– ಇಂದುಧರ ಹಳೆಯಂಗಡಿ