Advertisement

ಪದವಿ ಕೋರ್ಸ್‌ 4 ವರ್ಷ?

06:00 AM Mar 17, 2018 | Team Udayavani |

ಹೊಸದಿಲ್ಲಿ: ಕರ್ನಾಟಕ ಸೇರಿದಂತೆ ದೇಶಾದ್ಯಂತ ಪದವಿ ಕೋರ್ಸುಗಳ ಸದ್ಯದ ಅವಧಿ ಮೂರು ವರ್ಷ. ಅದನ್ನು ಎಂಜಿನಿಯರಿಂಗ್‌ ಕೋರ್ಸ್‌ನಂತೆ ನಾಲ್ಕು ವರ್ಷಗಳ ವರೆಗೆ ವಿಸ್ತರಿಸುವ ಪ್ರಸ್ತಾಪವಿದೆ. ಖ್ಯಾತ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್‌ ನೇತೃತ್ವದ ಸಮಿತಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ರಚಿಸಲು ಕೇಂದ್ರ ಸರಕಾರ ರಚನೆ ಮಾಡಿದ ಸಮಿತಿ ಈ ಶಿಫಾರಸು ಮಾಡಲಿದೆ ಎಂದು ಹೇಳಲಾಗಿದೆ. ಮಾಸಾಂತ್ಯಕ್ಕೆ ಈ ಸಮಿತಿ ವರದಿ ಸಲ್ಲಿಸಲಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಬಗ್ಗೆ ವಿವರವಾಗಿ ಚರ್ಚಿಸಿದ್ದು, ಹೊಸ ಪ್ರಸ್ತಾಪದ ಬಗ್ಗೆ ಸಹಮತಕ್ಕೆ ಬಂದಿರುವುದಾಗಿ “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ. ಆದರೆ ಈ ಬಗ್ಗೆ ಕೇಂದ್ರ ಸರಕಾರದ ಒಪ್ಪಿಗೆ ಬೇಕಾಗಿದೆ. 

Advertisement

“ಎಂಜಿನಿಯರಿಂಗ್‌ ಕೋರ್ಸ್‌ ಅವಧಿ ನಾಲ್ಕು ವರ್ಷ ಇರುವುದರಿಂದ ಅವರಿಗೆ ಪ್ರಾಜೆಕ್ಟ್ ವರ್ಕ್‌, ಕೋರ್ಸ್‌ ಸಂಬಂಧಿತ ತರಬೇತಿ ಮತ್ತು ಇಂಟರ್ನ್ಶಿಪ್‌ ಪಡೆಯಲು ಅವಕಾಶ ಇದೆ. ಹೀಗಾಗಿ ದೇಶಾದ್ಯಂತ ಇರುವ ವಿವಿಗಳಲ್ಲಿ ನಾಲ್ಕು ವರ್ಷಗಳ ಕಾಲ ಪದವಿ ಅಧ್ಯಯನ ಜಾರಿಗೆ ತರುವ ಬಗ್ಗೆ ಶಿಫಾರಸು ಮಾಡಲಾಗುತ್ತದೆ. ಇದರ ಜತೆಗೆ ವಿದ್ಯಾರ್ಥಿಗಳಿಗೆ ತಮ್ಮ ಕೋರ್ಸ್‌ ಮತ್ತು ಅದಕ್ಕೆ ಸಂಬಂಧಿತ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡು ಸರ್ವಾಂಗೀಣ ಬೆಳವಣಿಗೆಗಗೂ ಅವಕಾಶ ಇದೆ’ ಎಂದು ಈ ಬಗ್ಗೆ ಹೆಸರು ಬಹಿರಂಗಪಡಿಸಲಿಚ್ಛಿದ ಅಧಿಕಾರಿ ವಿವರಿಸಿದ್ದಾರೆ. 

ಎಲ್ಲರಿಗೂ ಅಲ್ಲ: ನಾಲ್ಕು ವರ್ಷಗಳ ಕೋರ್ಸ್‌ ಹೊಸತಾಗಿ ಕಾಲೇಜು ಪ್ರವೇಶಿಸುವವರಿಗೆ ಮಾತ್ರ. ಈಗಾಗಲೇ ಪದವಿ ಪಡೆಯುತ್ತಿರುವವರಿಗೆ ಹಳೆಯ ವ್ಯವಸ್ಥೆಯಲ್ಲಿಯೇ ಶಿಕ್ಷಣ ಮುಂದುವರಿಯಲಿದೆ ಎಂದು ಹೇಳಲಾಗಿದೆ. 

ಇತರ ಸಂಭಾವ್ಯ ಶಿಫಾರಸುಗಳು: ಪದವಿ ಶಿಕ್ಷಣದಲ್ಲಿ ಐಚ್ಛಿಕ ವಿಷಯಗಳನ್ನು ಆಯ್ದುಕೊಳ್ಳುವಲ್ಲಿಯೂ ನಿಯಮ ಸರಳಗೊಳಿಸಲು ಶಿಫಾರಸು ಮಾಡುವ ಸಾಧ್ಯತೆ ಇದೆ. ಉದಾಹರಣೆಗೆ ಹೇಳುವುದಿದ್ದರೆ ರಸಾಯನಶಾಸ್ತ್ರದ ಜತೆಗೆ ಸಂಗೀತವನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ನೀಡಬೇಕೆಂದು ಸಲಹೆ ಮಾಡಲಿದೆ. ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ (ಹ್ಯುಮಾನಿಟೀಸ್‌ ಆ್ಯಂಡ್‌ ಸೋಶಿಯಲ್‌ ಸೈನ್ಸಸ್‌)ದಲ್ಲಿ ಹೆಚ್ಚಿನ ವಿಷಯಗಳನ್ನು ಆರಂಭಿಸುವ ಬಗ್ಗೆ ಸಮಿತಿ ಒಲವು ಹೊಂದಿದೆ. ಕೋರ್ಸ್‌ಗಳ ಆಯ್ಕೆಯಲ್ಲಿ ಸರಳತೆ, ಕ್ರೆಡಿಟ್‌ ಟ್ರಾನ್ಸರ್‌, ಆನ್‌ಲೈನ್‌ ಕೋರ್ಸ್‌ ಸೇರಿದಂತೆ ಹಲವು ವಿಚಾರಗಳನ್ನು ವರದಿಯಲ್ಲಿ ಸೇರಿಸುವ ಸಾಧ್ಯತೆಗಳಿವೆ.

ದಿಲ್ಲಿ ವಿವಿಯಲ್ಲಿ ಜಾರಿಯಾಗಿತ್ತು
ದಿಲ್ಲಿ ವಿವಿ 2013ರಲ್ಲಿ ನಾಲ್ಕು ವರ್ಷಗಳ ಅವಧಿಯ ಪದವಿ ಕೋರ್ಸ್‌ ಆರಂಭಿಸಿತ್ತು. ಅದಕ್ಕೆ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಒಂದು ವರ್ಗ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ 2014ರಲ್ಲಿ ಅದನ್ನು ಹಿಂಪಡೆ ಯಲಾಗಿತ್ತು. ವಿವಿಯ ಕುಲಪತಿಯಾಗಿದ್ದ ಡಾ.ದಿನೇಶ್‌ ಸಿಂಗ್‌ ಜೀವನಕ್ಕೆ ಅಗತ್ಯವಾಗಿರುವಂತೆ ಹಾಲಿ ಕೋರ್ಸ್‌ ಗಳ ಪಠ್ಯಕ್ರಮ ಇಲ್ಲದೇ ಇರುವುದರಿಂದ 4 ವರ್ಷಗಳ ಕೋರ್ಸ್‌ ಅಗತ್ಯ ಎಂದು ಪ್ರತಿಪಾದಿಸಿದ್ದರು. 

Advertisement

ಪದವಿ ಶಿಕ್ಷಣವನ್ನು ನಾಲ್ಕು ವರ್ಷಗಳಿಗೆ ಬದಲಿಸುವ ಬಗ್ಗೆ ಇದುವರೆಗೆ ಯಾವುದೇ ಪ್ರಸ್ತಾಪ ಬಂದಿಲ್ಲ
ಪ್ರಕಾಶ್‌ ಜಾವಡೇಕರ್‌, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ

ಸಮಿತಿಯ ವರದಿ ಇನ್ನೂ ಸರಕಾರಕ್ಕೆ ಸಲ್ಲಿಕೆಯಾಗಿಲ್ಲ. ಒಂದು ವೇಳೆ ಅಂಥ ಪ್ರಸ್ತಾಪವಿದ್ದಲ್ಲಿ ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಸಂಬಂಧಿತ ಇಲಾಖೆ ಮತ್ತು ಇತರರ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.
ಪಿ.ಸುಬ್ರಹ್ಮಣ್ಯಂ, ಉನ್ನತ ಶಿಕ್ಷಣ ವಿಭಾಗದ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next