Advertisement

GST ಖಂಡಿತಾ ಯಶಸ್ವಿಯಾಗುವುದಿಲ್ಲ: ದಿಗ್ವಿಜಯ ಸಿಂಗ್‌ ಟೀಕಾಪ್ರಹಾರ 

10:55 AM Jul 06, 2017 | |

ಪುಣೆ: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಜಾರಿಗೊಳಿಸಿರುವುದಕ್ಕಾಗಿ ಹಿರಿಯ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ಅವರು ಇಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.  ಈ ಹೊಸ ತೆರಿಗೆ ವ್ಯವಸ್ಥೆಯು ಯಶಸ್ವಿಯಾಗುವುದಿಲ್ಲ. ಬದಲಿಗೆ, ಅದು  ಹಣದುಬ್ಬರ ಮತ್ತು ಗೊಂದಲಗಳಿಗೆ  ಸಾಕ್ಷಿಯಾಗಲಿದೆ ಎಂದು ಅವರು ದೂರಿದ್ದಾರೆ.

Advertisement

ನಾವು ಸರಳ ಅನುಸರಣೆ ವಿಧಾನ ಹಾಗೂ ಶೇ. 18ರಷ್ಟಿದ್ದ ತೆರಿಗೆಯ ಒಂದು ಚಪ್ಪಡಿಯ ಪರವಾಗಿದ್ದೆವು. ಆದಾಗ್ಯೂ, ಅವರು ರಚಿಸಿರುವ ಪ್ರಸ್ತುತ  ಜಿಎಸ್‌ಟಿಯ ರಚನೆಯು ಖಂಡಿತವಾಗಿ ವಿಫಲ ಎಂದು ಸಾಬೀತಾಗಲಿದೆ ಎಂದರು.

ಸೊಲ್ಲಾಪುರ ಜಿಲ್ಲೆಯ ಪಂಢರಾಪುರದಲ್ಲಿ  ಶ್ರೀ ವಿಟuಲ ಹಾಗೂ ರುಕ್ಮಿಣಿ ದೇವಿಯ ದರ್ಶನ ಪಡೆಯಲು ಆಗಮಿಸಿದ್ದ  ಸಿಂಗ್‌ ಅವರು,  ಇಲ್ಲಿ  ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಸರಕಾರದ ಕಾರ್ಯ ಶೈಲಿಯ ವಿರುದ್ಧ ಟೀಕಾಪ್ರಹಾರ ನಡೆಸಿದರು.

ದೇಶದಲ್ಲಿ  ಪ್ರಸ್ತುತ ಎರಡು ಸಿದ್ಧಾಂತಗಳು ನಡೆಯುತ್ತಿವೆ. ಒಂದೆಡೆಯಲ್ಲಿ ಸತ್ಯ ಮತ್ತು ಅಹಿಂಸೆ ಆಗಿದ್ದರೆ, ಇನ್ನೊಂದೆಡೆಯಲ್ಲಿ ದ್ವೇಷ ಮತ್ತು ಹಿಂಸೆಯ ಮಾರ್ಗದಲ್ಲಿ ನಡೆಯುವ ಕಾರ್ಯವನ್ನು ಸರಕಾರ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಅಹಿಂಸೆಯ ಪಥದಲ್ಲಿ ಸಾಗುವ ಮಹಾತ್ಮಾ ಗಾಂಧಿ ಅವರ ಸಿದ್ಧಾಂತಕ್ಕೆ ತಿಲಾಂಜಲಿ ಹಾಡುತ್ತ ದೇಶದಲ್ಲಿ ಇಂದು ಹಿಂಸೆಯ ರಾಜಕೀಯವನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Advertisement

ಗೋಹತ್ಯೆ, ನೋಟು ನಿಷೇಧ, ಬೀಫ್‌ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿಸಿ ದಂಗೆ ನಡೆಸಲಾಗುತ್ತಿದೆ ಎಂದರು.

ವಾಸ್ತವದಲ್ಲಿ ಬಿಜೆಪಿ ಸರಕಾರ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಅದು ಕೇವಲ ಪ್ರಸಾರ ಮತ್ತು ಪ್ರಚಾರ ಕಾರ್ಯದಲ್ಲಿ ತೊಡಗಿದೆ ಎಂದವರು ಕಿಡಿಕಾರಿದ್ದಾರೆ.

ವಿಪಕ್ಷದಲ್ಲಿದ್ದಾಗ ಜಿಎಸ್‌ಟಿ, ಆಧಾರ್‌ ಕಾರ್ಡ್‌, ಮನ್‌ರೇಗಾದಂತಹ ನಿರ್ಣಯಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ನರೇಂದ್ರ ಮೋದಿ ಅವರು, ಈಗ ಅದೇ ನಿರ್ಣಯಗಳಿಗಾಗಿ ಸ್ವತಃ ಶ್ರೇಯಸ್ಸು ಪಡೆದುಕೊಳ್ಳುತ್ತಿದ್ದಾರೆ ಎಂದವರು ಟೀಕಿಸಿದ್ದಾರೆ.

ವಿಪಕ್ಷದಲ್ಲಿದ್ದಾಗ ದೇಶದಲ್ಲಿ ಜಿಎಸ್‌ಟಿ ಯಾವತ್ತೂ ಯಶಸ್ವಿ ಯಾಗುವುದಿಲ್ಲ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿಯು, ಇಂದು ಅದೇ ನಿರ್ಣಯಕ್ಕೆ ಕ್ರಾಂತಿಕಾರಿ ಎಂಬ ಹಣೆಪಟ್ಟಿಯನ್ನು ಕಟ್ಟುತ್ತಿದೆ. ದೇಶಕ್ಕೆ ಎರಡನೇ ಬಾರಿಗೆ ಸ್ವಾತಂತ್ರÂ ಸಿಕ್ಕಿರುವಂತೆ ಮಧ್ಯರಾತ್ರಿಯಲ್ಲಿ ಸಂಭ್ರಮಾಚರಣೆ ನಡೆಸಿದೆ ಎಂದೂ ಅವರು ಕುಹುಕವಾಡಿದ್ದಾರೆ.

ಜಿಎಸ್‌ಟಿ ಉತ್ತಮ ಮತ್ತು ಸರಳ ತೆರಿಗೆ ವ್ಯವಸ್ಥೆ ಆಗಿದೆ. ಕಪ್ಪು ಹಣದ ನಿರ್ಮೂಲನೆಗಾಗಿ ಅದನ್ನು  ಜಾರಿಗೊಳಿಸಲಾಗಿದೆ ಎಂದು ಪ್ರಧಾನಿ ಮೋದಿ ಅವರು ಹೇಳುತ್ತಿದ್ದಾರೆ. ಆದರೆ, ಅತ್ಯಧಿಕ ಕಪ್ಪು ಹಣ ಆಲ್ಕೋಹಾಲ್‌, ಪೆಟ್ರೋಲಿಯಂ ಮತ್ತು ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿದ್ದು, ಇವುಗಳನ್ನು  ಜಿಎಸ್‌ಟಿಯಿಂದ ಹೊರಗಿಡಲಾಗಿದೆ ಎಂದವರು ಆರೋಪಿಸಿದ್ದಾರೆ.

ಈ ಹಿಂದೆ ತೆರಿಗೆದಾತರು ಕೇವಲ ನಾಲ್ಕು ಬಾರಿ ಟ್ಯಾಕ್ಸ್‌ ರಿಟರ್ನ್ ಗಳನ್ನು ಸಲ್ಲಿಸುತ್ತಿದ್ದರು. ಆದರೆ, ಇನ್ನೂ ಅವರು  37 ಬಾರಿ ಟ್ಯಾಕ್ಸ್‌ ರಿಟರ್ನ್ಗಳನ್ನು ಸಲ್ಲಿಸಬೇಕಾಗುತ್ತದೆ. ಹೊಸ ತೆರಿಗೆ ವ್ಯವಸ್ಥೆಯಿಂದಾಗಿ ಸಂಸ್ಥೆಗಳಿಗೆ ಶಾಶ್ವತ ಚಾರ್ಡರ್ಡ್‌ ಅಕೌಂಟೆಂಟ್‌ಗಳನ್ನು ನೇಮಕ ಮಾಡುವ ಪರಿಸ್ಥಿತಿ ಒದಗಿಬಂದಿದೆ ಎಂದು ಅವರು ತಿಳಿಸಿದ್ದಾರೆ.

 ಜಿಎಸ್‌ಟಿ ದರವನ್ನು ಶೇ. 5, ಶೇ. 12, ಶೇ. 18 ಮತ್ತು ಶೇ. 28ಕ್ಕೆ ನಿಗದಿಪಡಿಸಲಾಗಿದೆ. ಯಾವ ದೇಶದಲ್ಲಿ ಬೇರೆ-ಬೇರೆ ದರ ನಿಗದಿಪಡಿಸಲಾಗಿದೆಯೋ, ಆ ದೇಶವು ಎಂದಿಗೂ ಯಶಸ್ವಿ ಯಾಗುವುದಿಲ್ಲ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ  ಸಿಂಗ್‌ ನುಡಿದಿದ್ದಾರೆ.

ಪ್ರಧಾನಿ ಮೋದಿ ಅವರ ಬಳಿ 56 ಇಂಚಿನ ಗುಂಡಿಗೆ ಇದ್ದು, ಅದರಿಂದಾಗಿ ಅವರು ಇಂತಹ ಕಠಿನ ನಿರ್ಣಯಗಳನ್ನು ತೆಗೆದು ಕೊಳ್ಳುತ್ತಿದ್ದಾರೆ. ಆದರೆ, ದೇಶದ ಜನರಿಗೆ 56 ಇಂಚಿನ ಗುಂಡಿಗೆ ಅಲ್ಲ. ಬದಲಿಗೆ, ಗುಂಡಿಗೆಯಲ್ಲಿ ಹೃದಯವನ್ನು ಹೊಂದಿರಬೇಕಾಗುತ್ತದೆ ಎಂದು ಅವರು ಅಣಕವಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next