Advertisement

ಹಣಕಾಸಿನ ಕೊರತೆ: ಹೊಸ ಬಿಪಿಎಲ್‌ ಕಾರ್ಡ್‌ ವಿತರಣೆ ವಿಳಂಬ

01:14 AM Dec 08, 2021 | Team Udayavani |

ಪುತ್ತೂರು: ಅರ್ಜಿ ಸಲ್ಲಿಕೆ ಪ್ರಾರಂಭವಾಗಿ ಒಂದೂವರೆ ವರ್ಷ ಸಮೀಪಿಸಿದರೂ ಬಿಪಿಎಲ್‌ ಪಡಿತರ ಚೀಟಿ ವಿತರಣೆಗೆ ಸರಕಾರ ಮೀನ ಮೇಷ ಎಣಿಸುತ್ತಿದೆ. ಹಣಕಾಸಿನ ಕೊರತೆಯೇ ಇದಕ್ಕೆ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.

Advertisement

ಕಾರ್ಡ್‌ ಒದಗಿಸಿದರೆ ಪ್ರತೀ ತಿಂಗಳು ಉಚಿತ ಪಡಿತರ ಸಾಮಗ್ರಿ ನೀಡಬೇಕು. ಅದಕ್ಕೆ ಕೋಟ್ಯಂತರ ರೂ. ಅನುದಾನದ ಅಗತ್ಯವಿದೆ. ಈಗಾಗಲೇ ಕೊರೊನಾ ಕಾರಣದಿಂದ ಆರ್ಥಿಕ ಹೊಡೆತ ಬಿದ್ದಿರುವ ಹಿನ್ನೆಲೆಯಲ್ಲಿ ಹೊಸ ಕಾರ್ಡ್‌ಗೆ ಪಡಿತರ ನೀಡುವುದು ಹೊರೆ ಆಗಬಹುದು ಎಂಬ ಕಾರಣದಿಂದ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಮಾಹಿತಿ ಉನ್ನತ ಮಟ್ಟದಿಂದ ಲಭ್ಯವಾಗಿದೆ.

ಎಪಿಎಲ್‌ ಲಭ್ಯ
ಎಪಿಎಲ್‌ ಕಾರ್ಡ್‌ದಾರರಿಗೆ ಅರ್ಜಿ ಸಲ್ಲಿಸಿದ ತತ್‌ಕ್ಷಣ ತಾತ್ಕಾಲಿಕ ಪಡಿತರ ಚೀಟಿ ದೊರೆಯುತ್ತಿದೆ. ಮುದ್ರಿತ ಕಾರ್ಡನ್ನು ಅಂಚೆ ಮೂಲಕ ಮನೆಗೆ ಕಳುಹಿಸಲಾಗುತ್ತಿದೆ. ಎಪಿಎಲ್‌ ಕಾರ್ಡ್‌ದಾರರಿಗೆ ಅಕ್ಕಿ ಮಾತ್ರ ದೊರೆಯುತ್ತಿದ್ದು ದುಡ್ಡು ಕೊಟ್ಟು ಖರೀದಿಸಬೇಕು. ಬಹುತೇಕ ಎಪಿಎಲ್‌ ಕಾರ್ಡ್‌ದಾರರು ದಾಖಲೆಗಿರಲಿ ಎಂದಷ್ಟೇ ಕಾರ್ಡ್‌ ಮಾಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಶೇ. 85ರಷ್ಟು ಮಂದಿ ರೇಶನ್‌ ಅಂಗಡಿಯತ್ತ ಮುಖ ಮಾಡುವುದೇ ಇಲ್ಲ.

ಉಡುಪಿ: 3 ಸಾವಿರ ಅರ್ಜಿ
ಉಡುಪಿ ಜಿಲ್ಲೆಯಲ್ಲಿ ಹೊಸ ಬಿಪಿಎಲ್‌ ಪಡಿತರ ಚೀಟಿ ವಿತರಣೆಗೆ ಸಂಬಂಧಿಸಿ ಮೂರು ಸಾವಿರ ಮಂದಿ ಅರ್ಜಿದಾರರಿದ್ದಾರೆ. ಸರಕಾರದಿಂದ ಇನ್ನೂ ಲಾಗಿನ್‌ ಮತ್ತು ಪಾಸ್‌ವರ್ಡ್‌ ಅಪ್ರೂವಲ್‌ ಬಂದಿಲ್ಲ. ಈ ಬಗ್ಗೆ ಪೂರ್ವ ಕೆಲಸಗಳು ನಡೆಯುತ್ತಿದ್ದು, ಶೀಘ್ರ ವಿತರಣೆ ಆರಂಭವಾಗಲಿದೆ. ಆರೋಗ್ಯ ವಿಚಾರಕ್ಕೆ ಸಂಬಂಧಿಸಿ ತುರ್ತು ಅಗತ್ಯವಿರುವ ನಾಗರಿಕರಿಗೆ ವಿಳಂಬ ಮಾಡದೆ ಬಿಪಿಎಲ್‌ ಕಾರ್ಡ್‌ ನೀಡಲಾಗುತ್ತಿದೆ ಎಂದು ಜಿಲ್ಲಾ ಆಹಾರ ಇಲಾಖೆ ಉಪ ನಿರ್ದೇಶಕ ಇಸಾಕ್‌ ತಿಳಿಸಿದ್ದಾರೆ.

ಇದನ್ನೂ ಓದಿ:ಛಾಯಾಗ್ರಾಹಕ ಸೆರೆಹಿಡಿದ ಸೂರ್ಯನ ಚಿತ್ರಕ್ಕೆ ಬರೀ 3, 771 ರೂ.!

Advertisement

ಇನ್ನೆರಡು ತಿಂಗಳು ವಿಳಂಬ
ಅರ್ಹ ಬಿಪಿಎಲ್‌ ಫಲಾನುಭವಿಗೆ ಪಡಿತರ ಚೀಟಿ ಒದಗಿಸಲು ಸಾಫ್ಟ್ ವೇರ್‌ ನಲ್ಲಿ ಆಪ್ಶನ್‌ ತೆರೆಯಬೇಕಿದೆ. ಉನ್ನತ ಅಧಿಕಾರಿಗಳ ಪ್ರಕಾರ ಹೊಸ ಕಾರ್ಡ್‌ ಕೈಗೆ ದೊರೆಯಲು ಇನ್ನೂ ಒಂದೂವರೆ ಅಥವಾ ಎರಡು ತಿಂಗಳು ಕಾಯಬೇಕು. ಕೋವಿಡ್‌ ಸಂಕಷ್ಟದಿಂದ ನೆಲಕಚ್ಚಿದ ಆರ್ಥಿಕ ವ್ಯವಸ್ಥೆ ಈಗ ನಿಧಾನವಾಗಿ ಹಳಿಗೆ ಬರುತ್ತಿರುವ ಕಾರಣ ಇನ್ನೆರಡು ತಿಂಗಳಲ್ಲಿ ಅನುದಾನ ಲಭ್ಯವಾಗಿ ಹೊಸ ಪಡಿತರ ಕಾರ್ಡ್‌ ವಿತರಿಸಿ ಫಲಾನುಭವಿಗಳಿಗೆ ಸಾಮಗ್ರಿ ವಿತರಿಸಬಹುದು ಎನ್ನುವ ಲೆಕ್ಕಚಾರ ಸರಕಾರದ್ದು.

ತಿದ್ದುಪಡಿಗಿಲ್ಲ ಅವಕಾಶ
ಈಗಾಗಲೇ ಕಾರ್ಡ್‌ ಹೊಂದಿರುವವರು ತಿದ್ದುಪಡಿ ಮಾಡಬೇಕಿದ್ದರೆ ಅವಕಾಶ ಇಲ್ಲ. ಸೆಪ್ಟಂಬರ್‌ನಲ್ಲಿ ನಾಲ್ಕು ದಿನಗಳ ಕಾಲ ಸಾಫ್ಟ್ ವೇರ್‌ ನಲ್ಲಿ ತಿದ್ದುಪಡಿಗೆ ಅವಕಾಶ ಸಿಕ್ಕಿದ್ದರೂ ಹೆಚ್ಚಿನವರಿಗೆ ಮಾಹಿತಿ ಸಿಗದೆ ಪ್ರಯೋಜನವಾಗಿಲ್ಲ. ಆದರೆ ತಿಂಗಳಲ್ಲಿ ಕೆಲವು ರವಿವಾರ ಮಧ್ಯಾಹ್ನ ಕೆಲವು ತಾಸು ಸಾಫ್ಟ್ ವೇರ್‌ ನಲ್ಲಿ ನೋಂದಣಿಗೆ ಅವಕಾಶ ಲಭ್ಯವಾಗುತ್ತಿದೆ. ಆ ಬಗ್ಗೆ ಪೂರ್ವ ಮಾಹಿತಿ ಇರುವುದಿಲ್ಲ. ಅವಕಾಶ ಕೊಡುವುದಾದರೆ ಪ್ರತೀ ದಿನ ನೀಡಬೇಕು. ಅಪರೂಪಕೊಮ್ಮೆ ಏಕೆ ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ ಎಂದು ಸೈಬರ್‌ ಕೇಂದ್ರದ ಮಾಲಕರೋರ್ವರು ತಿಳಿಸಿದ್ದಾರೆ.

ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಫಲಾನುಭವಿಗಳಿಗೆ ಕಾರ್ಡ್‌ ದೊರೆಯದೆ ಇರುವ ಬಗ್ಗೆ ಸಂಬಂಧಿಸಿದ ಸಚಿವರ ಜತೆ ಎರಡು ದಿನಗಳ ಹಿಂದೆ ಮಾತುಕತೆ ನಡೆಸಿದ್ದು ಶೀಘ್ರವಾಗಿ ದೊರಕಲು ಕ್ರಮ ಕೈಗೊಳ್ಳಲಾಗುವುದು.
– ಎಸ್‌. ಅಂಗಾರ,
ದ.ಕ. ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next