Advertisement

ರಾಗಿ ಬೆಳೆಗೆ ಯೂರಿಯಾ ರಸಗೊಬ್ಬರದ ಕೊರತೆ!

04:51 PM Sep 25, 2023 | Team Udayavani |

ಬಂಗಾರಪೇಟೆ: ತಾಲೂಕನ್ನು ರಾಜ್ಯ ಸರ್ಕಾರವು ಈಗಾಗಲೇ ಬರಪೀಡಿತ ತಾಲೂಕು ಎಂದು ಘೋ ಷಣೆ ಮಾಡಿದ್ದು, ಮಳೆಯಾಶ್ರಿತವಾಗಿ ರಾಗಿ ಬೆಳೆಯು ಸಂಪೂರ್ಣವಾಗಿ ನಷ್ಟವಾಗಿದ್ದರೂ, ಇತ್ತೀಚೆಗೆ ಅಲ್ಪಸ್ವಲ್ಪ ಮಳೆಯಿಂದ ರಾಗಿ ಬೆಳೆಗೆ ಟಾನಿಕ್‌ನಂತೆ ಸ್ವಲ್ಪ ಪ್ರಾಣ ಬಂದಿದ್ದು, ರಾಗಿ ಬೆಳೆಗೆ ಅಗತ್ಯವಾಗಿರುವ ಯೂರಿಯಾ ಗೊಬ್ಬರ ಕೊರತೆ ಹೆಚ್ಚಾಗಿದೆ.

Advertisement

ಪ್ರಸಕ್ತ ಸಾಲಿಗೆ ತಾಲೂಕಿನ ಕಸಬಾ ಹೋಬಳಿಯಲ್ಲಿ 1,380 ಹೆಕ್ಟೇರ್‌, ಕಾಮಸಮುದ್ರ ಹೋಬಳಿಯಲ್ಲಿ 410 ಹೆಕ್ಟೇರ್‌ ಹಾಗೂ ಬೂದಿಕೋಟೆ ಹೋಬಳಿಯಲ್ಲಿ 524 ಹೆಕ್ಟೇರ್‌ ಸೇರಿ ಒಟ್ಟು 2,314 ಹೆಕ್ಟೇರ್‌ಗಳಲ್ಲಿ ಜಮೀನಿನಲ್ಲಿ ವಿವಿಧ ತಳಿಯ ರಾಗಿ ಬೆಳೆಯನ್ನು ಬಿತ್ತನೆ ಮಾಡಲಾಗಿದೆ. ತಾಲೂಕಿನ ರಾಬರ್‌rಸನ್‌ಪೇಟೆ ಹೋಬಳಿಯನ್ನು ಕಸಬಾ ಹೋಬಳಿಗೆ ಸೇರಿಸಿದ್ದು, ಜಿಪಿಯು-8 ತಳಿ ರಾತ್ರಿಯು ಕಸಬಾ ಹೋಬಳಿಯಲ್ಲಿ 4,440 ಕ್ವಿಂಟಲ್‌, ಬೂದಿಕೋಟೆಯಲ್ಲಿ 36.50 ಕ್ವಿಂಟಲ್‌, ಕಾಮಸಮುದ್ರ ಹೋಬಳಿಯಲ್ಲಿ 24.50 ಕ್ವಿಂಟಲ್‌, ಎಂ.ಎಲ್‌ 365 ತಳಿ ರಾಗಿಯು ಕಸಬಾ 25.20 ಕ್ವಿಂಟಲ್‌, ಬೂದಿಕೋಟೆ 10.20 ಕ್ವಿಂಟಲ್‌, ಕಾಮಸಮುದ್ರ 2 ಕ್ವಿಂಟಲ್‌, ಎಂಆರ್‌-6 ರಾಗಿ ತಳಿಯು ಕಸಬಾ 6.60 ಕ್ವಿಂಟಲ್‌, ಬೂದಿಕೋಟೆ 10.20 ಕ್ವಿಂಟಲ್‌ ಹಾಗೂ ಕಾಮಸಮುದ್ರ 8.40 ಕ್ವಿಂಟಲ್‌ ರಾಗಿ ತಳಿಗಳನ್ನು ರೈತರು ಬಿತ್ತನೆ ಮಾಡಿದ್ದಾರೆ.

ಮೂರು ದಿನಗಳಿಂದ ಅಲ್ಪಸ್ವಲ್ಪ ಮಳೆ: ತಾಲೂಕಿನಲ್ಲಿ 20ಕ್ಕೂ ಹೆಚ್ಚು ಖಾಸಗಿ ಗೊಬ್ಬರದ ಅಂಗಡಿಗಳಿದ್ದರೂ ಗೊಬ್ಬರದ ಕೊರತೆ ಹೆಚ್ಚಾಗಿದೆ. ಈ ಬಾರಿ ಮಳೆ ಇಲ್ಲದೇ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆ ಇನ್ನೇನು ಮಳೆಯಾಶ್ರಿತ ರಾಗಿ ಬೆಳೆಯು ತೀವ್ರವಾಗಿ ಒಣಗಿರುವುದರಿಂದ ರೈತರಿಗೆ ನಷ್ಟವಾಗಿದೆ ಎನ್ನುವಷ್ಟ ರಲ್ಲಿ ಕಳೆದ ಮೂರು ದಿನಗಳಿಂದ ಅಲ್ಪಸ್ವಲ್ಪ ಮಳೆ ಆಗಿದ್ದು, ಮಳೆ ಇಲ್ಲದೇ ನೆಲಕ್ಕೆ ಉರುಳಿದ್ದ ರಾಗಿ ಬೆಳೆಯು ಎದ್ದು ನಿಂತಿವೆ. ಹೆಚ್ಚಾದ ಗೊಬ್ಬರದ ಕೊರತೆ: ರಾಗಿ ಬೆಳೆಗೆ ಶಕ್ತಿ ನೀಡಲು ಯೂರಿಯಾ ಗೊಬ್ಬರ ಅವಶ್ಯಕವಾಗಿದ್ದು, ಎಲ್ಲಿ ವಿಚಾರಣೆ ಮಾಡಿದರೂ ಗೊಬ್ಬರ ಸಿಗುತ್ತಿಲ್ಲ. ರೈತರಿಗೆ ಅತೀ ಹೆಚ್ಚು ಆಸರೆಯಾಗಿರುವ ಟಿಎಪಿಸಿ ಎಂಎಸ್‌ನಲ್ಲಿಯೂ ಸಹ ಗೊಬ್ಬರದ ಕೊರತೆ ಹೆಚ್ಚಾಗಿದೆ. ಮಳೆ ಇಲ್ಲದೇ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಯಾರೂ ಸಹ ಗೊಬ್ಬರ ತರಿಸಲು ಮುಂದಾಗಿಲ್ಲ. ಈ ಕಾರಣದಿಂದಲೇ ಗೊಬ್ಬರದ ಕೊರತೆ ಹೆಚ್ಚಾಗಲು ಕಾರಣವಾಗಿದೆ.

ಕೊಂಡುಕೊಳ್ಳಲು ದುಬಾರಿ: ಪಟ್ಟಣದ ಕೆಲವು ಖಾಸಗಿ ಗೊಬ್ಬರದ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ದಾಸ್ತಾನುವಿದೆ. ಆದರೆ, ಗೌಪ್ಯವಾಗಿ ಹಾಗೂ ಹೆಚ್ಚಿನ ಬೆಲೆಗೆ ಆಕ್ರಮವಾಗಿ ಮಾರಾಟ ಮಾಡ ಲಾಗುತ್ತಿದೆ. ಯೂರಿಯಾ ಗೊಬ್ಬರ ಕಂಪನಿಗಳು ಗೊಬ್ಬರದ ಜೊತೆಗೆ ತೋಟಗಾರಿಕೆ ಬೆಳೆಗಳಿಗೆ ಡ್ರೀಪ್‌ ಮೂಲಕವಾಗಿ ಲಿಕ್ವಿಡ್‌ ಗೊಬ್ಬರವನ್ನು ಕಡ್ಡಾಯವಾಗಿ ಮಾರಾಟ ಮಾಡಬೇಕೆಂದು ಷರತ್ತು ವಿಧಿಸಿದ್ದಾರೆ. ಆದರೆ, ಮಳೆಯಾಶ್ರಿತ ರಾಗಿ ಬೆಳೆಗೆ ಲಿಕ್ವಿಡ್‌ ಗೊಬ್ಬರದ ಅವಶ್ಯಕತೆ ಇರುವುದಿಲ್ಲ. ಇದರಿಂದ ರೈತರಿಗೆ ಯೂರಿಯಾ ಗೊಬ್ಬರವನ್ನು ಕೊಂಡುಕೊಳ್ಳಲು ಬೆಲೆ ದುಬಾರಿ ಆಗಿದೆ.

ಅಕ್ರಮ ರಸಗೊಬ್ಬರ ಮಾರಾಟಕ್ಕೆ ಬ್ರೇಕ್‌ ಹಾಕಿ: ತಾಲೂಕಿನಲ್ಲಿ ಕಳೆದ ಎರಡು ತಿಂಗಳಿಂದ ಒಂದು ಹನಿಯೂ ಮಳೆ ಆಗಿರಲಿಲ್ಲ. ರಾಗಿ ಬೆಳೆ ಬಿತ್ತನೆ ಮಾಡಿದ್ದರೂ, ಒಣಗುತ್ತಿದ್ದ ವೇಳೆಯಲ್ಲಿ ಕಳೆದ ಮೂರು ದಿನ ಗಳಿಂದ ಸಾಧಾರಣ ಮಳೆಯಾಗಿದೆ. ಇದರಿಂದ ಬೆಳೆಗೆ ಅನುಕೂಲ ಆಗಿದ್ದು, ರೈತರ ಮುಖದಲ್ಲಿ ಸಂತಸವಾಗಿದೆ. ರಾಗಿ ಬೆಳೆ ಪೋಷಣೆಗೆ ಮುಖ್ಯ ವಾಗಿ ಯೂರಿಯಾ ಗೊಬ್ಬರ ಕೊರತೆ ಆಗಿದೆ. ಖಾಸಗಿ ಗೊಬ್ಬರದ ಅಂಗಡಿಗಳಲ್ಲಿ ಯೂರಿಯಾ ಲಭ್ಯವಿದ್ದರೂ, ಅಕ್ರಮವಾಗಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಈ ಕೂಡಲೇ ದಿಢೀರ್‌ ಭೇಟಿ ನೀಡಿ ಪರಿಶೀಲನೆ ಮಾಡಬೇಕಾಗಿದೆ. ಯೂರಿಯಾ ಗೊಬ್ಬರ ಅಕ್ರಮ ಮಾರಾಟಕ್ಕೆ ಬ್ರೇಕ್‌ ಹಾಕಿ ರೈತರಿಗೆ ಮುಕ್ತವಾಗಿ ಯೂರಿಯಾ ಗೊಬ್ಬರ ಸಿಗುವಂತೆ ಮಾಡಬೇಕಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದ್ದಾರೆ.

Advertisement

ಈ ಬಾರಿ ಬರಗಾಲ ಬಂದಿರುವುದರಿಂದ ಮಳೆಯಾಶ್ರಿತ ರಾಗಿ ಬೆಳೆಯು ಆಗುವುದಿಲ್ಲ ಎಂದುಕೊಂಡು ಸುಮ್ಮನಿದ್ದೇವೆ. ಆದರೆ ಕಳೆದ 3 ದಿನಗಳಿಂದ ಸ್ವಲ್ಪ ಮಳೆ ಬಂದಿದ್ದು ಮತ್ತೆ ರಾಗಿ ಬೆಳೆಯ ಮೇಲೆ ಆಸೆ ಬಂದಿದೆ. ತಾಲೂಕಿನ ಸೊಸೈಟಿ ಸೇರಿದಂತೆ ಎಲ್ಲಿ ಕೇಳಿದರೂ ಯೂರಿಯಾ ಗೊಬ್ಬರ ಇಲ್ಲವೆಂದು ವಾಪಸ್‌ ಕಳುಹಿಸುತ್ತಿದ್ದಾರೆ. ಆದರೆ, ಕೆಲವು ರೈತರು ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೆಲೆ ನೀಡಿದರೆ ಸಿಗುತ್ತಿದೆ ಎಂದು ಹೇಳುತ್ತಿದ್ದು, ಅಧಿಕಾರಿಗಳು ಕೂಡಲೇ ಗೊಬ್ಬರದ ಕೊರತೆ ನೀಗಿಸಿದರೆ ಅನುಕೂಲವಾಗುತ್ತದೆ. -ಎಂ.ಸುರೇಶ್‌, ಐತಾಂಡಹಳ್ಳಿ ರೈತ

ತಾಲೂಕಿನಲ್ಲಿ ಮಳೆ ಇಲ್ಲದೇ ರಾಗಿ ಬೆಳೆ ಒಣಗುತ್ತಿದ್ದರಿಂದ ರಾಜ್ಯ ಸರ್ಕಾ ರವು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದು, ಬೆಳೆ ಸಮೀಕ್ಷೆ ಮಾಡ ಲಾಗುತ್ತಿದೆ. ಈ ಕಾರಣದಿಂದ ಗೊಬ್ಬರ ಅಂಗಡಿಗಳು ಯೂರಿಯಾ ಗೊಬ್ಬರವನ್ನು ದಾಸ್ತಾನು ಮಾಡಲು ಸಾಧ್ಯವಾಗಿರಲಿಲ್ಲ. ಕಳೆದ ಮೂರು ದಿನಗಳಿಂದ ಸ್ವಲ್ಪ ಮಳೆ ಬಂದಿದ್ದು, ಗೊಬ್ಬರದ ಅವಶ್ಯಕತೆ ಹೆಚ್ಚಾ ಗಿದೆ. ಈ ಬಗ್ಗೆ ಎಲ್ಲಾ ಗೊಬ್ಬರದ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿದ್ದು, 2 ದಿನದಲ್ಲಿ ಯೂರಿಯಾ ಗೊಬ್ಬರವನ್ನು ದಾಸ್ತಾನು ಮಾಡಲಾಗುವುದು. ಅಧಿಕ ಬೆಲೆ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು. -ಎನ್‌.ನಾರಾಯಣರೆಡ್ಡಿ, ಕೃಷಿ ಅಧಿಕಾರಿ, ಕಸಬಾ ಹೋಬಳಿ

-ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next