ಹುನಗುಂದ: ಬರದ ಭೀಕರತೆಯ ಕರಾಳ ಛಾಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಿಸಿಲಿನ ತಾಪ ಸಹಿಸಿಕೊಳ್ಳದೇ ಹಾಗೂ ತಿನ್ನಲು ಮೇವು ಇಲ್ಲದೇ ಬಿಸಿಲಿನಲ್ಲಿಯೇ ಜಾನುವಾರುಗಳು ಕೊರಗುವಂತಾಗಿದೆ.
ಈ ಬಾರಿಯ ಬೇಸಿಗೆ ಭಯಂಕರ ಬಿಸಿಲಿನಿಂದ ನಗರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಹನಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ಜಾನುವಾರುಗಳ ಮೇವಿನ ಬಹುದೊಡ್ಡ ಕೊರತೆ ಎದ್ದು ಕಾಣುತ್ತಿದೆ.
ಸತತ ಎರಡು ಮೂರು ವರ್ಷಗಳಿಂದ ಮುಂಗಾರು ಹಿಂಗಾರು ಮಳೆಯ ವೈಫಲ್ಯದಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಸರಿಯಾದ ಬೆಳೆಯನ್ನೇ ಕಾಣದೇ ಕಂಗಾಲಾದ ರೈತರು ದನಕರುಗಳ ಮೇವಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮೂರು ವರ್ಷಗಳ ಹಿಂದೆ ಅಲ್ಪ ಸ್ವಲ್ಪ ಸಂಗ್ರಹಿಸಿಟ್ಟ ಮೇವು ಇಲ್ಲಿಯವರೆಗೆೆ ಜಾನುವಾರುಗಳಿಗೆ ಆಶ್ರಯವಾಗಿತ್ತು. ಸದ್ಯ ಇದ್ದ ಮೇವು ಖಾಲಿಯಾಗಿ ಹಿಡಿ ಮೇವು ಹುಡುಕಾಡಿದರೂ ಸಿಗುತ್ತಿಲ್ಲ. ಸಿಕ್ಕರೂ ಒಣ ಮೇವಿನ ಬೆಲೆ ದುಬಾರಿಯಾಗಿ ಕೊಂಡುಕೊಳ್ಳಲು ಸಾಧ್ಯವಾಗದೇ ದನಕರುಗಳನ್ನೇ ಮಾರಾಟ ಮಾಡಲು ರೈತರು ಮುಂದಾಗುತ್ತಿದ್ದಾರೆ.
ಹೊರ ರಾಜ್ಯಕ್ಕೆ ಮೇವು ಸಾಗಾಟ: ಬೇಸಿಗೆ ಆರಂಭವಾಗುತ್ತಿದ್ದಂತೆ ತಾಲೂಕಿನ ಅನೇಕ ಕಡೆಗಳಿಂದ ಹೊರರಾಜ್ಯದ ಎರಡು ಮೂರು ಲಾರಿಗಳ ಮೂಲಕ ನಿರಂತರ ಮೇವು ಸಾಗಾಟ ಮಾಡಲಾಗುತ್ತಿದೆ.
Advertisement
ದನಕರು ಬದುಕಿಸಲು ರೈತ ನಿತ್ಯ ಹೆಣಗಾಡುತ್ತಿದ್ದಾನೆ. ಪ್ರತಿ ನಿತ್ಯ ಎರಡರಿಂದ ಮೂರು ಲಾರಿಗಳ ಮೂಲಕ ಹೊರರಾಜ್ಯಕ್ಕೆ ಅಕ್ರಮವಾಗಿ ಮೇವು ಸಾಗಾಟವಾಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.
Related Articles
Advertisement
ತಾಲೂಕಿನ ಪಶುಪಾಲನೆ ಇಲಾಖೆ ನೀಡಿದ ಅಂಕಿ ಅಂಶದ ಪ್ರಕಾರ ಮೇವು ಅವಲಂಬಿತ 69,714 ದೊಡ್ಡರಾಸುಗಳಿದ್ದು. ಚಿಕ್ಕರಾಸುಗಳ ಸಂಖ್ಯೆ (ಕುರಿ ಮತ್ತು ಮೇಕೆ) 2,71,594. ಅವುಗಳಿಗೆ ಬೇಕಾದ ಮೇವು ತಾಲೂಕಿನಲ್ಲಿ ಅಲಭ್ಯವಾಗಿದೆ. ಇದರಿಂದ ಮೇವಿನ ಕೊರತೆಯ ಬಗ್ಗೆ ಬೇಸಿಗೆ ಮುನ್ನವೇ ರೈತರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾದ ಅಧಿಕಾರಿಗಳು ಲೋಕಸಭೆಯ ಚುನಾವಣೆ ನೆಪ ಹೇಳುತ್ತಿದ್ದಾರೆ. ಗೋಶಾಲೆ ತೆರೆಯದೇ ಮೇವನ್ನು ಸಂಗ್ರಹಿಸದೇ ಜಾನುವಾರಗಳ ಜೀವನದ ಜೊತೆಗೆ ಚಲ್ಲಾಟವಾಡುತ್ತಿದ್ದಾರೆ.
ಮೇವಿನ ಬೆಲೆ ದುಬಾರಿ: ಸತತ ಬರಗಾಲ ಬಿದ್ದ ಕಾರಣ ಒಣ ಮೇವಿನ ಬಲೆ ದುಬಾರಿಯಾಗಿದೆ. ನಿರೀಕ್ಷಿತ ಮಟ್ಟದ ಮಳೆಯಾಗದೇ ಬೆಳೆಯ ಪ್ರಮಾಣ ಗಣನೀಯವಾದ ಕಡಿಮೆಯಾಗಿ ತಾಲೂಕಿನಾದ್ಯಂತ ಒಣ ಮೇವಿನ ಬೆಲೆ ದುಬಾರಿಯಾಗಿದೆ. ಒಂದು ಕ್ವಿಂಟಲ್ ಮೇವಿಗೆ 1200 ರೂ.,ಒಂದು ಲಾರಿ ಒಣ ಮೇವಿಗೆ 20 ರಿಂದ 30 ಸಾವಿರ ರೂ. ಬೇಡಿಕೆಯಿದೆ. ರೈತರಿಗೆ ದುಬಾರಿ ಕೊಂಡುಕೊಳ್ಳುವ ಶಕ್ತಿ ಇಲ್ಲ.
ಜಾನುವಾರುಗಳ ಆಂಕಿ ಸಂಖ್ಯೆ: ಪಶುಪಾಲನಾ ಇಲಾಖೆ ನೀಡಿದ ಜಾನುವಾರು ಗಣತಿಯ ಅಂಕಿ ಅಂಶದ ಪ್ರಕಾರ 2018-19ನೇ ಸಾಲಿನಲ್ಲಿ ಎತ್ತು ಮತ್ತು ಆಕ್ಕಳ ಸಂಖ್ಯೆ 43,455, ಎಮ್ಮೆ 26,259, ಕುರಿ 2,00582, ಮೇಕೆ 71,012 ಗಳಿವೆ. 2019-20ರಲ್ಲಿ ಎತ್ತು ಮತ್ತು ಆಕ್ಕಳು ಸಂಖ್ಯೆ 25,855, ಎಮ್ಮೆ 16,531, ಕುರಿ 13,9529, ಮೇಕೆ 57702.
ಅಧಿಕಾರಿಗಳ ನಿರ್ಲಕ್ಷ್ಯ: ಪ್ರತಿ ವರ್ಷ ಬೇಸಿಗೆ ಸಮೀಪಿಸುತ್ತಿದ್ದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ಬಗ್ಗೆ ತಹಶೀಲ್ದಾರ್ ಸಭೆ ಕರೆದು ಎಲ್ಲೆಲ್ಲಿ ನೀರು ಮತ್ತು ಮೇವಿನ ಅಭಾವವಿದ್ದಲ್ಲಿ ಗೋಶಾಲೆ ಸ್ಥಾಪಿಸುವಂತೆ ಆದೇಶಿಸಿ ದ್ದರೂ ಚುನಾವಣೆ ನೆೆಪವೊಡ್ಡಿ ಗೋಶಾಲೆ ತೆರೆಯಲು ಹಿಂದೇಟು ಹಾಕುತ್ತಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಮೇವಿನ ಸಮಸ್ಯೆ ಉಂಟಾದರೇ ಜಾನುವಾರುಗಳಿಗೆ ಸರಿಯಾದ ನೆರಳು ಇಲ್ಲದೇ ಕೆಂಡದಂತ ಬಿಸಿಲಿನಲ್ಲಿ ನಿಲ್ಲುವಂತಾಗಿದೆ.