Advertisement
ಫೋನಿ ಚಂಡಮಾರುತದಿಂದ ಬಾಧಿತ ಒಡಿಶಾದಲ್ಲಿ ಈಗ ರಕ್ಷಣಾ ಕಾರ್ಯಾಚರಣೆ ತೀವ್ರಗತಿಯಲ್ಲಿ ಸಾಗಿದೆ. ವಿಶೇಷವಾಗಿ ಪುರಿಯಲ್ಲಿ ಆಸ್ತಿ ಪಾಸ್ತಿ ಭಾರೀ ಹಾನಿ ಯಾಗಿದೆ. ರಸ್ತೆ, ಟೆಲಿಕಾಂ ಹಾಗೂ ವಿದ್ಯುತ್ ಸಂಪರ್ಕ ವನ್ನು ಮರುಸ್ಥಾಪಿಸುವ ಕೆಲಸ ತ್ವರಿತಗತಿಯಲ್ಲಿ ಸಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಒಡಿಶಾದ ವಿಪತ್ತು ಕ್ಷಿಪ್ರ ಕಾರ್ಯ ಪಡೆ (ಒಡಿಆರ್‌ಎಎಫ್) ಮತ್ತು ಒಡಿಶಾ ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ಕಾರ್ಯಗಳಲ್ಲಿ ಶ್ರಮಿಸುತ್ತಿವೆ. ಇವರಿಗೆ ಭಾರತೀಯ ನೌಕಾಪಡೆಯ ಕ್ಷಿಪ್ರ ಕಾರ್ಯ ಪಡೆ (ಕ್ಯುಆರ್‌ಟಿ), ಕರಾವಳಿ ಕಾವಲು ಪಡೆಗಳೂ ಕೈ ಜೋಡಿಸಿವೆ.
ಫೋನಿ ಚಂಡಮಾರುತದಿಂದಾಗಿ ಪುರಿಯಲ್ಲಿ ಭೂ ಕುಸಿತ ಉಂಟಾಗುವ ಸ್ಥಳವನ್ನು ನಿಖರವಾಗಿ ಗುರುತಿಸಿದ್ದ ಭಾರತೀಯ ಹವಾಮಾನ ಇಲಾಖೆಯ ಸಿಬಂದಿಯ ಕ್ಷಮತೆಯ ಬಗ್ಗೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ”ತಂತ್ರಜ್ಞಾನ ವನ್ನು ಸಮರ್ಥವಾಗಿ ಬಳಸಿಕೊಂಡು ಜನಸಾಮಾನ್ಯರನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತೀಯ ಹವಾಮಾನ ಇಲಾಖೆ ಮಾಡಿರುವ ಕಾಯಕ ಅನುಕರಣೀಯ” ಎಂದು ವಿಶ್ವಸಂಸ್ಥೆಯ ಪ್ರಕೃತಿ ವೈಪರೀತ್ಯ ನಿರ್ವಹಣಾ ವಿಭಾಗದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವ ಮಾಮಿ ಮಿಝುತೋರಿ ಶ್ಲಾಘಿಸಿದ್ದಾರೆ.
Related Articles
Advertisement
ಬಾಂಗ್ಲಾದಲ್ಲಿ 14 ಬಲಿ ಪಡೆದ ಫೋನಿಶನಿವಾರದಂದು ಬಾಂಗ್ಲಾಕ್ಕೆ ಕಾಲಿಟ್ಟ ಫೋನಿ ಯಿಂದಾಗಿ 14 ಜನರು ಮೃತರಾಗಿದ್ದು, 63 ಜನರು ಗಾಯಗೊಂಡಿದ್ದಾರೆ. ಚಂಡಮಾರುತ ಅಪ್ಪಳಿಸುವ ಪ್ರದೇಶಗಳನ್ನು ಮೊದಲೇ ಗುರುತಿಸಿ ದ್ದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ, 36 ಹಳ್ಳಿಗಳ ಜನರೂ ಸೇರಿದಂತೆ 16 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗಿತ್ತು. ನೊವಾಖಲಿ, ಭೋಲಾ ಮತ್ತು ಲಕ್ಷ್ಮೀಪುರ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ 14 ಜನರು ಸಾವಿಗೀಡಾಗಿದ್ದಾರೆ. ಮೃತಪಟ್ಟವರಲ್ಲಿ ಎರಡು ವರ್ಷದ ಮಗು ಸೇರಿದಂತೆ ನಾಲ್ವರು ಮಹಿಳೆ ಯರೂ ಇದ್ದಾರೆ. ನೊವಾಖಲಿ ಜಿಲ್ಲೆಯಲ್ಲಿ ಮನೆ ಯೊಂದು ಕುಸಿದಿದ್ದರಿಂದ ಒಬ್ಬ ಬಾಲಕ ಮೃತಪಟ್ಟು ಮನೆಯ ಇತರ ಸದಸ್ಯರು ಗಾಯ ಗೊಂಡಿದ್ದಾರೆ. ಲಕ್ಷ್ಮೀಪುರದಲ್ಲಿ 70 ವರ್ಷದ ಅನ್ವರಾ ಬೇಗಂ ಎಂಬ ವೃದ್ಧೆಯೊಬ್ಬರು ಮನೆ ಕುಸಿದಿದ್ದರಿಂದ ಮೃತಪಟ್ಟರು. ಉಳಿದ 10 ಜನರು ಭೋಲಾ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಬಾಂಗ್ಲಾದ ಹಲವಾರು ಕಡೆ ವಿದ್ಯುತ್ ಸಂಪರ್ಕ, ಟೆಲಿಫೋನ್ ಹಾಗೂ ಇಂಟರ್ನೆಟ್ ಸಂಪರ್ಕ ಸ್ಥಗಿತಗೊಂಡಿದ್ದವು. ಶನಿವಾರ ಸಂಜೆಯ ಹೊತ್ತಿಗೆ ಚಂಡಮಾರುತದ ವೇಗ ಕಡಿಮೆ ಯಾಗಿತ್ತಾದರೂ, ಎಲ್ಲೆಡೆಯೂ ಧಾರಾಕಾರ ಮಳೆ ಸುರಿಯುತ್ತಲೇ ಇತ್ತು. ಹಲವೆಡೆ ಮನೆಗಳು ಧ್ವಂಸಗೊಂಡವು. ಸಂಕ್ರೈಲ್, ವೆಸ್ಟ್ ಮಿಡ್ನಾಪುರ್‌ನ ನಾರಾಯಣ್‌ಗಢ ಬ್ಲಾಕ್, ಸೌತ್ 24 ಪರಗಣಾಸ್‌ನ ಕಾಕದ್ವೀಪ್ ಮತ್ತು ಹಸ್ನಾಬಾದ್, ಧಮಾಕಲಿ, ಪೂರ್ವ ಮಿಡ್ನಾಪುರದ ರಾಮನಗರದಲ್ಲಿ ರಕ್ಷಣಾ ಕಾರ್ಯಗಳು ಭರದಿಂದ ಸಾಗಿವೆ. ಬಾಂಗ್ಲಾದಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಸುಮಾರು 112 ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿತ್ತು. ಇತ್ತ, ಭಾರತದಲ್ಲಿ ಈಶಾನ್ಯ ರಾಜ್ಯಗಳ ಕಡೆಗೆ ಪ್ರಯಾಣಿಸಬೇಕಿದ್ದ 81 ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿತ್ತು.
ಪುರಿಗೆ ಭಾರೀ ಹಾನಿ
ಭುವನೇಶ್ವರದಲ್ಲಿ ಸುಮಾರು 10,000 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಪುರಿ, ಖುರ್ದಾ, ಗಂಜಾಂ, ಜಗತ್‌ಸಿಂಗ್‌ಪುರ, ಕೇಂದ್ರಾಪುರ ಹಾಗೂ ಬಾಲಸೋರ್‌ನಲ್ಲೂ ಇದೇ ಪರಿಸ್ಥಿತಿ ಉದ್ಭವಿ ಸಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ ಹಾಗೂ ಆಸ್ಪತ್ರೆಗಳಲ್ಲಿ ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗಿದೆ. ಹೀಗಾಗಿ, ವಿದ್ಯುತ್ ಮರು ಸಂಪರ್ಕ ನೀಡಲು ಆದ್ಯತೆ ನೀಡಲಾಗುತ್ತಿದೆ. ಅದರಲ್ಲೂ ಆಸ್ಪತ್ರೆ ಹಾಗೂ ಸಾರಿಗೆ ನಿಲ್ದಾಣಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಶನಿವಾರದ ಸಂಜೆಗೆ ಶೇ. 25ರಷ್ಟು ಪುನಶ್ಚೇತನ ಕೆಲಸಗಳು ಪೂರ್ಣಗೊಂಡಿವೆ ಎಂದು ಜಿಲ್ಲಾಡಳಿತ ಹೇಳಿದೆ. ಇನ್ನು, ಭುವನೇಶ್ವರ ಸೇರಿದಂತೆ ಅನೇಕ ಕಡೆ ಟೆಲಿಕಾಂ ಸಂಪರ್ಕ ಸಂಪೂರ್ಣವಾಗಿ ನಿಂತು ಹೋಗಿದ್ದು, ದೂರವಾಣಿಯ ಲೈನ್‌ಗಳನ್ನು ಸರಿಮಾಡುವ ಕೆಲಸ ಪ್ರಗತಿಯಲ್ಲಿವೆ.
ಚಂಡಮಾರುತದಿಂದ ಮೀನುಗಾರರ ಸಮುದಾಯ ಹಾಗೂ ರೈತರಿಗೆ ಹೆಚ್ಚಿನ ನಷ್ಟವಾಗಿದೆ. ಸಮುದ್ರ ದಡದಲ್ಲಿದ್ದ ಮೀನುಗಾರರ ದೋಣಿಗಳೇ ಚಂಡಮಾರುತದ ರಭಸಕ್ಕೆ ಮೀನುಗಾರರ ಮನೆ ಗಳಿಗೆ ಬಂದು ಅಪ್ಪಳಿಸಿದ್ದರಿಂದ, ದೋಣಿಗಳು, ಮನೆಗಳು ಮುರಿದಿವೆ. ಇನ್ನು, ರೈತರ ಪಾಲಿಗೆ ಆಶಾದಾಯಕವಾಗಿದ್ದ ಬೇಸಗೆ ಫಸಲುಗಳು, ಆರ್ಚರ್ಡ್ಸ್ ಮತ್ತು ಇನ್ನಿತರ ತೋಟಗಾರಿಕೆ ಬೆಳೆಗಳು ನಾಶವಾಗಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಫೋನಿ ಚಂಡಮಾರುತ ಪುರಿಯಲ್ಲಿ ಭಾರೀ ಹಾನಿ ಮಾಡಿದೆ. ಪುರಿಯ ಬಹುತೇಕ ಬಡಾವಣೆಗಳು ಜಲಾವೃತವಾಗಿದ್ದು, ಅನೇಕ ಕಡೆ ಮನೆಗಳು, ಕಟ್ಟಡಗಳು ನೆಲಕ್ಕುರುಳಿವೆ. ಜಲಾವೃತವಾಗಿರುವ ಅನೇಕ ಪ್ರದೇಶಗಳಿಗೆ ರಕ್ಷಣಾ ಸಿಬಂದಿ ತಲುಪಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದೋಣಿ ಅಥವಾ ಸಣ್ಣ ಬೋಟ್‌ಗಳ ಮೂಲಕವೇ ಸಾಗಬೇಕಾಗಿದೆ. ಎಲ್ಲೆಡೆ ಮರಗಳು, ವಿದ್ಯುತ್ ಕಂಬಗಳು, ಮನೆಗಳ ಅವಶೇಷಗಳೇ ದಟ್ಟವಾಗಿರುವುದರಿಂದ ಕೆಲವೆಡೆ ಸಿಲುಕಿಕೊಂಡ ಜನರನ್ನು ತಲುಪಲು ಸಾಧ್ಯವಾಗಿಲ್ಲ. ದೂರವಾಣಿ ಸಂಪರ್ಕ, ವಿದ್ಯುತ್ ಸಂಪರ್ಕ ಸಂಪೂರ್ಣ ನಿಲುಗಡೆಯಾಗಿರುವುದರಿಂದ ಚಂಡಮಾರುತದಿಂದ ಬಾಧಿತವಾಗಿರುವ ಒಂದು ಪ್ರದೇಶದ ಜನರು, ಮತ್ತೂಂದು ಪ್ರಾಂತ್ಯದಲ್ಲಿರುವ ತಮ್ಮ ಆತ್ಮೀಯರ ಪರಿಸ್ಥಿತಿಯನ್ನೂ ತಿಳಿಯಲು ಸಾಧ್ಯವಾಗುತ್ತಿಲ್ಲ.
ಮೋದಿ-ಪಟ್ನಾಯಕ್ ಮಾತುಕತೆ
ಚಂಡಮಾರುತದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಶನಿವಾರ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ, ಪರಿಹಾರ ಕಾರ್ಯಗಳು, ಪುನರ್ವಸತಿ ಹಾಗೂ ಇನ್ನಿತರ ಕಾರ್ಯಗಳಿಗೆ ಕೇಂದ್ರದಿಂದ ಸಿಗಬೇಕಾದ ಎಲ್ಲಾ ರೀತಿಯ ನೆರವನ್ನು ನೀಡುವುದಾಗಿ ಮೋದಿ ಆಶ್ವಾಸನೆ ನೀಡಿದ್ದಾರೆ. ಇದನ್ನೇ ತಮ್ಮ ಟ್ವಿಟರ್‌ನಲ್ಲಿ ಪ್ರಕಟಿಸಿರುವ ಪ್ರಧಾನಿ, ‘ಚಂಡಮಾರುತದಿಂದ ಪೀಡಿತವಾಗಿರುವ ಒಡಿಶಾದ ಬೆನ್ನಿಗೆ ಇಡೀ ದೇಶವೇ ನಿಲ್ಲಲಿದೆ’ ಎಂದಿದ್ದಾರೆ.
ಒಡಿಶಾ ಮುಖ್ಯಮಂತ್ರಿ ಅವಲೋಕನ
ಚಂಡಮಾರುತದಿಂದ ಹಾನಿಗೀಡಾದ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿದ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಅಪಾರ ಹಾನಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇದು ದೇಶ ಕಂಡ ಚಂಡಮಾರುತಗಳಲ್ಲೇ ಅತ್ಯಂತ ಹೆಚ್ಚು ಹಾನಿ ಮಾಡಿದ ಸೈಕ್ಲೋನ್ ಎಂದ ಅವರು, ಫೋನಿಯಿಂದ 12 ಲಕ್ಷ ಜನರು ಸಂತ್ರಸ್ತರಾಗಿದ್ದು, ಅವರನ್ನು ತಾತ್ಕಾಲಿಕ ಕ್ಯಾಂಪ್‌ಗ್ಳಿಗೆ ರವಾನೆ ಮಾಡಲಾಗುತ್ತಿದೆ. ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಒಟ್ಟಾರೆ 4,000 ಕ್ಯಾಂಪ್‌ಗ್ಳನ್ನು ತೆರೆಯಲಾಗಿದ್ದು, ತೊಂದರೆಗೀಡಾದವರ ಸಹಾಯ ಹಾಗೂ ಮಾರ್ಗದರ್ಶನಕ್ಕಾಗಿ 880 ಸೈಕ್ಲೋನ್ ಸೆಂಟರ್‌ಗಳನ್ನು ತೆರೆಯಲಾಗಿದೆ. 10,000 ಹಳ್ಳಿಗಳಲ್ಲಿ ಹಾಗೂ 52 ಪಟ್ಟಣ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.