Advertisement

ರಕ್ಷಣ ಇಲಾಖೆಯ ಸಮುಚಿತ ನಿರ್ಧಾರ ಆತ್ಮನಿರ್ಭರತೆಯ ಹಾದಿಯಲ್ಲಿ

11:49 AM Aug 10, 2020 | sudhir |

ಭಾರತವನ್ನು ಆತ್ಮನಿರ್ಭರತೆಯ ಹಾದಿಯಲ್ಲಿ ಕೊಂಡೊಯ್ಯುವ ವಿಚಾರದಲ್ಲಿ ಹಾಗೂ ಮೇಕ್‌ ಇನ್‌ ಇಂಡಿಯಾ ಕಾರ್ಯಕ್ರಮಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೆಜ್ಜೆಯಿಡುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಈಗ ದೇಶದ ರಕ್ಷಣ ಕೈಗಾರಿಕೆ ಮತ್ತು ಉತ್ಪಾದನಾ ವಲಯಗಳಿಗೆ ಹೆಚ್ಚಿನ ಅವಕಾಶ ದೊರಕಿಸುವ ನಿಟ್ಟಿನಲ್ಲಿ ರಕ್ಷಣ ಇಲಾಖೆ ಮಹತ್ವದ ಕ್ರಮಕ್ಕೆ ಮುಂದಾಗಿದೆ.

Advertisement

ವಿದೇಶಗಳಿಂದ 101 ರಕ್ಷಣ ಸಾಮಗ್ರಿಗಳ ಆಮದಿನ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿದೆ ರಕ್ಷಣ ಇಲಾಖೆ. ಈ ಪಟ್ಟಿಯಲ್ಲಿ ಕೇವಲ ಸರಳ ರಕ್ಷಣ ಪರಿಕರಗಳಷ್ಟೇ ಅಲ್ಲ, ಬದಲಾಗಿ ಫಿರಂಗಿ ಬಂದೂಕುಗಳು, ಸೋರ್ನಾ ಸಿಸ್ಟಮ್ಸ್ , ರಾಡಾರ್ಗಳು, ಸಾರಿಗೆ ವಿಮಾನ, ಶಸ್ತ್ರಾಸ್ತ್ರ ಗಳಿವೆ ಎನ್ನುವುದನ್ನು ಗಮನಿಸಬೇಕು. ಈ ವೇಳೆಯಲ್ಲೇ ಮುಂದಿನ 6-7 ವರ್ಷಗಳವರೆಗೆ ರಕ್ಷಣ ಇಲಾಖೆಯ 4 ಲಕ್ಷ ಕೋ. ರೂ. ಪ್ರಮಾಣದ ಕಾಂಟ್ರಾಕ್ಟರ್ ಗಳನ್ನು ಭಾರತೀಯ ಕಾರ್ಖಾನೆಗಳಿಗೆ ನೀಡಲು ಸರಕಾರ ನಿರ್ಧರಿಸಿದೆ.

ನಿಸ್ಸಂಶಯವಾಗಿಯೂ ಇದು ದಿಟ್ಟ ನಡೆಯೇ ಹೌದು. ಕೋವಿಡ್ -19 ಜಗತ್ತಿನಾದ್ಯಂತ ಸೃಷ್ಟಿಸಿರುವ ಆರ್ಥಿಕ ಆವಾಂತರವು, ಒಂದು ದೇಶ ಎಲ್ಲ ರೀತಿಯಿಂ ದಲೂ ಸ್ವಾವಲಂಬಿಯಾಗುವುದು ಎಷ್ಟು ಮುಖ್ಯ ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತಿದೆ. ಉದಾಹರಣೆಗೆ, ಇಂದು ಚೀನವನ್ನೇ ಗಮನಿಸಿ. ಇಷ್ಟೆಲ್ಲ ಅವಾಂತರ ಸೃಷ್ಟಿಸಿದರೂ ಡ್ರ್ಯಾಗನ್‌ ರಾಷ್ಟ್ರ ಜಾಗತಿಕ ಒತ್ತಡಕ್ಕೆ ಮಣಿಯದೇ ತನ್ನ ಇಚ್ಛೆಯಂತೆ ತಾನು ನಡೆಯುತ್ತಿರುವುದರ ಹಿಂದೆ, ಅದರ ಸ್ವಾವಲಂಬನೆಯೇ ಮುಖ್ಯ ಅಂಶ ಎನ್ನುತ್ತಾರೆ ವಿತ್ತ ವಿಶ್ಲೇಷಕರು. ಈ ಕಾರಣಕ್ಕಾಗಿಯೇ, ಸ್ವಾವಲಂಬನೆ ಯಾ ಆತ್ಮನಿರ್ಭರತೆ ಎನ್ನುವುದು ದುರ್ಬಲವಾಗುತ್ತಿರುವ ದೇಶಗಳ ಆರ್ಥಿಕತೆಗಳಿಗೆ ದೀರ್ಘಾವಧಿ ಬಲ ತುಂಬಬಲ್ಲ ಇಂಧನವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ದೊಡ್ಡ ಮಟ್ಟದಲ್ಲೇ ಚಿಂತನೆ ನಡೆಸಿರುವುದು, ನಿಸ್ಸಂಶಯವಾಗಿಯೂ ಭವಿಷ್ಯದಲ್ಲಿ ಭಾರತಕ್ಕೆ ಬಲ ತರಲಿದೆ.

ರಕ್ಷಣ ಸಾಮಗ್ರಿಗಳ ವಿಚಾರಕ್ಕೇ ಬರುವುದಾದರೆ, ಭಾರತವು ಜಗತ್ತಿನಲ್ಲೇ ಎರಡನೇ ಅತಿದೊಡ್ಡ ರಕ್ಷಣ ಪರಿಕರಗಳ ಆಮದುದಾರ ದೇಶವಾಗಿದೆ. ಆದರೆ ಇನ್ನೊಂದೆಡೆ ಶಸ್ತ್ರಾಸ್ತ್ರ ರಫ್ತುದಾರ ದೇಶಗಳ ಪಟ್ಟಿಯಲ್ಲಿ ಅದು 23ನೇ ಸ್ಥಾನದಲ್ಲಿದೆ! ಈ ಕಾರಣಕ್ಕಾಗಿಯೇ, ರಕ್ಷಣ ಸಾಮಗ್ರಿಗಳ ಉತ್ಪಾದನ ಹಬ್‌ ಆಗುವ ನಿಟ್ಟಿನಲ್ಲಿ ಭಾರತ ಚಿಂತಿಸುವುದು ಒಳಿತು. ಈಗಾಗಲೇ ಈ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಗಳು ಆಗುತ್ತಿದ್ದು, 2025ರ ವೇಳೆಗೆ ಭಾರತದ ರಕ್ಷಣ ಉತ್ಪಾದನೆಯ ಪ್ರಮಾಣ 1.75 ಲಕ್ಷ ಕೋ. ರೂ. ತಲುಪುವ ನಿರೀಕ್ಷೆಯಿದೆ. ಒಟ್ಟಲ್ಲಿ ಆತ್ಮನಿರ್ಭರತೆಯ ಕನಸು ನನಸಾದಷ್ಟೂ ದೇಶ ಬಲಿಷ್ಠವಾಗುತ್ತಾ ಸಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next