ನವದೆಹಲಿ: ಭಾರತೀಯ ಸೇನೆಯನ್ನು ಆಧುನಿಕಗೊಳಿಸುವ ನಿಟ್ಟಿನಲ್ಲಿ ಮತ್ತೂಂದು ಮಹತ್ವದ ಹೆಜ್ಜೆಯನ್ನಿಟ್ಟಿರುವ ಕೇಂದ್ರ ಸರ್ಕಾರ, ಅಮೆರಿಕ ಹಾಗೂ ಕೆಲ ಐರೋಪ್ಯ ರಾಷ್ಟ್ರಗಳ ಸೈನಿಕರು ಬಳಸುವ ‘ಸಿಗ್ ಸೌಯರ್’ ರೈಫಲ್‌ಗಳನ್ನು ಖರೀದಿಸಲು ಮುಂದಾಗಿದೆ. ಒಟ್ಟು 73,000 ಕೋಟಿ ರೂ. ವೆಚ್ಚದ ವ್ಯವಹಾರ ಇದಾಗಿದ್ದು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದೆ.
ಅಮೆರಿಕದ ಶಸ್ತ್ರಾಸ್ತ್ರ ತಯಾರಿಕಾ ಕಂಪನಿಯ ಜತೆಗೆ ಈ ಕುರಿತಂತೆ ಮಾತುಕತೆ ಸಾಗಿದ್ದು, ಇನ್ನೊಂದು ವಾರದಲ್ಲಿ ಒಪ್ಪಂದಕ್ಕೆ ಅಧಿಕೃತ ಮೊಹರು ಬೀಳುವ ಸಾಧ್ಯತೆಯಿದೆ. ಒಪ್ಪಂದದ ದಿನದಿಂದ ಒಂದು ವರ್ಷದೊಳಗೆ ಸೈನಿಕರಿಗೆ ಈ ಅತ್ಯಾಧುನಿಕ ರೈಫಲ್‌ಗಳ ಸಿಗುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ. ಈ ಒಪ್ಪಂದದಡಿ ಲಭ್ಯವಾಗುವ ಶಸ್ತ್ರಾಸ್ತ್ರಗಳನ್ನು ಭಾರತ-ಚೀನಾ ನಡುವಿನ 3,600 ಕಿ.ಮೀ. ದೂರದ ಗಡಿಯಲ್ಲಿ ಸೇವೆ ಸಲ್ಲಿಸುವ ಸೈನಿಕರಿಗೆ ನೀಡಲಾಗುತ್ತದೆ. ಈ ರೈಫಲ್‌ಗಳು ಸದ್ಯಕ್ಕೆ ಈ ಸೈನಿಕರು ಬಳಸುತ್ತಿರುವ ‘ಇನ್ಸಾಸ್’ ರೈಫಲ್‌ಗಳ ಬದಲಿಗೆ ಉಪಯೋಗವಾಗಲಿವೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಅಸಲಿಗೆ, ಇಶಾಪೋರ್‌ನಲ್ಲಿರುವ ದೇಶೀಯ ಶಸ್ತ್ರಾಸ್ತ್ರ ತಯಾರಿಕಾ ಘಟಕ ತಯಾರಿಸಿದ್ದ ರೈಫಲ್‌ಗಳನ್ನು ಕೊಳ್ಳಲು ಸೇನೆ ನಿರ್ಧರಿಸಿತ್ತಾದರೂ, ಅವು ಪರೀಕ್ಷಾ ಹಂತದಲ್ಲಿ ವಿಫಲವಾಗಿದ್ದರಿಂದ ಈಗ ಅಮೆರಿಕದ ಸಿಗ್ ಸೌಯರ್ ಮಾದರಿ ರೈಫಲ್‌ಗಳ ಖರೀದಿಗೆ ನಿರ್ಧರಿಸಲಾಗಿದೆ. ಸೇನೆಯ ಆಧುನೀಕರಣ ಉದ್ದೇಶದಿಂದ 2017ರ ಅಕ್ಟೋಬರ್‌ನಲ್ಲಿ 7 ಲಕ್ಷ ರೈಫಲ್‌ಗಳು, 44,000 ಲಘು ಮೆಷೀನ್‌ಗನ್‌ಗಳು ಹಾಗೂ 44,600 ಕಾರ್ಬೈನ್‌ಗಳನ್ನು (ಮತ್ತೂಂದು ಬಗೆಯ ಮೆಷೀನ್ ಗನ್) ಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.
•ಅಮೆರಿಕ, ಐರೋಪ್ಯ ಸೈನಿಕರು ಬಳಸುವ ‘ಸಿಗ್ ಸೌಯರ್’ ರೈಫಲ್ ಸದ್ಯದಲ್ಲೇ ಭಾರತಕ್ಕೆ
•ಅಮೆರಿಕದ ಶಸ್ತ್ರಾಸ್ತ್ರ ತಯಾರಿಕಾ ಕಂಪನಿಯೊಂದರ ಜತೆಗೆ ಖರೀದಿಗಾಗಿ ಒಪ್ಪಂದ
•ಭಾರತ-ಚೀನಾ ಗಡಿ ಕಾಯುವ ಸೈನಿಕರ ‘ಇನ್ಸಾಸ್’ ರೈಫಲ್ ಬದಲಿಗೆ ‘ಸಿಗ್ ಸೌಯರ್’