ನವದೆಹಲಿ: ದಸರಾ ಉತ್ಸವದ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರತೀವರ್ಷ ನಡೆಸುವ ‘ಶಸ್ತ್ರ ಪೂಜೆ’ ಅಥವಾ ಆಯುಧ ಪೂಜೆಯನ್ನು ಈ ಬಾರಿ ಪ್ರಾನ್ಸ್ ದೇಶದಲ್ಲಿ ಆಚರಿಸಲಿದ್ದಾರೆ. ಭಾರತದ ವಾಯುಪಡೆಗೆ ಸೇರ್ಪಡೆಗೊಳ್ಳಲಿರುವ ಪ್ರಪ್ರಥಮ ರಫೇಲ್ ಯುದ್ಧ ವಿಮಾನವನ್ನು ಸ್ವೀಕರಿಸುವ ಉದ್ದೇಶದಿಂದ ರಾಜನಾಥ್ ಸಿಂಗ್ ಅವರು ಅಕ್ಟೋಬರ್ 8ರಂದು ಫ್ರಾನ್ಸ್ ಗೆ ತೆರಳಲಿದ್ದಾರೆ.
ದಸರಾ ಉತ್ಸವದ ಸಂದರ್ಭದಲ್ಲಿ ಪ್ರತೀ ಬಾರಿ ರಾಜನಾಥ್ ಸಿಂಗ್ ಅವರು ಶಸ್ತ್ರ ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಅವರು ರಕ್ಷಣಾ ಸಚಿವರಾಗಿರುವುದರಿಂದ ಈ ಬಾರಿಯೂ ರಾಜನಾಥ್ ಅವರು ಈ ಸಂಪ್ರದಾಯವನ್ನು ಮುಂದುವರಿಸಲಿದ್ದಾರೆ ಎಂದು ಸಿಂಗ್ ಅವರ ರಕ್ಷಣಾ ಸಚಿವಾಲಯದ ಅಧಿಕಾರಿಗಳ ಹೇಳಿಕೆಯನ್ನು ಉದ್ಧರಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ದಸರಾ ಸಂದರ್ಭದಲ್ಲೇ ಫ್ರಾನ್ಸ್ ನ ಮೆರಿಗ್ನ್ಯಾಕ್ ನಲ್ಲಿ ನಡೆಯಲಿರುವ ರಫೇಲ್ ಹಸ್ತಾಂತರ ಸಮಾರಂಭದ ಸಂದರ್ಭದಲ್ಲೇ ಸಚಿವ ಸಿಂಗ್ ಅವರು ಶಸ್ತ್ರ ಪೂಜೆಯನ್ನೂ ಸಹ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 8ರಂದು ಫ್ರಾನ್ಸ್ ಗೆ ತೆರಳಲಿರುವ ರಾಜನಾಥ್ ಸಿಂಗ್ ಅವರು ಅದೇ ದಿನ ಆರ್.ಬಿ.-01 ಹೆಸರಿನ ಪ್ರಥಮ ರಫೇಲ್ ಯುದ್ಧ ವಿಮಾನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಫ್ರೆಂಚ್ ಪೈಲಟ್ ರಫೇಲ್ ಅನ್ನು ಚಲಾಯಿಸಲಿದ್ದಾರೆ ಮತ್ತು ಸಚಿವ ರಾಜನಾಥ್ ಸಿಂಗ್ ಅವರು ಈ ವಿಮಾನದಲ್ಲಿ ಪೈಲಟ್ ಪಕ್ಕ ಕುಳಿತುಕೊಳ್ಳಲಿದ್ದಾರೆ. ಮತ್ತು ಇದೇ ಸಂದರ್ಭದಲ್ಲಿ ಸಚಿವ ಸಿಂಗ್ ಅವರು ತಮ್ಮ ಸಂಪ್ರದಾಯದ ಶಸ್ತ್ರ ಪೂಜೆಯನ್ನೂ ಸಹ ನಡೆಸಲಿದ್ದಾರೆ ಎಂಬ ಮಾಹಿತಿಯನ್ನು ಭಾರತೀಯ ವಾಯುಪಡೆಯ ಮೂಲಗಳೂ ಸಹ ಖಚಿತಪಡಿಸಿವೆ.
ಭಾರತ ಸರಕಾರವು 2016ರಲ್ಲಿ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು 59 ಸಾವಿರ ಕೋಟಿ ರೂಪಾಯಿಗಳಿಗೆ ಫ್ರಾನ್ಸ್ ದೇಶದಿಂದ ಖರೀದಿಸಲು ನಿರ್ಧರಿಸಿತ್ತು. ಅಕ್ಟೋಬರ್ 8ರಂದು ಈ ಯುದ್ಧ ವಿಮಾನದ ವಿದ್ಯುಕ್ತ ಹಸ್ತಾಂತರ ನಡೆಯಲಿದೆ. ಪ್ರಥಮ ಕಂತಿನಲ್ಲಿ ನಾಲ್ಕು ರಫೇಲ್ ಯುದ್ಧ ವಿಮಾನಗಳು ಮುಂದಿನ ವರ್ಷದ ಎಪ್ರಿಲ್ – ಮೇ ತಿಂಗಳಿನಲ್ಲಿ ಭಾರತಕ್ಕೆ ಆಗಮಿಸಲಿವೆ. 2022ರ ವೇಳೆಗೆ ಎಲ್ಲಾ 36 ರಫೇಲ್ ಯುದ್ಧ ವಿಮಾನಗಳು ವಾಯುಪಡೆಯ ಬತ್ತಳಿಕೆಗೆ ಸೇರ್ಪಡೆಗೊಳ್ಳಲಿವೆ.
ರಷ್ಯಾ ನಿರ್ಮಿತ ಸುಖೋಯ್ ಜೆಟ್ ಗಳ ಬಳಿಕ ಸುಮಾರು 22 ವರ್ಷಗಳ ನಂತರ ವಾಯುಪಡೆಗೆ ಸೇರ್ಪಡೆಗೊಳ್ಳಲಿರುವ ಪ್ರಥಮ ವಿದೇಶಿ ನಿರ್ಮಿತ ಯುದ್ಧ ವಿಮಾನಗಳೆಂಬ ಹೆಗ್ಗಳಿಕೆಗೂ ರಫೇಲ್ ಪಾತ್ರವಾಗಲಿದೆ. ರಫೇಲ್ ಯುದ್ಧ ವಿಮಾನಗಳನ್ನು ತನ್ನ ಸೇವೆಗೆ ಬಳಸಿಕೊಳ್ಳಲು ಭಾರತೀಯ ವಾಯುಪಡೆ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.