Advertisement

ರಕ್ಷಣಾ ಸಚಿವರ ಇರಾನ್‌ ಭೇಟಿ ಮಹತ್ವದ ನಡೆ

01:53 AM Sep 09, 2020 | Hari Prasad |

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಇರಾನ್‌ಗೆ ಭೇಟಿ ನೀಡಿ, ಅಲ್ಲಿನ ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಿದ್ದು ನಿಜಕ್ಕೂ ಮಹತ್ವದ ಬೆಳವಣಿಗೆಯೇ ಸರಿ.

Advertisement

ಈ ಭೇಟಿಯು ಹಲವು ಕಾರಣಗಳಿಗಾಗಿ ಪ್ರಮುಖವಾಗಿದೆ. ಅದರಲ್ಲೂ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಯಾವುದೇ ರೀತಿಯಲ್ಲೂ ದುರ್ಬಲವಾಗಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಇದು ಜಗತ್ತಿಗೆ ಕಳುಹಿಸಿದೆ.

ಹಾಗೆ ನೋಡಿದರೆ ರಾಜನಾಥ್‌ ಸಿಂಗ್‌ ಅವರ ಇರಾನ್‌ ಭೇಟಿ ಪೂರ್ವ ನಿರ್ಧರಿತವೇನೂ ಆಗಿರಲಿಲ್ಲ. ಶಾಂಘೈ ಸಹಯೋಗ ಸಂಘಟನೆಯ ಶೃಂಗದಲ್ಲಿ ಭಾಗವಹಿಸಲು ಮಾಸ್ಕೋಗೆ ತೆರಳಿದ್ದ ಅವರು, ಇರಾನ್‌ನ ರಕ್ಷಣಾ ಮಂತ್ರಿ ಅಮೀರ್‌ ಹಾತ್ಮಿ ಅವರ ಮಾತಿಗೆ ಓಗೊಟ್ಟು ಟೆಹ್ರಾನ್‌ಗೆ ತೆರಳಿದ್ದಾರೆ.

ಕಳೆದ ಕೆಲವು ಸಮಯದಿಂದ ಅಮೆರಿಕ ‘ಇರಾನ್‌ನಿಂದ ಅಂತರ ಕಾಯ್ದುಕೊಳ್ಳುವಂತೆ’ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತನ್ನ ಮಿತ್ರ ರಾಷ್ಟ್ರಗಳ ಮೇಲೆ ಒತ್ತಡ ಹೇರುತ್ತಲೇ ಇದೆ. ದುರದೃಷ್ಟವಶಾತ್‌, ಭಾರತ ಕೂಡ ಕೆಲವು ವಿಚಾರಗಳಲ್ಲಿ ಕೆಲವು ದಿನಗಳಿಂದ ಇರಾನ್‌ನೊಂದಿಗಿನ ವ್ಯವಹಾರದಲ್ಲಿ ತುಸು ಹಿಂದಡಿಯನ್ನಂತೂ ಇಟ್ಟಿತ್ತು.

ಚಾಬಹಾರ್‌ ಬಂದರು ನಿರ್ಮಾಣದಲ್ಲಿ ಇರಾನ್‌ನಲ್ಲಿ ಭಾರತ ಹೂಡಿಕೆ ಮಾಡಿದೆ. ಅಲ್ಲದೇ ಇರಾನ್‌ ಭಾರತದ ಪ್ರಮುಖ ತೈಲ ರಫ್ತುದಾರ ರಾಷ್ಟ್ರಗಳಲ್ಲೂ ಒಂದು. ಎಲ್ಲಕ್ಕಿಂತ ಹೆಚ್ಚಾಗಿ ಎರಡೂ ರಾಷ್ಟ್ರಗಳ ನಡುವೆ ದಶಕಗಳ ಬಾಂಧವ್ಯವಿದೆ. ಆದರೆ ಈ ಸಂಬಂಧಕ್ಕೆ ಅಡಚಣೆಯುಂಟುಮಾಡುವ ಕೆಲಸವನ್ನು ಅತ್ತ ಅಮೆರಿಕ ಹಾಗೂ ಇತ್ತ ಚೀನ ಮಾಡುತ್ತಿವೆ. ಚೀನದ ಒತ್ತಡಕ್ಕೆ ಮಣಿದು ಇರಾನ್‌ ಚಾಬಹಾರ್‌ ರೈಲ್ವೇ ಯೋಜನೆಯಿಂದ ಭಾರತವನ್ನು ದೂರವಿಡುವ ನಿರ್ಧಾರಕ್ಕೆ ಬಂದಿತ್ತು. ಇವನ್ನೆಲ್ಲ ಗಮನಿಸಿದಾಗ, ಎರಡೂ ರಾಷ್ಟ್ರಗಳ ನಡುವಿನ ಸ್ನೇಹ ಹಳಸುತ್ತಿದೆಯೇನೋ ಎನ್ನುವಂಥ ಭಾವನೆ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿಯೇ ರಾಜನಾಥ್‌ ಸಿಂಗ್‌ ಅವರ ಇರಾನ್‌ ಭೇಟಿ, ಅಮೆರಿಕ ಹಾಗೂ ಚೀನಕ್ಕೆ ಪ್ರಬಲ ಸಂದೇಶವನ್ನಂತೂ ಕಳುಹಿಸಿದೆ.

Advertisement

ಇರಾನ್‌ ಮತ್ತು ಭಾರತದ ನಡುವೆ ದಶಕಗಳಿಂದ ಆರ್ಥಿಕ, ಸಾಮಾಜಿಕ- ಸಾಂಸ್ಕೃತಿಕ ಸಂಬಂಧಗಳು ಇವೆ. ಎರಡೂ ಪ್ರದೇಶಗಳ ನಡುವಿನ ವ್ಯಾಪಾರ ಮೈತ್ರಿಗೆ ಶತಮಾನಗಳ ಇತಿಹಾಸವಿದೆ. ಇರಾನಿ ವಿದ್ಯಾರ್ಥಿಗಳ ನೆಚ್ಚಿನ ಶೈಕ್ಷಣಿಕ ತಾಣಗಳಲ್ಲಿ ಭಾರತವೂ ಒಂದು. ಭಾರತ ಇರಾನ್‌ನಿಂದ ಪ್ರಮುಖವಾಗಿ ತೈಲ-ಅನಿಲ ಖರೀದಿಸಿದರೆ, ಇರಾನ್‌ ಭಾರತದಿಂದ ಔಷಧಗಳು, ಬೃಹತ್‌ ಯಂತ್ರೋಪಕರಣಗಳು ಹಾಗೂ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತದೆ. ಸಾಮರಿಕ ದೃಷ್ಟಿಕೋನದಿಂದಲೂ ಸಹ ಎರಡೂ ರಾಷ್ಟ್ರಗಳ ನಡುವೆ ದಶಕಗಳ ಮೈತ್ರಿಯಿದೆ.

ಬದಲಾಗುತ್ತಿರುವ ಜಾಗತಿಕ ಪರಿದೃಶ್ಯದಲ್ಲಿ ಭಾರತ ಮತ್ತು ಇರಾನ್‌ ಪರಸ್ಪರ ಸಹಕಾರದ ಮಹತ್ವವನ್ನು ಅರಿತಿವೆ. ಅಫ್ಘಾನಿಸ್ಥಾನದ ವಿಚಾರದಲ್ಲಿ ಎರಡೂ ರಾಷ್ಟ್ರಗಳ ನಡುವೆ ಮತ್ತಷ್ಟು ಮಾತುಕತೆ ನಡೆಯಬೇಕಿದೆ. ಅಫ್ಘಾನಿಸ್ಥಾನದಲ್ಲಿ ಅಮೆರಿಕನ್‌ ಪಡೆಗಳ ಶಕ್ತಿ ಕಡಿಮೆಯಾಗುತ್ತಾ ಸಾಗುತ್ತಿರು ವಂತೆಯೇ ಅಲ್ಲಿ ಮತ್ತೆ ತಾಲಿಬಾನ್‌ ಬೆಳೆಯುತ್ತಿದೆ. ತಾಲಿಬಾನಿಗಳು ಬೆಳೆಯುವುದು, ಅಫ್ಘಾನಿಸ್ಥಾನ ಉಗ್ರರ ಕಪಿಮುಷ್ಠಿಗೆ ಸಿಲುಕುವುದು ಇರಾನ್‌ ಹಾಗೂ ಭಾರತದ ಭದ್ರತೆಗೂ ಸವಾಲು ಒಡ್ಡುವಂಥ ಸಂಗತಿ. ಈ ನಿಟ್ಟಿನಲ್ಲಿಯೇ ಇರಾನ್‌ನೊಂದಿಗಿನ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ನಡೆದ ಈ ಭೇಟಿ ಮಹತ್ವ ಪಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next