ನವದೆಹಲಿ:ದೇಶದ ಗಡಿ ರಕ್ಷಣೆ ಹಾಗೂ ಸೇನೆಗೆ ಹೆಚ್ಚಿನ ಒತ್ತು ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ 7 ರಾಜ್ಯ/ಕೇಂದ್ರಾಡಳಿತ ಪ್ರದೇಶಕ್ಕೆ ಸೇನಾ ಸಾರಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಗಡಿ ರಸ್ತೆಗಳ ಸಂಸ್ಥೆ(ಬಾರ್ಡರ್ ರೋಡ್ಸ್ ಆರ್ಗನೈಷೇಶನ್) ನಿರ್ಮಿಸಿದ 44 ಸೇತುವೆಗಳನ್ನು ಸೋಮವಾರ (ಅಕ್ಟೋಬರ್ 12,2020) ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ 44 ಸೇತುವೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು.
ಕೋವಿಡ್ 19 ಸೋಂಕಿನಿಂದಾಗಿ ದೇಶದಲ್ಲಿ ಹಲವಾರು ಸಮಸ್ಯೆಗಳು ತಲೆದೋರಿರುವ ಸಮಯದಲ್ಲಿ ಪಾಕಿಸ್ತಾನ ಮತ್ತು ಚೀನಾ ಉಭಯ ದೇಶಗಳ ಜತೆ ಹಂಚಿಕೊಂಡಿರುವ ಏಳು ಸಾವಿರ ಕಿಲೋ ಮೀಟರ್ ಗಳಷ್ಟು ಉದ್ದದ ಗಡಿ ಪ್ರದೇಶದಲ್ಲಿ ವಿವಾದ ಹುಟ್ಟುಹಾಕಿರುವುದಾಗಿ ಕಿಡಿಕಾರಿದರು.
ಪಶ್ಚಿಮ, ಉತ್ತರ ಹಾಗೂ ಈಶಾನ್ಯ ರಾಜ್ಯಗಳ ಪ್ರದೇಶದಿಂದ ಸೇನಾ ಹಾಗೂ ನಾಗರಿಕ ಸಾರಿಗೆಗೆ ಅನುಕೂಲವಾಗುವ ನೆಲೆಯಲ್ಲಿ ಈ ಸೇತುವೆಗಳನ್ನು ನಿರ್ಮಿಸಲಾಗಿದೆ. ವರ್ಷವಿಡೀ ಸಾರಿಗೆ ವ್ಯವಸ್ಥೆ ಲಭ್ಯವಿಲ್ಲದ ಪ್ರದೇಶದಲ್ಲಿ ನಮ್ಮ ಯೋಧರನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜಿಸಲಾಗಿದೆ ಎಂದು ಸಿಂಗ್ ಹೇಳಿದರು.
ಇದನ್ನೂ ಓದಿ:ಚಲಿಸುತ್ತಿದ್ದ ಲಾರಿಯ ಸ್ಟಿಯರಿಂಗ್ ತುಂಡಾಗಿ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು
ಕೋವಿಡ್ 19 ಸೋಂಕು ಹಾಗೂ ಗಡಿಯಲ್ಲಿ ಸಂಘರ್ಷದ ಸಮಸ್ಯೆಯನ್ನು ಎದುರಿಸುತ್ತಿದ್ದರು ಕೂಡಾ ಭಾರತ ದೃಢಸಂಕಲ್ಪದ ಪ್ರತಿಕ್ರಿಯೆಯನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾವು ಮೂಲಭೂತ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಿದರು.