Advertisement

ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖ: ಕೆ. ಡಿ. ಶೆಟ್ಟಿ

06:15 PM Nov 18, 2019 | Suhan S |

ನವಿಮುಂಬಯಿ, ನ. 17: ಇಂದಿನ ಕಾರ್ಯಕ್ರಮವನ್ನು ಕಾಣುವಾಗ ತುಂಬಾ ಸಂತೋಷವಾಗುತ್ತಿದೆ. ನಾವು ಪ್ರಯತ್ನಿಸಿದರೆ ಯಾವುದೇ ಕಾರ್ಯವನ್ನು ಯಶಸ್ವಿ ಮಾಡಬಹುದೆಂದು ಇಂದಿನ ಬೃಹತ್‌ ಕ್ರೀಡಾಕೂಟವನ್ನು ನೋಡುವಾಗ ಗೊತ್ತಾಗುತ್ತದೆ. ಈ ಜಾಗದಲ್ಲಿ ಇಷ್ಟು ಸ್ಪರ್ಧೆಗಳನ್ನು ಆಯೋಜಿಸಿದ ಈ ಯುವ ಸಮೂಹದ ಶ್ರಮ ಅಭಿನಂದನೀಯ. ದೇವಿಯ ಅನುಗ್ರಹದಿಂದಲೇ ಇದುಸಾಧ್ಯವಾಗಿದೆ. ಈ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲದೆ ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮ ಗಳ ಜತೆಗೆ ಕ್ರೀಡೋತ್ಸವವು ಜರಗುತ್ತಿರುವುದು ಮಾದರಿಯಾಗಿದೆ ಎಂದು ಭವಾನಿ ಫೌಂಡೇಷನ್‌ ಮುಂಬಯಿ ಸಂಸ್ಥಾಪ ಕಾಧ್ಯಕ್ಷ ಕುಸುಮೋದರ ಡಿ. ಶೆಟ್ಟಿ ಅವರು ಅಭಿಪ್ರಾಯಿಸಿದರು.

Advertisement

ನ. 17ರಂದು ಬೆಳಗ್ಗೆ ಶ್ರೀ ಕ್ಷೇತ್ರ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಸಭಾಂಗಣ ದಲ್ಲಿ ದೇವಾಲಯದ ಅಂಗಸಂಸ್ಥೆ ಶ್ರೀ ಮೂಕಾಂಬಿಕಾ ಚಾರಿಟೆಬಲ್‌ ಮಂಡಳದ ಆಶ್ರಯದಲ್ಲಿ ಉಪಸಮಿತಿಗಳ ಸಹಯೋಗ ದೊಂದಿಗೆ ನಡೆದ ದ್ವಿತೀಯ ವಾರ್ಷಿಕ ಶ್ರೀ ಮೂಕಾಂಬಿಕಾ ಟ್ರೋಫಿ-2019 ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸೋಲು-ಗೆಲುವು ಮುಖ್ಯವಲ್ಲ. ಸ್ಪರ್ಧಿಸುವುದು ಮುಖ್ಯ. ಇಲ್ಲಿ ಸ್ಪರ್ಧಿಸಲು ಬಂದ ಎಲ್ಲ ತಂಡದವರಿಗೂ ನನ್ನ ಅಭಿನಂದನೆಗಳು. ಕ್ರೀಡಾಳು ಕ್ರೀಡಾಸ್ಪೂರ್ತಿಯನ್ನು ಮೆರೆಯಬೇಕು. ನಿಮಗೆಲ್ಲರಿಗೂ ತಾಯಿ ಮೂಕಾಂಬಿಕೆಯ ಅನುಗ್ರಹ ಸದಾಯಿರಲಿ ಎಂದರು.

ದೇವಾಲಯದ ಅಧ್ಯಕ್ಷರಾದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳಾಗಿ ಶ್ರೀ ಶನೀಶ್ವರ ಮಂದಿರ ನೆರೂಲ್‌ನ ಅಧ್ಯಕ್ಷ ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ, ಮಂದಿರದ ಪ್ರಧಾನ ಅರ್ಚಕ ಗುರುಪ್ರಸಾದ್‌ ಭಟ್‌, ಸತೀಶ್‌ ಕ್ಯಾಟರರ್ ಮತ್ತು ಡೆಕೊರೇಟರ್ನ ಮಾಲಕ ಸತೀಶ್‌ ಆರ್‌. ಶೆಟ್ಟಿ, ಜತೆ ಕಾರ್ಯದರ್ಶಿ ತಾಳಿ ಪಾಡಿಗುತ್ತು ಭಾಸ್ಕರ್‌ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ್‌ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್‌ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಹರೀಶ್‌ ಶೆಟ್ಟಿ ಕುರ್ಕಾಲ್‌, ಹರೀಶ್‌ ಶೆಟ್ಟಿ ಪಡುಬಿದ್ರೆ, ಪದ್ಮ ನಾಭ ಸಿ. ಶೆಟ್ಟಿ, ಉದ್ಯಮಿ ಗಿರೀಶ್‌ ಶೆಟ್ಟಿ, ಉಪ ಸಮಿತಿಯ ಕಾರ್ಯಾಧ್ಯಕ್ಷ ಪ್ರಶಾಂತ್‌ ಕೆ. ಕುಂದರ್‌, ಉಪ ಕಾರ್ಯಾಧ್ಯಕ್ಷ ಸಂದೀಪ್‌ ಡಿ. ಶೆಟ್ಟಿ, ಸದಸ್ಯರಾದ ಪ್ರವೀಣ್‌ ಶೆಟ್ಟಿ, ಸಂತೋಷ್‌ ಆರ್‌. ಶೆಟ್ಟಿ, ಧೀರಜ್‌ ಕೋಟ್ಯಾನ್‌, ಮನೋಜ್‌ ಎ.ಶೆಟ್ಟಿ, ಸಂದೀಪ್‌ ಜಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವೀಣಾ ಸಿ. ಕರ್ಕೇರ ಉಪಸ್ಥಿತರಿದ್ದರು. ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಕ್ರೀಡಾ ಕೂಟವನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ್‌ ಎಸ್‌. ಕೋಟ್ಯಾನ್‌ ಅತಿಥಿ- ಗಣ್ಯರನ್ನು ಸ್ವಾಗತಿಸಿದರು.

ಪದಾಧಿಕಾರಿಗಳು ಗಣ್ಯರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಭವಾನಿ ಫೌಂಡೇಷನ್‌ ಇದರ ಸಂಸ್ಥಾಪಕ ಕೆ. ಡಿ. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಶ್ರೀ ಶನೀಶ್ವರ ಮಂದಿರ ನೆರೂಲ್‌ನ ಅಧ್ಯಕ್ಷ ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ಅವರು ಮಾತನಾಡಿ, ನಮ್ಮ ಜೀವನದಲ್ಲಿ ಕ್ರೀಡೆ ಅತಿ ಅವಶ್ಯವಾಗಿದೆ. ಕ್ರೀಡೆಯಲ್ಲಿ ಸತತವಾಗಿ ಪಾಲ್ಗೊಳ್ಳುವುದರಿಂದ ನಮ್ಮ ಆರೋಗ್ಯ ವೃದ್ಧಿಸುತ್ತದೆ. ಇಲ್ಲಿ ಎರಡನೇ ವರ್ಷದ ಕ್ರೀಡೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಈ ದೇವಾಲಯದಲ್ಲಿ ನಿರಂತರ ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದೇ ರೀತಿ ನಿರಂತರ ನಡೆಯುತ್ತಿರಲಿ. ನಿಮಗೆಲ್ಲರಿಗೂ ಶನಿ ದೇವರ ಅನುಗ್ರಹ ಸದಾಯಿರಲಿ ಎಂದರು.

ಕ್ರೀಡೋತ್ಸವದಲ್ಲಿ ಪುರುಷರಿಗಾಗಿ ಅಂಡರ್‌ ಆರ್ಮ್ ಬಾಕ್ಸ್‌ ಕ್ರಿಕೆಟ್‌, ಪುರುಷರಿಗೆ ಮತ್ತು ಮಹಿಳೆಯರಿಗಾಗಿ ಹಗ್ಗಜಗ್ಗಾಟ ಮತ್ತು ಮಹಿಳೆಯರಿಗಾಗಿ ತ್ರೋಬಾಲ್‌ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮುಂಬಯಿ ನವಿಮುಂಬಯಿ ತುಳು-ಕನ್ನಡಿಗರಿಗಾಗಿ ಆಯೋಜಿಸಿದ ಈ ಕ್ರೀಡಾಸ್ಪರ್ಧೆಯು ನಡೆದಿದ್ದು, ಪ್ರತಿಯೊಂದುಸ್ಪರ್ಧೆಗಳಲ್ಲೂ 16 ತಂಡಗಳು ಭಾಗ ವಹಿಸಿದ್ದವು. ಸುರೇಶ್‌ ಕೋಟ್ಯಾನ್‌ ಅವರು ಕಾರ್ಯಕ್ರಮ ನಿರ್ವಹಿಸಿದರು.

Advertisement

ಮಂಡಳದ ಪ್ರಧಾನ ಕಾರ್ಯದರ್ಶಿ ಹರೀಶ್‌ ಶೆಟ್ಟಿ ಪಡುಬಿದ್ರೆ ವಂದಿಸಿದರು. ಗಣ್ಯರು ಬಲೂನ್‌ ಹಾರಿಸಿ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಳುಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next