ಬೀದರ: ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದ ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆ ಮುಗಿಯುತ್ತಿದ್ದಂತೆ ಈಗ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಪ್ರಬಲ ಪೈಪೋಟಿ ನಡುವೆಯೂ ಮತಗಳ ವಿಭಜನೆ ಲೆಕ್ಕದಲ್ಲಿ ಕಾಂಗ್ರೆಸ್‌ಗೆ ಲಾಭವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಬಸವಣ್ಣನ ಕರ್ಮಭೂಮಿಯಲ್ಲಿ ಹಿಡಿತ ಸಾಧಿಸಬೇಕೆಂದು ಪಣ ತೊಟ್ಟು ಆಡಳಿತಾರೂಢ ಬಿಜೆಪಿ, ವಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಚುನಾವಣೆ ಪ್ರಚಾರ ನಡೆಸಿವೆ. ಬಿಜೆಪಿಯಿಂದ ಶರಣು ಸಲಗರ, ಕಾಂಗ್ರೆಸ್‌ನಿಂದ ಮಾಲಾ ನಾರಾಯಣರಾವ್, ಜೆಡಿಎಸ್‌ನಿಂದ ಸೈಯದ್ ಯಸ್ರಬ್ ಅಲಿ ಖಾದ್ರಿ, ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಮತದಾನದ ಕೊನೆ ಹಂತದವರೆಗೂ ವೋಟಿನ ಬೇಟೆ ನಡೆಸಿದ್ದು, ಮತದಾರರು ಈಗ ಯಾರ ಕೈ ಹಿಡಿದಿದ್ದಾರೆ ಎಂಬ ಆಂತರಿಕ ಸಮೀಕ್ಷೆಯಲ್ಲಿ ತೊಡಗಿದ್ದಾರೆ.
ಮತದಾನ ನಡೆದ ಮತಗಟ್ಟೆ ಕೇಂದ್ರಗಳ ಪಟ್ಟಿ ಹಿಡಿದಿರುವ ಮುಖಂಡರು ಗೆಲುವಿನ ಲೆಕ್ಕಾಚಾರ ನಡೆಸಿದ್ದಾರೆ. ಬೂತ್ ಮಟ್ಟದಲ್ಲಿ ಜಾತಿವಾರು ಮತದಾರರ ಸಂಖ್ಯೆ, ಯಾವ ಪಕ್ಷಕ್ಕೆ ಬೆಂಬಲ ಸಿಕ್ಕಿದೆ ಎಂಬಿತ್ಯಾದಿ ಪ್ರಶ್ನೆ ಮುಂದಿಟ್ಟುಕೊಂಡು ಮಾಹಿತಿ ಕಲೆ ಹಾಕುತ್ತಿದ್ದಾರೆ. ತಮ್ಮ ಪಕ್ಷಗಳ ಆಂತರಿಕ ಸಮೀಕ್ಷೆ, ವರದಿ ನೋಡಿ ಕಾರ್ಯಕರ್ತರು ನಮ್ಮದೇ ಪಕ್ಷದ ಅಭ್ಯರ್ಥಿ ಗೆಲುವು ಖಚಿತ ಎಂದು ಬೀಗುತ್ತಿದ್ದಾರೆ. ಆದರೆ ಇದಕ್ಕೆ ಸ್ಪಷ್ಟ ಉತ್ತರ ಮಾತ್ರ ಮೇ 2ರ ಫಲಿತಾಂಶದಂದೇ ಸಿಗಲಿದೆ.
ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಶೇ.4 ಮತದಾನ (ಶೇ.61.49) ಕಡಿಮೆ ದಾಖಲಾಗಿದ್ದು, ಮತ ವಿಭಜನೆ ಸಾಧ್ಯತೆ ದಟ್ಟವಾಗಿದ್ದು, ಬಿಜೆಪಿಗೆ ಹೊಡೆತ ಬೀಳಬಹುದು ಎನ್ನಲಾಗುತ್ತಿದೆ. ಬಿಜೆಪಿ ಸಾಂಪ್ರದಾಯಿಕ ಲಿಂಗಾಯತ ಮತ್ತು ಮರಾಠಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಸ್ಪರ್ಧೆಯಿಂದ ನಗರ ಪ್ರದೇಶದಲ್ಲಿ ಈ ಮತಗಳ ವಿಭಜನೆಯಾಗಿದೆ. ಗ್ರಾಮೀಣ ಭಾಗದಲ್ಲಿ ಈ ಸಮುದಾಯದ ಮತ ಪ್ರಮಾಣ ಈ ಬಾರಿ ಕಡಿಮೆಯಾಗಿದ್ದು, ಇದು ಬಿಜೆಪಿ ಮತಗಳ ಕುಸಿತಕ್ಕೆ ಕಾರಣವಾಗಬಹುದು.
ಮಾಜಿ ಸಚಿವ ಪಿಜಿಆರ್ ಸಿಂಧ್ಯಾ “ಕೈ’ ಪರ ಪ್ರಚಾರ ಹಿನ್ನೆಲೆ ಪಕ್ಷಕ್ಕೆ ವರ ಆಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್ ಮುಸ್ಲಿಂ ಸಮುದಾಯದ ಮತ ನೆಚ್ಚಿಕೊಂಡಿದೆ. ಆದರೆ ಜೆಡಿಎಸ್‌ನಿಂದ ಮುಸ್ಲಿಂ ಅಭ್ಯರ್ಥಿ ಸ್ಪರ್ಧೆಯಿಂದ “ಕೈ’ಗೆ ಹಿನ್ನಡೆಯಾಗಬಹುದು ಎಂಬ ಲೆಕ್ಕ ತಪ್ಪಿದಂತಿದೆ. ನಗರ ಪ್ರದೇಶದಲ್ಲಿ ಮುಸ್ಲಿಂ ವೋಟ್ ಗಳು ಜೆಡಿಎಸ್‌ನತ್ತ ಬಿದ್ದಿದ್ದರೂ ಹಳ್ಳಿಗಳಲ್ಲಿ ಕಾಂಗ್ರೆಸ್ ನತ್ತ ವಾಲಿದೆ. ಜತೆಗೆ ಕೋಲಿ-ಕಬ್ಬಲಿಗ ಮತಗಳು ಸಹ “ಕೈ’ ಹಿಡಿದಿವೆ ಎಂಬ ಜನಾಭಿಪ್ರಾಯ ವ್ಯಕ್ತವಾಗುತ್ತಿದೆ.
ಬಸವಕಲ್ಯಾಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಗೆಲ್ಲುವುದು ನಿಶ್ಚಿತ. ಬಿಜೆಪಿ ಅಧಿಕಾರದ ದುರ್ಬಳಕೆ ಜತೆಗೆ ಹಣದ ಹೊಳೆ ಹರಿಸಿ, ಮತದಾರರ ಖರೀದಿಗೆ ಮುಂದಾಗಿದೆ. ಆದರೆ, ಪ್ರಬುದ್ಧ ಮತದಾರರು ಈ ಅಕ್ರಮದ ನಡುವೆಯೂ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಎಲ್ಲ ವರ್ಗದವರ ಅಭಿವೃದ್ಧಿ ಪರ ನಿಂತಿರುವ ಜಾತ್ಯತೀತ ಪಕ್ಷವಾಗಿರುವುದರಿಂದ ಮತದಾರರು ಜಾತಿ, ಧರ್ಮ ಮರೆತು ನಮ್ಮ ಅಭ್ಯರ್ಥಿ ಕೈ ಹಿಡಿದಿದ್ದಾರೆ.
*ಈಶ್ವರ ಖಂಡ್ರೆ, ಕಾರ್ಯಾಧ್ಯಕ್ಷರು, ಕೆಪಿಸಿಸಿ
ಬಸವಣ್ಣನ ಕಾರ್ಯಕ್ಷೇತ್ರ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ತೀವ್ರ ಪೈಪೋಟಿ ನಡುವೆ ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ ಗೆಲ್ಲುವ ವಿಶ್ವಾಸವಿದೆ. ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಸಾಲ ಮನ್ನಾ ಸೇರಿ ರೈತರ ಹಿತಕ್ಕಾಗಿ ರೂಪಿಸಿದ್ದ ಕಾರ್ಯಕ್ರಮಗಳನ್ನು ಜನ ಇಂದಿಗೂ ಮರೆತಿಲ್ಲ. ಗ್ರಾಮೀಣ ಭಾಗವಷ್ಟೇ ಅಲ್ಲ ನಗರ ಪ್ರದೇಶದಲ್ಲೂ ಪಕ್ಷಕ್ಕೆ ಹೆಚ್ಚಿನ ಬೆಂಬಲ ಸಿಕ್ಕಿದೆ. ಅಲ್ಪಸಂಖ್ಯಾತರ ಜತೆ ಎಲ್ಲ ಸಮುದಾಯಗಳ ಮತಗಳು ಪಕ್ಷಕ್ಕೆ ಬಿದ್ದಿವೆ.
*ಬಂಡೆಪ್ಪ ಖಾಶೆಂಪುರ, ಜೆಡಿಎಸ್ ಶಾಸಕ
*ಶಶಿಕಾಂತ ಬಂಬುಳಗೆ