Advertisement

ಸೋಲು; ಅಭಿವೃದ್ಧಿ ಕೆಲಸಕ್ಕಾಗಿ ಜನ ನೀಡಿದ ಚಾಟಿ ಏಟಿದು: ಜಿಟಿಡಿ

07:21 AM May 26, 2019 | Lakshmi GovindaRaj |

ಬೆಂಗಳೂರು: ಲೋಕಸಭಾ ಚುನಾವಣೆಯ ಸೋಲು ಎಲ್ಲರಿಗೂ ದೊಡ್ಡ ಪಾಠವಾಗಿದೆ. ಅಭಿವೃದ್ಧಿ ಪರ ಸರ್ಕಾರ ನಡೆಸಿ ಎಂದು ಜನರೇ ಚಾಟಿ ಏಟು ನೀಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

Advertisement

ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಸಿಇಟಿ ಫ‌ಲಿತಾಂಶ ಘೋಷಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪು ಅಂತಿಮ. ಜನತಾ ಜನಾರ್ದನನ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು.

ಈ ಸೋಲು ಎಲ್ಲರಿಗೂ ದೊಡ್ಡ ಪಾಠವಾಗಿದೆ. ಆಡಳಿತ ನಡೆಸಿದ ಒಂದು ವರ್ಷಕ್ಕೆ ಜನರು ತೀರ್ಪು ಕೊಟ್ಟಿದ್ದಾರೆ. ಮುಂದಿನ ನಾಲ್ಕು ವರ್ಷ ಅಭಿವೃದ್ಧಿ ಕಾರ್ಯ ಮಾಡಿ ಎಂದು ಚಾಟಿ ಏಟು ನೀಡಿದ್ದಾರೆ. ಅಭಿವೃದ್ಧಿಗೆ ಇನ್ನಷ್ಟು ಗಮನ ನೀಡಲಾಗುತ್ತದೆ ಎಂದರು.

ದೇವೇಗೌಡರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೋಲಿನಿಂದ ವಿಚಲಿತವಾಗಿಲ್ಲ. ದೇವೇಗೌಡ ಅವರು ಸೋತ ತಕ್ಷಣವೇ ನಾಯಕರ ಸಭೆ ಕರೆದಿದ್ದಾರೆ. ಪ್ರಧಾನಿ ಹುದ್ದೆಯಿಂದ ಇಳಿದ ನಂತರವೂ ದೇಶ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಅವರು ಫಿನಿಕ್ಸ್‌ ಪಕ್ಷಿಯಂತೆ ಎದ್ದು ಬಂದಿದ್ದರು.

ಈಗಲೂ ಕೂಡ ಸೋಲಿನಿಂದ ಧೃತಿಗೆಟ್ಟಿಲ್ಲ. ಮತ್ತೂಮ್ಮೆ ಫಿನಿಕ್ಸ್‌ ಪಕ್ಷಿಯಂತೆ ವಾಪಸ್‌ ಬರಲಿದ್ದಾರೆ. ನಿಖೀಲ್‌ ಕುಮಾರ್‌ಸ್ವಾಮಿ ಕೂಡ ನಮ್ಮೊಂದಿಗೆ ನಿರಂತರ ಸಂಪಕ್ಷದಲ್ಲಿದ್ದಾರೆ. ಸೋಲೇ ಗೆಲುವಿನ ಸೋಪಾನ ಎಂಬಂತೆ, ಪಕ್ಷ ಸಂಘಟನೆ ಆರಂಭಿಸಿದ್ದಾರೆ. ಓಡಾಟ ನಡೆಸುತ್ತಿದ್ದಾರೆ ಎಂದರು.

Advertisement

ಪ್ರಜ್ವಲ್‌ ರೇವಣ್ಣ ಅವರು ತಾತನಿಗಾಗಿ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ, ದೇವೇಗೌಡರೆ ಆಶೀರ್ವಾದ ನೀಡಿ ಬಿಟ್ಟು ಕೊಟ್ಟ ಕ್ಷೇತ್ರವಾದ್ದರಿಂದ ಮತ್ತೆ ಅವರು ಆ ಕ್ಷೇತ್ರಕ್ಕೆ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಬಗ್ಗೆ ದೇವೇಗೌಡರೇ ಸ್ಪಷ್ಟಪಡಿಸಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲವೂ ಸರಿಯಾಗುತ್ತದೆ ಎಂದರು.

ಮೋದಿಗೆ ಅಭಿನಂದನೆ: ಜನರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಮೋದಿಯವರಿಗೆ ಅಭಿನಂದನೆಗಳು. ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯದಿಂದ ಬಿಜೆಪಿಗೆ ಬಹುಮತ ಸಿಕ್ಕಿದ್ದಲ್ಲ. ಪುಲ್ವಾಮಾ, ಏರ್‌ಸ್ಟ್ರೈಕ್‌, ಸರ್ಜಿಕ್‌ ಸ್ಟ್ರೈಕ್‌ನಿಂದ ಬಹುಮತ ಬಂದಿದೆ.

ಈಗ ಅದೆಲ್ಲ ಮುಗಿದಿದೆ. ಇನ್ನಾದರೂ ಅಭಿವೃದ್ಧಿಯತ್ತ ಗಮನ ಹರಿಸಲಿ. ರಾಜ್ಯ ಸರ್ಕಾರದಿಂದ ನೀಡಿದ್ದ ಪ್ರಸ್ತಾವನೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಿ. ರಾಜ್ಯದ ರೈತರಿಗೆ ಹಾಗೂ ಬರಗಾಲಕ್ಕೆ ನೀಡಬೇಕಿರುವ ಅನುದಾನ ಬಿಡುಗಡೆ ಮಾಡಲಿ ಎಂದು ಜಿಟಿಡಿ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next